ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ಸಂಪುಟ ಪುನರ್ ರಚನೆ ಸುದ್ದಿ ಬೆನ್ನಲ್ಲೇ ಹೈಕಮಾಂಡ್‌ ಭೇಟಿ ಮಾಡಿದ ದೇಶಪಾಂಡೆ

Published 8 ಆಗಸ್ಟ್ 2024, 15:01 IST
Last Updated 8 ಆಗಸ್ಟ್ 2024, 15:01 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಆಗಲಿದೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರು ಪಕ್ಷದ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. 

ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ವಾಸ್ತವ್ಯ ಹೂಡಿರುವ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದರು. 

ಸುದ್ದಿಗಾರರ ಜತೆಗೆ ಮಾತನಾಡಿದ ದೇಶಪಾಂಡೆ, ‘ಸಚಿವ ಸಂಪುಟ ಪುನರ್ ರಚನೆಯ ಊಹಾಪೋಹಗಳು ಹರಡಿವೆ. ಆದರೂ ಇಷ್ಟು ಬೇಗ ನಡೆಯಲು ಸಾಧ್ಯವಿಲ್ಲ. 50 ವರ್ಷಗಳ ರಾಜಕಾರಣದಲ್ಲಿ ಇದನ್ನೆಲ್ಲ ನೋಡುತ್ತಾ ಬಂದಿದ್ದೇನೆ. ಖರ್ಗೆ ಅವರು ನನ್ನ ಒಳ್ಳೆಯ ಸ್ನೇಹಿತರು. 40 ವರ್ಷಗಳ ಸ್ನೇಹ ಸಂಬಂಧ ಇದೆ. ಅವರನ್ನು ಭೇಟಿಯಾಗದೆ ಬೇರೆ ಯಾರನ್ನು ಭೇಟಿಯಾಗಲು ಸಾಧ್ಯ. ಈ ಸಂದರ್ಭದಲ್ಲಿ ರಾಜ್ಯದ ರಾಜಕಾರಣದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ’ ಎಂದರು. 

ಒಂಬತ್ತು ಬಾರಿಯ ಶಾಸಕರಾಗಿರುವ ದೇಶಪಾಂಡೆ ಅವರಿಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಬಳಿಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಕುರಿತು ಹಿರಿಯ ನಾಯಕ ಮಧುಸೂದನ್‌ ಮಿಸ್ತ್ರಿ ನೇತೃತ್ವದ ಸಮಿತಿಯು ಹೈಕಮಾಂಡ್‌ಗೆ ಈಗಾಗಲೇ ವರದಿ ಸಲ್ಲಿಸಿದೆ. ಹೊಂದಾಣಿಕೆ ರಾಜಕಾರಣ, ಕೆಲವು ಸಚಿವರ ನಿರಾಸಕ್ತಿಯಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ನಾಲ್ಕೈದು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಸಂಪುಟ ಪುನರ್ ರಚನೆ ಮಾಡಲು ಹೈಕಮಾಂಡ್‌ ಒಲವು ತೋರಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಗೆ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT