ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA | CM ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 14 ನಿವೇಶನಗಳ ಕ್ರಯಪತ್ರ–ಖಾತೆ ರದ್ದು

Published : 1 ಅಕ್ಟೋಬರ್ 2024, 13:46 IST
Last Updated : 1 ಅಕ್ಟೋಬರ್ 2024, 13:46 IST
ಫಾಲೋ ಮಾಡಿ
Comments

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಹಂಚಿಕೆ ಮಾಡಿದ್ದ 14 ನಿವೇಶನಗಳ ಕ್ರಯಪತ್ರವನ್ನು ಮುಡಾ ಮಂಗಳವಾರ ರದ್ದುಪಡಿಸಿದೆ. ಮನವಿ ನೀಡಿದ ದಿನವೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

‘ನನ್ನ ಹೆಸರಿನಲ್ಲಿ ನೋಂದಣಿಯಾಗಿರುವ 14 ನಿವೇಶನಗಳನ್ನು ವಾಪಸ್‌ ಪಡೆಯಬೇಕು’ ಎಂದು ಕೋರಿ ಪಾರ್ವತಿ ಅವರು ಬರೆದಿದ್ದ ಮನವಿ ಪತ್ರ ಹಾಗೂ ಭಾವನಾತ್ಮಕವಾದ ಇನ್ನೊಂದು ಪತ್ರವು ಸೋಮವಾರ ರಾತ್ರಿ ಬಿಡುಗಡೆಯಾಗಿತ್ತು. ಅವರ ಮಗ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ತಾಯಿ ಪರವಾಗಿ ಮಂಗಳವಾರ ಬೆಳಿಗ್ಗೆ ಮನವಿಪತ್ರವನ್ನು ಮೂಡಾಕ್ಕೆ ನೀಡಿದ್ದರು. ಕೆಲ ಹೊತ್ತಿನ ಬಳಿಕ, ಮುಡಾ ಆಯುಕ್ತ ರಘುನಂದನ್‌ ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು.

‘ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯಪತ್ರಗಳ ರದ್ದು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿವೇಶನಗಳ ಖಾತೆ ರದ್ದಾಗಲಿದೆ. ನಂತರ ನಿವೇಶನಗಳನ್ನು ಮುಡಾ ಹೆಸರಿಗೆ ಸೇರಿಸಿಕೊಳ್ಳಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮನೆಯಲ್ಲೇ ಸಹಿ ಪಡೆದ ಅಧಿಕಾರಿ?
‘ನಿವೇಶನಗಳ ಖಾತೆ ರದ್ದುಪಡಿಸಬೇಕು ಎಂದು ಕೋರಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದ ಪಾರ್ವತಿಯವರ ಮನೆಗೇ ಅಧಿಕಾರಿಗಳು ತೆರಳಿ ಅವರ ಸಹಿ ಪಡೆದುಕೊಂಡರು. ಮುಡಾ ಅಧಿಕಾರಿಗಳು, ಹೆಚ್ಚುವರಿ ಉಪನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳು ಮನೆಗೆ ತೆರಳಿದ್ದರು’ ಎಂದು ಮೂಲಗಳು ತಿಳಿಸಿವೆ.
ನನ್ನನ್ನು ಹಿಟ್ ಆ್ಯಂಡ್ ರನ್ ಪಾರ್ಟಿ ಎಂದು ಕರೆಯುತ್ತಾರೆ. ಹಾಗಾದರೆ ಸಿದ್ದರಾಮಯ್ಯ ಅವರೇನು ಯೂ ಟರ್ನಾ? ನಿವೇಶನ ವಾಪಸ್ ತರಾತುರಿ ನಿರ್ಧಾರ ಮಾಡುವಂತೆ ಯಾರು ಹೇಳಿಕೊಟ್ಟಿದ್ದು?
ಎಚ್‌.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ

ಕಾನೂನಿನಲ್ಲಿ ಅವಕಾಶ:

ಈ ಕುರಿತು ಮುಡಾ ಆಯುಕ್ತ ರಘುನಂದನ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ತನಿಖೆ ನಡೆಯುತ್ತಿರುವಾಗಲೇ ಫಲಾನುಭವಿಗಳು ನಿವೇಶನಗಳನ್ನು ವಾಪಸ್ ಕೊಟ್ಟರೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ವಾಪಸ್‌ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುತ್ತೇವೆ. ಈ ನಿವೇಶನಗಳನ್ನು ಬೇರೆಯವರಿಗೆ ಹಂಚಬಹುದೇ ಅಥವಾ ತನಿಖೆ ಮುಗಿಯುವವರೆಗೆ ಕಾಯ್ದಿರಿಸಬೇಕೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ’ ಎಂದು ತಿಳಿಸಿದರು.

‘ಪ್ರಕರಣದ ತನಿಖೆಗೆ ಸಹಕರಿಸುವಂತೆ ಕೋರಿ ಲೋಕಾಯುಕ್ತದಿಂದ ಪತ್ರ ಬಂದಿದ್ದು, ಅವರು ಕೇಳಿದ ದಾಖಲೆಗಳನ್ನು ಒದಗಿಸ ಲಿದ್ದೇವೆ. ಜಾರಿ ನಿರ್ದೇಶನಾಲಯದಿಂದ ಈವರೆಗೆ ‌ಪತ್ರ ಬಂದಿಲ್ಲ’ ಎಂದರು.

‘ನಗರಾಭಿವೃದ್ಧಿ ಕಾಯ್ದೆ 1991ರ ಅನ್ವಯ ಸ್ವಇಚ್ಛೆಯಿಂದ ನಿವೇಶನ ಹಿಂದಿರುಗಿಸಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನು ತಜ್ಞರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನಾವು ನಿವೇಶನಗಳನ್ನು ವಾಪಸ್ ಪಡೆದು ದಾಖಲೆಗಳನ್ನು ಉಪನೋಂದಣಾಧಿಕಾರಿಗೆ ಕಳುಹಿಸಿದ್ದೇವೆ. ಮುಂದಿನ ಪ್ರಕ್ರಿಯೆಯನ್ನು ಅವರು ನೋಡಿಕೊಳ್ಳುತ್ತಾರೆ’ ಎಂದು ಮುಡಾ ಕಾರ್ಯದರ್ಶಿ ಪ್ರಸನ್ನ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT