ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ಕೆಡವಲು ಕಾಂಗ್ರೆಸ್‌ ಶಾಸಕರಿಗೆ ₹100 ಕೋಟಿ ಆಫರ್‌: ರವಿಕುಮಾರ್‌ ಆರೋಪ

ಮಂಡ್ಯದ ಶಾಸಕ ರವಿಕುಮಾರ್‌ ಗಂಭೀರ ಆರೋಪ
Published 25 ಆಗಸ್ಟ್ 2024, 23:30 IST
Last Updated 25 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿಯ ಬ್ರೋಕರ್‌ಗಳು ಪ್ರತಿನಿತ್ಯ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ₹50 ಕೋಟಿಯಿಂದ ₹100 ಕೋಟಿವರೆಗೆ ಆಫರ್‌ ಮಾಡುತ್ತಿದ್ದಾರೆ. ಮೊನ್ನೆಯೂ ಕೆಲ ಕಾಂಗ್ರೆಸ್‌ ಶಾಸಕರಿಗೆ ಕರೆ ಮಾಡಿ, ₹100 ಕೋಟಿ ರೆಡಿ ಇದೆ. ಎಲ್ಲಿಗೆ ಬರ್ತೀರಾ ಎಂದು ಕೇಳಿದ್ದಾರೆ’ ಎಂದು ಮಂಡ್ಯ ಕಾಂಗ್ರೆಸ್‌ ಶಾಸಕ ಪಿ.ರವಿಕುಮಾರ್‌ (ರವಿ ಗಣಿಗ) ದೂರಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರ ಕೆಡವಲು ಸಂತೋಷ್, ಶೋಭಾ ಕರಂದ್ಲಾಜೆ, ಎಚ್‌.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಸೇರಿ ಗ್ಯಾಂಗ್‌ ಮಾಡಿಕೊಂಡಿದ್ದಾರೆ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪ ಮಾಡಿದರು.

‘ಕಾಂಗ್ರೆಸ್‌ನ 50 ಶಾಸಕರನ್ನು ಸಂಪರ್ಕಿಸಿದ್ದಾರೆ. ನನ್ನನ್ನೂ ಫೋನ್‌ ಮೂಲಕ ಸಂಪರ್ಕಿಸಿ ಆಫರ್ ಮಾಡಿದ್ದಾರೆ. ನನ್ನ ಬಳಿ ಕಾಲ್ ರೆಕಾರ್ಡ್ ಇದೆ. ಇನ್ನೂ ಇದರ ಬಗ್ಗೆ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದೇವೆ. ರೆಡ್ ಹ್ಯಾಂಡ್ ಆಗಿ ಐಟಿ, ಇ.ಡಿ ಅವರಿಗೆ ಹಿಡಿದು ಕೊಡುತ್ತೇವೆ’ ಎಂದು ತಿಳಿಸಿದರು.

‘ನಮ್ಮ ಸರ್ಕಾರ ಬಂಡೆಯಂತೆ ಸ್ಥಿರವಾಗಿದೆ. ಯಾರೂ ಕೆಡವಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಅವಧಿ ಪೂರೈಸಲಿದೆ’ ಎಂದು ಹೇಳಿದರು. 

ರವಿಕುಮಾರ ವಿರುದ್ಧ ದೂರು

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ಬೀಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಇತರ ಮುಖಂಡರು ಕಾಂಗ್ರೆಸ್ ಶಾಸಕರಿಗೆ ₹50 ರಿಂದ ₹100 ಕೋಟಿ ಆಮಿಷವೊಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಮಂಡ್ಯ ಶಾಸಕ ರವಿಕುಮಾರ್‌ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇಲ್ಲಿನ ಉಪನಗರ ಠಾಣೆಗೆ ಭಾನುವಾರ ದೂರು ನೀಡಿದರು.  ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರವಿಕುಮಾರ್‌ ಅವರ ಆರೋಪ ಸತ್ಯಕ್ಕೆ ದೂರ. ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ಲಂಚ ಕೊಡುವುದು ಲಂಚ ಪಡೆಯುವುದು ಲಂಚದ ಮಾಹಿತಿ ಮುಚ್ಚಿಡುವುದು ಅಪರಾಧ. ಯಾರು ಯಾವಾಗ ಎಲ್ಲಿ ಆಮಿಷವೊಡ್ಡಿದ್ದಾರೆ? ಮುಂಗಡವಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು  ಅವರು ಬಹಿರಂಗಪಡಿಸಬೇಕು’ ಎಂದು ಸವಾಲು ಹಾಕಿದರು. ‘ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ. ರವಿಕುಮಾರ್‌ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ನಮ್ಮ ಪಕ್ಷದ ನಾಯಕರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ತಮ್ಮ ನಾಲಿಗೆ ಹರಿಬಿಡಬಾರದು’ ಎಂದರು. ‘ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರಲ್ಲಿ ಗೊಂದಲ ಸೃಷ್ಟಿ ಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಕೆಲವು ಸಚಿವರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT