ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ: 3 ಸ್ಥಾನಕ್ಕೆ 40 ಆಕಾಂಕ್ಷಿಗಳು

ಬಿಜೆಪಿ ಪ್ರಮುಖ ನಾಯಕರ ಸಮಿತಿ ಸಭೆ ಚರ್ಚೆ: ಆಯ್ಕೆ ವರಿಷ್ಠರಿಗೆ ಬಿಡಲು ನಿರ್ಧಾರ
Published 22 ಮೇ 2024, 16:35 IST
Last Updated 22 ಮೇ 2024, 16:35 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಪಕ್ಷಕ್ಕೆ ಸಿಗುವ ಮೂರು ಸ್ಥಾನಗಳಿಗೆ 40ಕ್ಕೂ ಹೆಚ್ಚು ಹೆಸರುಗಳು ಚರ್ಚೆಗೆ ಬಂದಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿ ಆಯ್ಕೆ ತೀರ್ಮಾನವನ್ನು ಅವರಿಗೇ ಬಿಡಲು ಬುಧವಾರ ನಡೆದ ಪಕ್ಷದ ಪ್ರಮುಖ ನಾಯಕರ ಸಮಿತಿ ಸಭೆ ನಿರ್ಧರಿಸಿದೆ.

ಪಟ್ಟಿಯನ್ನು ಕಳುಹಿಸುವುದಕ್ಕೂ ಮುನ್ನ ಇನ್ನೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ನಿರ್ದಿಷ್ಟವಾಗಿ ಯಾರದೇ ಹೆಸರನ್ನು ಶಿಫಾರಸು ಮಾಡದೇ, ಆಕಾಂಕ್ಷಿಗಳ ಪಟ್ಟಿಯನ್ನು ಕಳಿಸಬೇಕು. ಸಂಭಾವ್ಯ ಅಭ್ಯರ್ಥಿಗಳು ಯಾರಾಗಬೇಕು ಎಂಬುದನ್ನು ವರಿಷ್ಠರೇ ತೀರ್ಮಾನ ಮಾಡಲಿ. ಆಗ ಯಾವುದೇ ಅಸಮಾಧಾನಕ್ಕೂ ಕಾರಣವಾಗುವುದಿಲ್ಲ ಎಂಬ ಚರ್ಚೆಯೂ ಸಭೆಯಲ್ಲಿ ನಡೆಯಿತು ಎಂದು ಮೂಲಗಳು ಹೇಳಿವೆ.

‘ಮೂರು ಸ್ಥಾನಗಳಿಗೆ ಘಟಾನುಘಟಿಗಳ ಹೆಸರುಗಳು ಚರ್ಚೆಗೆ ಬಂದಿದ್ದು, ಯಾರನ್ನು ಪರಿಗಣಿಸಬೇಕು ಬಿಡಬೇಕು ಎಂಬ ಉಭಯ ಸಂಕಷ್ಟಕ್ಕೆ ನಾಯಕರು ಸಿಲುಕಿದ್ದಾರೆ. 1:5 ಅನುಪಾತದಲ್ಲಿ ಒಂದು ಪಟ್ಟಿಯನ್ನು ತಯಾರು ಮಾಡಿ, 12 ಸಂಭಾವ್ಯರ ಪಟ್ಟಿಯನ್ನು ವರಿಷ್ಠರಿಗೆ ಕಳಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಲೋಕಸಭಾ ಚುನಾವಣೆ ಕಾರಣ ವಿಧಾನಪರಿಷತ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರು ತಲೆ ಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಅಭ್ಯರ್ಥಿ ಆಕಾಂಕ್ಷಿಗಳಿಗೆ ದೆಹಲಿ ಮಟ್ಟದಲ್ಲಿರುವ ಪ್ರಭಾವದ ಆಧಾರದಲ್ಲಿ ಆಯ್ಕೆ ನಡೆಯಬಹುದು’ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಆಯ್ಕೆ ಮಾಡುವಾಗ ಪಕ್ಷ ನಿಷ್ಠೆ, ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಪರಿಗಣಿಸಬೇಕು. ಈ ಹಿಂದೆ ಕೆಲವರು ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸಿ, ಸದಸ್ಯತ್ವ ಅವಧಿ ಮುಗಿಯುತ್ತಿದ್ದಂತೆ ಹೊರಟು ಹೋದರು. ಇನ್ನು ಕೆಲವರು ಪರಿಷತ್ತಿನಲ್ಲಾಗಲೀ, ಹೊರಗಾಗಲಿ ಬಾಯಿ ಬಿಡುತ್ತಿಲ್ಲ. ಇಂತಹವರಿಂದ ಪಕ್ಷ ಮತ್ತು ಸಂಘಟನೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂಬ ವಿಷಯವೂ ಪ್ರಸ್ತಾಪವಾಯಿತು.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಬಗ್ಗೆ ಗಮನ ಹರಿಸಲು ಆರ್‌.ಅಶೋಕ ಮತ್ತು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಸೂಚಿಸಲಾಯಿತು. 

ಕೇಂದ್ರ ನಾಯಕರ ಜತೆ ಸಮಾಲೋಚನೆ:

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ತೀರ್ಮಾನಿಸುವ ಅಧಿಕಾರವನ್ನು ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಲಾಗಿದೆ. ಇವರು ಕೇಂದ್ರ ನಾಯಕರ ಜತೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.

ವಿಧಾನಪರಿಷತ್ತಿನ ಪದವೀಧರ ಮತ್ತು  ಶಿಕ್ಷಕರ ಕ್ಷೇತ್ರಗಳಿಗೆ ನಡೆಯುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಅಭ್ಯರ್ಥಿಗಳ ಗೆಲುವಿನ ದೃಷ್ಟಿಯಿಂದ ಕೆಲವು ಸಲಹೆ ಸೂಚನೆಗಳನ್ನೂ ನೀಡಲಾಗಿದೆ ಎಂದು ರವಿ ತಿಳಿಸಿದರು.

ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಆರ್‌.ಅಶೋಕ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT