ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿನಯ ಕುಲಕರ್ಣಿ–ಬೈರತಿ ಸುರೇಶ್ ‘ಮಂಡಳಿ‘ ರಗಳೆ

Published 1 ಜುಲೈ 2024, 20:06 IST
Last Updated 1 ಜುಲೈ 2024, 20:06 IST
ಅಕ್ಷರ ಗಾತ್ರ

ಬೆಂಗಳೂರು: ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಮತ್ತು ಅವರ ಇಲಾಖೆ ಅಧೀನದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿರುವ‌ ಶಾಸಕ ವಿನಯ ಕುಲಕರ್ಣಿ ನಡುವಿನ ತಿಕ್ಕಾಟ ಮತ್ತಷ್ಟು ತಾರಕಕ್ಕೇರಿದೆ.

‘ಮಂಡಳಿಯಲ್ಲಿ ದುರಾಡಳಿತ ನಡೆಯುತ್ತಿದ್ದು, ಇದನ್ನು ನಾನು ಸಹಿಸುವುದಿಲ್ಲ. ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುವ ಹಕ್ಕು ಅಧ್ಯಕ್ಷನಿಗೆ ಇಲ್ಲದ ರೀತಿಯಲ್ಲಿ ದುರಾಡಳಿತ ನಡೆಯುತ್ತಿದೆ’ ಎಂದು ವಿನಯ ಕುಲಕರ್ಣಿ ಆರೋಪಿಸಿದ್ದಾರೆ.

ತಮ್ಮ ಬೆಂಬಲಿಗ ಗುತ್ತಿಗೆದಾರರ ಕಂಪನಿಯನ್ನು ಬೈರತಿ ಸುರೇಶ್ ಸೂಚನೆಯಂತೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎನ್ನುವುದು ವಿನಯ ಕುಲಕರ್ಣಿ ಆರೋಪ. ಈ ಕಾರಣಕ್ಕೆ ಅಸಮಾಧಾನಗೊಂಡಿರುವ ಅವರು, ತಮ್ಮ ಬೆಂಬಲಿಗರ ಜೊತೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದ್ದು, ಮಾತಿನ ಜಟಾಪಟಿಯೂ ನಡೆದಿದೆ ಎಂದು ಗೊತ್ತಾಗಿದೆ.

ಈ ಕುರಿತು ಶುಕ್ರವಾರ (ಜೂನ್‌ 29) ಪ್ರತಿಕ್ರಿಯಿಸಿದ್ದ ಬೈರತಿ ಸುರೇಶ್, ‘ವಿನಯ ಕುಲಕರ್ಣಿ ಜತೆ ನನಗೆ ಮನಸ್ತಾಪ ಇಲ್ಲ. ನಾವು ಜಗಳವನ್ನೂ ಆಡಿಕೊಂಡಿಲ್ಲ. ನನ್ನ ವಿರುದ್ಧ ದೂರು ಕೊಟ್ಟಿದ್ದರೆ ಅದರ ಪ್ರತಿ ಕೊಡಿ. ಆ ಬಳಿಕ ನಾನು ಮಾತನಾಡುತ್ತೇನೆ’ ಎಂದಿದ್ದರು.

ವಿನಯ ಕುಲಕರ್ಣಿ ಆರೋಪದ ಬಗ್ಗೆ ಕೇಳಿದಾಗ, ‘ಯಾರೇ ಕಳ್ಳರಿದ್ದರೂ ಅವರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇನೆ. ಈವರೆಗೆ ಯಾರನ್ನೂ ಕಪ್ಪುಪಟ್ಟಿಗೆ ಸೇರಿಸಿಲ್ಲ. ತಪ್ಪು ಮಾಡಿದವರನ್ನು ಜೈಲಿಗೂ ಕಳುಹಿಸುವೆ. ಯಾವುದೇ ಹಿಂಜರಿಕೆಯೂ ಇಲ್ಲ’ ಎಂದೂ ಹೇಳಿದ್ದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ವಿನಯ ಕುಲಕರ್ಣಿ, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಅದಕ್ಕಿಂತ ಕೆಟ್ಟ ವ್ಯವಸ್ಥೆ ಆಗುವುದು ಬೇಡವೆಂದು ನಾನು ಪತ್ರದ ಮೂಲಕ ತಿಳಿಸಿದ್ದೇನೆ. ಅಗತ್ಯಬಿದ್ದರೆ ದಾಖಲೆಗಳನ್ನೂ ಕೊಡುತ್ತೇನೆ. ಎಲ್ಲ ವಿಷಯಗಳನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು’ ಎಂದು ಪ್ರಶ್ನಿಸಿದರು.

ನಾನು ದೆಹಲಿಗೆ ಹೋಗಿದ್ದು ನಿಜ. ಪಕ್ಷದ ಮುಖಂಡರಿಗೆ ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ನನಗೆ ಯಾವ ಭಯವೂ ಇಲ್ಲ. ರಾಜೀನಾಮೆ ಕೊಡುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ.
–ವಿನಯ ಕುಲಕರ್ಣಿ, ಅಧ್ಯಕ್ಷ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

‘ಎಲ್ಲ ನಿಗಮ–ಮಂಡಳಿಗಳ ಬಗ್ಗೆ ತನಿಖೆ ಆಗಬೇಕು. ಯಾವ ಗುತ್ತಿಗೆದಾರ ಕಂಪನಿಗಳು ಅಕ್ರಮ ಮಾಡಿವೆಯೊ ಅಂಥವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಿ. ತನಿಖೆ ಮಾಡುವಂತೆ ನಾನು ಪತ್ರ ಕೊಟ್ಟು ಎರಡೂವರೆ ತಿಂಗಳು ಆಗಿದೆ. ಅದರಲ್ಲಿ 10–15 ಗುತ್ತಿಗೆದಾರ ಕಂಪನಿಗಳಿವೆ. ಸಚಿವರಿಗೆ ಬೇಡವಾದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, ಸಚಿವರ ಪರವಾದ ಕಂಪನಿಗಳಿಗೆ ಗುತ್ತಿಗೆ ನೀಡುವುದು ಬೇಡ’ ಎಂದರು.

‘ಈ ವಿಷಯವನ್ನು ಮುಖ್ಯಮಂತ್ರಿಯ ಗಮನಕ್ಕೂ ಹಲವು ಬಾರಿ ತಂದಿದ್ದೇನೆ. ಇಂತಹದನ್ನು ನಾನು ಸಹಿಸುವುದಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT