ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಎಲ್ಲ ಪಕ್ಷದವರ ಪಾಲೂ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅವರು ಹೀಗೆ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ.
ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆಯಾದ ಶೋಭಾ ಅವರು ಈಚೆಗೆ ಮಾಧ್ಯಮಗೋಷ್ಠಿಯೊಂದರಲ್ಲಿ ಮಾತನಾಡಿದ್ದರು. ಗೋಷ್ಠಿ ಮುಗಿದ ಕಾರಣ ಅವರು ಕಾಫಿ ಸೇವಿಸುತ್ತಿದ್ದರು. ಆದರೆ ಸುದ್ದಿವಾಹಿನಿಯೊಂದರ ಕ್ಯಾಮೆರಾ ಇನ್ನೂ ಬಂದ್ ಆಗಿರಲಿಲ್ಲ.
ಆಗ ಬಿಜೆಪಿ ಕಾರ್ಯಕರ್ತರೊಬ್ಬರು, ‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆಯೇ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ, ‘ಅದರಲ್ಲಿ ಎಲ್ಲರಿಗೂ ಪಾಲು ಇದೆಯಪ್ಪಾ. ಎಲ್ಲ ಪಕ್ಷದವರೂ ಅದರಲ್ಲಿ ಇದ್ದಾರೆ’ ಎಂದರು. ಮತ್ತೆ ಮಾತು ಮುಂದುವರೆಸಲು ತಲೆಯೆತ್ತಿದ ಅವರು ಕ್ಯಾಮೆರಾದಲ್ಲಿ ಚಿತ್ರೀಕರಣ ಆಗುತ್ತಿರುವುದನ್ನು ಗಮನಿಸಿದರು. ತಕ್ಷಣವೇ, ‘ಮೀಡಿಯ ಇದೆ’ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.
ಜತೆಗೆ ಕ್ಯಾಮೆರಾಮೆನ್‌ನನ್ನು, ‘ಏನಪ್ಪಾ ಕಾಫಿ ಕುಡಿಯುವುದನ್ನೂ ರೆಕಾರ್ಡ್ ಮಾಡುತ್ತಾರಾ’ ಎಂದು ಪ್ರಶ್ನಿಸಿದರು.
ಇವಿಷ್ಟೂ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್ ಹಂಚಿಕೊಂಡಿರುವ ಹಲವರು, ‘ಮುಡಾ ಹಗರಣದಲ್ಲಿ ಎಲ್ಲರಿಗೂ ಪಾಲು ಇದೆ ಎಂಬುದನ್ನು ಬಿಜೆಪಿ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ವಿರುದ್ಧ ಮಾತ್ರ ಆರೋಪ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.