ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಬಾರತ್’ ವಿಚ್ಛೇದನಕ್ಕೆ ರಹದಾರಿ: ಹೈಕೋರ್ಟ್

Published 3 ಏಪ್ರಿಲ್ 2024, 18:53 IST
Last Updated 3 ಏಪ್ರಿಲ್ 2024, 18:53 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಬಾರತ್ (ಒಬ್ಬರು ಮತ್ತೊಬ್ಬರಿಂದ ಬೇರ್ಪಡುವುದು) ಒಪ್ಪಂದ ಮಾಡಿಕೊಂಡು ವಿವಾಹ ರದ್ದು ಮಾಡಿಕೊಳ್ಳಲು ಪರಸ್ಪರ ನಿರ್ಧರಿಸಿಕೊಂಡಿರುವ ಮುಸ್ಲಿಂ ದಂಪತಿಗೆ ವಿವಾಹ ವಿಚ್ಛೇದನ ಮಂಜೂರು ಮಾಡುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇದೆ’ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಶಬನಂ ಪರ್ವೀನ್ ಅಹಮದ್ ದಂಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ.

‘ದಂಪತಿ ಮುಬಾರತ್ ಒಪ್ಪಂದದ ಬಗ್ಗೆ ಸಂಪೂರ್ಣ ತಿಳಿವಳಿಕೆ ಹೊಂದಿಯೇ ಪರಸ್ಪರ ಸಮ್ಮತಿಯ ಮೇರೆಗೆ ಸಂಬಂಧ ಮುಂದುವರಿಸದೇ ಇರಲು ನಿರ್ಧರಿಸಿದ್ದಾರೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯ ಅವರ ಅರ್ಜಿಯನ್ನು ಮಾನ್ಯ ಮಾಡದೆ ತಪ್ಪೆಸಗಿದೆ’ ಎಂದು ಆಭಿಪ್ರಾಯಪಟ್ಟಿರುವ ನ್ಯಾಯಪೀಠ, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ‘ಮುಸ್ಲಿಂ ವಿವಾಹ ರದ್ದತಿ ಕಾಯ್ದೆ-1937, ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅನ್ವಯಿಸುವ ಕಾಯ್ದೆ-1939 ಮತ್ತು ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ- 1984ರ ಕಲಂ 7ರ ಅನ್ವಯ ಮುಬಾರತ್ ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿ, ಮದುವೆಯನ್ನು ಅನೂರ್ಜಿತಗೊಳಿಸಬೇಕು. ಆದರೆ, ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ಅರ್ಜಿ ತಿರಸ್ಕರಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದ್ದರು.

ಪ್ರಕರಣವೇನು?: ದಂಪತಿ ‘ಉತ್ತರ ಪ್ರದೇಶದ ಅಲಹಾಬಾದ್‌ನ ಕರ್ಬಾಲದ ನಂದ ಗಾರ್ಡನ್‌ನಲ್ಲಿ 2019ರ ಏಪ್ರಿಲ್ 7ರಂದು ನಡೆದಿದ್ದ ನಮ್ಮ ವಿವಾಹವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಅಂತೆಯೇ, ಮಹಮ್ಮದೀಯ ಸಂಪ್ರದಾಯಂತೆ ಮದುವೆ ರದ್ದುಗೊಳಿಸಿಕೊಳ್ಳಲು 2021ರ ಏಪ್ರಿಲ್ 3ರಂದು ಮಾಡಿಕೊಂಡಿದ್ದ ಮುಬಾರತ್ ಡೀಡ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆದರೆ, ಕೌಟುಂಬಿಕ ನ್ಯಾಯಾಲಯ, ‘ಮುಸ್ಲಿಂ ವಿವಾಹ ರದ್ದತಿ ಕಾಯ್ದೆ-1937ರ ಪ್ರಕಾರ ಪರಸ್ಪರ ಸಮ್ಮತಿಯ ಮೇರೆಗೆ ಮಹಮ್ಮದೀಯ ಮದುವೆಯನ್ನು ರದ್ದು ಮಾಡಲು ಅವಕಾಶವಿಲ್ಲ’ ಎಂದು ಮುಬಾರತ್ ಅನ್ನು ಮಾನ್ಯ ಮಾಡದೆ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ದಂಪತಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT