ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಂಪುಟ: ಬ್ರಾಹ್ಮಣ, ಒಕ್ಕಲಿಗರಿಗೆ ಮಣೆ; ಹಿಂದುಳಿದವರು, ದಲಿತರಿಗಿಲ್ಲ ಸ್ಥಾನ

Published 9 ಜೂನ್ 2024, 18:44 IST
Last Updated 9 ಜೂನ್ 2024, 18:44 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರದಲ್ಲಿ ರಾಜ್ಯಕ್ಕೆ ಐದು ಸಚಿವ ಸ್ಥಾನಗಳನ್ನು ನೀಡಿದ್ದರೂ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಿಲ್ಲ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಬೆನ್ನಿಗೆ ನಿಂತ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮಣೆ ಹಾಕಿರುವ ಎನ್‌ಡಿಎ, ಬ್ರಾಹ್ಮಣರಿಗೆ ಸಂಪುಟ ದರ್ಜೆಯ ಎರಡು ಸ್ಥಾನಗಳ ಕೊಡುಗೆ ನೀಡಿದೆ. ಆದರೆ, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಂಪುಟದಿಂದ ದೂರ ಇರಿಸಿದೆ.

ರಾಜ್ಯದ ಕೋಟಾದಲ್ಲಿ ಮೂವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರಕಿದ್ದರೆ, ಇಬ್ಬರಿಗೆ ರಾಜ್ಯ ಸಚಿವ ದರ್ಜೆ ನೀಡಲಾಗಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ಬಿಜೆಪಿಯ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ಪ್ರಲ್ಹಾದ ಜೋಶಿ ಅವರನ್ನೂ ಮುಂದುವರಿಸಲಾಗಿದೆ. ಇಬ್ಬರೂ ಬ್ರಾಹ್ಮಣರು. ಮಿತ್ರಪಕ್ಷ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ಸಂಪುಟ ದರ್ಜೆ ಸಚಿವ ಸ್ಥಾನ ದೊರಕಿದೆ. ಅವರು ಒಕ್ಕಲಿಗ ಸಮುದಾಯದವರಾಗಿದ್ದು, ಮೂರೂ ಸಂಪುಟ ದರ್ಜೆ ಸಚಿವ ಸ್ಥಾನಗಳು ಪ್ರಬಲ ವರ್ಗಗಳ ಪಾಲಾಗಿವೆ.

ಹಿಂದಿನ ಅವಧಿಯಲ್ಲಿ ರಾಜ್ಯ ಸಚಿವೆಯಾಗಿದ್ದ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಗಿದೆ. ಅವರೊಂದಿಗೆ ಲಿಂಗಾಯತ ಸಮುದಾಯದ ವಿ. ಸೋಮಣ್ಣ ಅವರಿಗೂ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ರಾಜ್ಯ ಸಚಿವರ ಎರಡೂ ಸ್ಥಾನಗಳಿಗೂ ಪ್ರಬಲ ಸಮುದಾಯಗಳಿಗೇ ಬಿಜೆಪಿ ಮಣೆ ಹಾಕಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಬೆನ್ನಿಗೆ ಬಲವಾಗಿ ನಿಂತಿದ್ದವು. ಅದರ ಜತೆಯಲ್ಲೇ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳು ಬಿಜೆಪಿ ಬೆಂಬಲಕ್ಕೆ ನಿಂತಿದ್ದವು. ಬಿಲ್ಲವ–ಈಡಿಗ ಮತದಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯಗಳೂ ಬಿಜೆಪಿ ಬೆನ್ನಿಗೆ ಬಲವಾಗಿ ನಿಂತಿದ್ದವು. ಹೀಗಾಗಿ ಈ ಬಾರಿ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕಬಹುದು ಎಂಬ ನಿರೀಕ್ಷೆ ಇತ್ತು.

ಅಚ್ಚರಿಯ ನಿಲುವು:

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅಥವಾ ಜಗದೀಶ ಶೆಟ್ಟರ್‌ ಅವರಿಗೆ ಲಿಂಗಾಯತ ಕೋಟಾದಡಿ ಅವಕಾಶ ಕಲ್ಪಿಸಬಹುದು ಎಂಬ ನಿರೀಕ್ಷೆ ಬಿಜೆಪಿ ಮುಖಂಡರಲ್ಲಿತ್ತು. ಸತತ ಐದನೇ ಬಾರಿ ಗೆದ್ದಿರುವ ಗಾಣಿಗ ಲಿಂಗಾಯತ ಸಮುದಾಯದ ಪಿ.ಸಿ. ಗದ್ದಿಗೌಡರ್‌ ಈ ಬಾರಿ ಸಂಪುಟ ಸೇರುವ ನಿರೀಕ್ಷೆ ಇತ್ತು. ಸೋಮಣ್ಣ ಕೊನೆಯ ಆಯ್ಕೆ ಆಗಬಹುದು ಎಂಬ ಮಾತೂ ಪಕ್ಷದೊಳಗೆ ಇತ್ತು.

ಬಿಜೆಪಿ ನಾಯಕ ಅಮಿತ್‌ ಶಾ ಸೂಚನೆಯಂತೆ 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸೋಮಣ್ಣ, ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು. ತಮ್ಮನ್ನು ಮೂಲೆಗುಂಪು ಮಾಡುವುದಕ್ಕಾಗಿ ಎರಡು ಕಡೆ ಸ್ಪರ್ಧೆಗೆ ಸೂಚಿಸಲಾಗಿತ್ತು ಎಂದು ಮುನಿಸಿಕೊಂಡಿದ್ದ ಅವರು, ಕಾಂಗ್ರೆಸ್‌ನತ್ತ ಮುಖ ಮಾಡುವ ಪ್ರಯತ್ನ ನಡೆಸಿದ್ದರು.

ಬಿಜೆಪಿ ವರಿಷ್ಠರ ಮನವೊಲಿಕೆ ಬಳಿಕ ಸುಮ್ಮನಾಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಸೋಮಣ್ಣ ಮುನಿಸಿಕೊಂಡಿದ್ದರು. ತುಮಕೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಗೆದ್ದ ಅವರು ಲಿಂಗಾಯತ ಕೋಟಾದಡಿ ಸಂಪುಟ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಬ್ಬರನ್ನೂ ಪಕ್ಕಕ್ಕಿಟ್ಟು ಸೋಮಣ್ಣ ಅವರಿಗೆ ವರಿಷ್ಠರು ಸಂಪುಟದಲ್ಲಿ ಅವಕಾಶ ನೀಡಿದ್ದಾರೆ.

ಜೆಡಿಎಸ್‌ ನಾಯಕ ಕುಮಾರಸ್ವಾಮಿ ಸಂಪುಟ ಸೇರುವುದು ನಿರೀಕ್ಷಿತವಾಗಿಯೇ ಇತ್ತು. ಆದರೆ, ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಬೆಂಗಳೂರು ಉತ್ತರಕ್ಕೆ ವಲಸೆ ಬಂದು ಗೆದ್ದಿರುವ ಶೋಭಾ ಕರಂದ್ಲಾಜೆ ಅವರಿಗೆ ಪುನಃ ಅವಕಾಶ ಸಿಕ್ಕಿದೆ. ದಕ್ಷಿಣ ಭಾರತದಿಂದ ಗೆದ್ದ ಬಿಜೆಪಿಯ ಏಕೈಕ ಸಂಸದೆ ಎಂಬುದು ಇದಕ್ಕೆ ಒಂದು ಕಾರಣ. ಒಕ್ಕಲಿಗರ ಕೋಟಾದ ಜತೆಯಲ್ಲೇ ಗಟ್ಟಿ ಧ್ವನಿಯಲ್ಲಿ ಪಕ್ಷ ಮತ್ತು ಸಂಘ ಪರಿವಾರದ ಸಮರ್ಥನೆಗೆ ನಿಲ್ಲುವ ಗುಣ ಕೂಡ ಅವರ ಬೆನ್ನಿಗೆ ನಿಂತಿದೆ ಎಂಬ ವಿಶ್ಲೇಷಣೆ ಬಿಜೆಪಿಯಲ್ಲಿದೆ.

ಪರಿಶಿಷ್ಟ ಜಾತಿಯ ಕೋಟಾದಡಿ ಗೋವಿಂದ ಕಾರಜೋಳ ಅಥವಾ ರಮೇಶ ಜಿಗಜಿಣಗಿ ಇಬ್ಬರಲ್ಲಿ ಒಬ್ಬರಿಗೆ ಸಂಪುಟ ಸೇರುವ ಅವಕಾಶ ದೊರಕಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಸತತ ನಾಲ್ಕನೇ ಬಾರಿ ಸಂಸದರಾಗಿರುವ ಪಿ.ಸಿ. ಮೋಹನ್‌ ಹೆಸರು ಕೂಡ ಹಿಂದುಳಿದ ವರ್ಗಗಳ ಕೋಟಾದಡಿ ಚಾಲ್ತಿಗೆ ಬಂದಿತ್ತು. ಬೆಂಗಳೂರಿಗೆ ಪ್ರಾತಿನಿಧ್ಯ ನೀಡುವಾಗಲೂ ಸತತ ನಾಲ್ಕನೇ ಬಾರಿ ಗೆದ್ದಿರುವ ಮೋಹನ್‌ ಹೆಸರು ಪರಿಗಣಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ದಲಿತರು ಮತ್ತು ಹಿಂದುಳಿದವರಿಗೆ ಪ್ರಾತಿನಿಧ್ಯವೇ ದೊರಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT