ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಬಸ್ ನಿಲ್ದಾಣ ವಿವಾದ: ತಜ್ಞರ ವರದಿ ಬಳಿಕ ಕ್ರಮ – ಸಿಎಂ ಬೊಮ್ಮಾಯಿ ಹೇಳಿಕೆ

Last Updated 17 ನವೆಂಬರ್ 2022, 21:22 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈಸೂರಿನ ಗುಂಬಜ್ ಮಾದರಿಯ ಬಸ್‌ ನಿಲ್ದಾಣದ ವಿನ್ಯಾಸದ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.

ಬಸ್‌ ನಿಲ್ದಾಣದ ಬಗ್ಗೆ ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ರಾಮದಾಸ್‌ ಮಧ್ಯೆ ಉಂಟಾಗಿರುವ ಸಂಘರ್ಷದ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

‘ರಾಮದಾಸ್ ಅವರು ಬುಧವಾರ ರಾತ್ರಿ ಭೇಟಿಯಾಗಿ ಎಲ್ಲ ವಿವರ ನೀಡಿದ್ದಾರೆ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಏಕೆ ಉಂಟಾಗಿದೆ ಎಂಬುದನ್ನು ತಿಳಿಯುವುದಕ್ಕಿಂತ ವಿನ್ಯಾಸದ ಬಗ್ಗೆ ಪರಿಶೀಲನೆ ನಡೆಸ ಬೇಕಾಗಿದೆ’ ಎಂದುಹೇಳಿದರು.

ಮೈಸೂರಿಗೆ ತಜ್ಞರನ್ನು ಕಳುಹಿ ಸಲಿದ್ದು, ಬಸ್‌ ನಿಲ್ದಾಣದ ಸ್ವರೂಪ ಪರಿಶೀಲಿಸಿ ಬಳಿಕ ವರದಿ ನೀಡುವಂತೆ ಸೂಚಿಸಲಾಗುವುದು. ವರದಿಯನ್ನು ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರುಹೇಳಿದರು.

ಕಿರುಕುಳ ನೀಡ್ತಿದ್ದಾರೆ, ದಯಮಾಡಿ ಬಿಟ್ಟುಬಿಡಿ: ಶಾಸಕ ರಾಮದಾಸ್‌
‘ಬಿಜೆಪಿಯಿಂದ ಶಾಸಕರಾದ 11 ಮಂದಿ ಪೈಕಿ ನಾನೊಬ್ಬನೇ ಪಕ್ಷದಲ್ಲಿ ಉಳಿದಿದ್ದೇನೆ. ಈ ವಿವಾದದ ಮೂಲಕ ಕಿರುಕುಳ ನೀಡಲಾಗುತ್ತಿದೆ. ದಯಮಾಡಿ ಬಿಟ್ಟುಬಿಡಿ’ ಎಂದು ಶಾಸಕ ರಾಮದಾಸ್‌ ಗದ್ಗದಿತರಾದರು.

‘ತಜ್ಞರ‌ ಸಮಿತಿಯನ್ನು ಕಳುಹಿಸುವಂತೆ ಮುಖ್ಯಮಂತ್ರಿಯನ್ನು ಕೋರಿದ್ದೇನೆ. ತಪ್ಪಾಗಿದ್ದರೆ ಹಣವನ್ನು ‌ಸಂಬಳದಿಂದ ಭರಿಸಲು ಸಿದ್ಧ. ನಿರ್ಮಾಣ ಕೆಲಸ ನಿಲ್ಲಿಸಿ ಎಂದರೆ ನಿಲ್ಲಿಸುವೆ‘ ಎಂದು ಗುರುವಾರ ಪ್ರತಿಕ್ರಿಯಿಸಿದರು.

‘ತಪ್ಪುಮಾಹಿತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಪತ್ರಬರೆದಿದ್ದೇನೆ. ಅರಮನೆ ಮಾದರಿಯಲ್ಲಿ ನಿರ್ಮಿಸಬೇಕೆಂದು ವಿನ್ಯಾಸ ‌ಮಾಡಲಾಗಿತ್ತೇ ಹೊರತು ವಿವಾದ ಸೃಷ್ಟಿಸಬೇಕೆಂದಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕಿರುಕುಳ ನೀಡುವಷ್ಟು ದೊಡ್ಡವನಲ್ಲ: ಸಂಸದ ಪ್ರತಾಪಸಿಂಹ
‘29 ವರ್ಷಗಳ ಹಿಂದೆಯೇ ರಾಮದಾಸ್‌ ಶಾಸಕರಾದವರು. ಪ್ರಧಾನಿ ಮೋದಿ ಅವರಿಂದಲೇ ಮೆಚ್ಚುಗೆ ಪಡೆದವರು. ಜಿಲ್ಲೆಯ ಕೆಲವು ರಾಜಕಾರಣಿಗಳ ಬಳಿ ನನ್ನನ್ನು ಸುಡುವಷ್ಟು ದುಡ್ಡಿದೆ. ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ’ ಎಂದು ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದರು.

‘ಗುಂಬಜ್‌ನಂತಿರುವ ಗೋಪುರವನ್ನು ಕೆಡವಿದರೆ, ಟಿಪ್ಪುವಿನ ಅನುಯಾಯಿಗಳಿಗೆ ನೋವಾಗಬಹುದು, ಶಿವಾಜಿ ಅನುಯಾಯಿಗಳಿಗಲ್ಲ.ಗುಂಬಜ್‌ಗೂ–ಇಂಡೋ ಸಾರ್ಸೆನಿಕ್‌ ಕಲೆಗೂ ಸಾಕಷ್ಟು ವ್ಯತ್ಯಾಸವಿದೆ’ ಎಂದರು.

‘ಹೆದ್ದಾರಿ ಪ್ರಾಧಿಕಾರ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮಾದರಿಯಂತೆ ನಿರ್ಮಿಸಲು ಅಭ್ಯಂತರ ಇಲ್ಲ. ಗಡುವಿನವರೆಗೂ ಕಾಯುತ್ತೇನೆ’ ಎಂದರು. ಈ ಮೂಲಕ ಗುಂಬಜ್‌ ಒಡೆಸುವ ಬೆದರಿಕೆ ಸಮರ್ಥಿಸಿಕೊಂಡರು.

ಗೋಪುರದ ಬಣ್ಣ ಬದಲು
ಬಸ್‌ ಪ್ರಯಾಣಿಕರ ತಂಗುದಾಣದ ‘ಗುಂಬಜ್‌’ ಸ್ವರೂಪ ವಿವಾದ ತೀವ್ರಗೊಳ್ಳುತ್ತಿದ್ದಂತೆ ಗೋಪುರಗಳ ಬಣ್ಣವನ್ನು ಗುರುವಾರ ಸಂಪೂರ್ಣವಾಗಿ ಕಡು ಕೆಂಪುಬಣ್ಣಕ್ಕೆ ಬದಲಾಯಿಸಲಾಗಿದೆ.

ಬುಧವಾರ ಒಂದು ಗೋಪುರಕ್ಕಷ್ಟೇ ಕೆಂಪು ಬಣ್ಣವನ್ನು ಬಳಿಯಲಾಗಿತ್ತು. ವಿವಾದ ಪೂರ್ವದಲ್ಲಿ ತಂಗುದಾಣದ ಈ ಗೋಪುರಗಳಿಗೆ ಚಿನ್ನದ ಬಣ್ಣವನ್ನು ಬಳಿಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT