ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ-2 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಭೂ ದಾಖಲೆಗಳ ಆಧುನೀಕರಣ ಹೀಗಾಯಿತು
Last Updated 25 ಆಗಸ್ಟ್ 2022, 11:01 IST
ಅಕ್ಷರ ಗಾತ್ರ

ಭೂ ದಾಖಲೆಗಳಲ್ಲಿದ್ದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಇಲಾಖೆಗಳ ಡಿಜಿಟಲೀಕರಣ ಅಥವಾ ಕಂಪ್ಯೂಟರೀಕರಣಗೊಳಿಸಲು ಮುಂದಾದವು. 90ರ ದಶಕದಲ್ಲಿ ರಾಷ್ಟ್ರೀಯಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ (National Land Records Modernization program) ಅನ್ನುವ ಯೋಜನೆ ಜಾರಿಗೆ ಬಂತು. ಕಂದಾಯ ಇಲಾಖೆಯಲ್ಲಿಯೂ ಕೆಲವು ಪ್ರಯೋಗಗಳು ಈ ನಿಟ್ಟಿನಲ್ಲಿ ಆರಂಭವಾದವು.

ಕಂದಾಯ ಇಲಾಖೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಮೂಲ್ಯವಾದ ಮತ್ತು ಭೂಮಿಗೆ ಸಂಬಂಧಿಸಿದ 150 ವರ್ಷಗಳ ಹಳೆಯ ದಾಖಲೆಗಳು ಶಿಥಿಲವಾಗುವ ಹಂತದಲ್ಲಿದ್ದವು. ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿನ ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡುವ ಯೋಜನೆ ‘ದಾಖಲೆಗಳ ಡಿಜಿಟಲೀಕರಣ’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ‘ಭೂಮಿ’ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಿತು.

ರಾಜೀವ್ ಚಾವ್ಲಾ ಎಂಬ ಐಎಎಸ್ ಅಧಿಕಾರಿ ಇಡೀ ರಾಜ್ಯದಲ್ಲಿನ ಪಹಣಿ ಪತ್ರಿಕೆಯಾದ ಆರ್‌ಟಿಸಿ ಅಥವಾ ಉತ್ತರ ಕರ್ನಾಟಕ ಭಾಷೆಯಲ್ಲಿ ಉತಾರ ಮತ್ತು ಮ್ಯುಟೇಷನ್‌ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲು ಮುಂದಾದರು. ಹತ್ತಾರು ಅಡೆತಡೆಗಳನ್ನು ದಾಟಿ ಈ ಕಾರ್ಯ ಪೂರ್ಣಗೊಂಡಿತು. ಇದರಿಂದ ಅಂದು 1,900ರಿಂದ ಶ್ಯಾನಭೋಗರು ಬರೆದಿದ್ದ ದೂಳು ಹಿಡಿದಿದ್ದ ಸರ್ವೆ ದಾಖಲೆಗಳು, ಪಹಣಿಗಳು ಮತ್ತು ಮ್ಯೂಟೇಷನ್ ದಾಖಲೆಗಳು ಗಣಕೀಕರಣಗೊಂಡವು.

ಸತತ ಐದು ವರ್ಷಗಳ ಪ್ರಯತ್ನದಿಂದ 2000ನೇ ಸಾಲಿನಿಂದ ಕಂದಾಯ ಇಲಾಖೆಯಲ್ಲಿ ಪಹಣಿ ಮತ್ತು ಮ್ಯೂಟೇಷನ್ ಮತ್ತು ಸರ್ವೆ ಇಲಾಖೆಯಲ್ಲಿದ್ದ ಅಟ್ಲಾಸ್‌, ಆಕಾರಬಂದ್‌ ಮೂಲ ಟಿಪ್ಪಣಿ, ನಮೂನೆ 10ಗಳು ಸ್ಕ್ಯಾನ್‌ ಆಗಿ ಕಂಪ್ಯೂಟರೀಕರಣಗೊಂಡವು. ತದನಂತರದಲ್ಲಿ ಆಯುಕ್ತರಾದ ಪೊನ್ನುರಾಜ್‌, ಪ್ರಸ್ತುತ ಆಯುಕ್ತರಾಗಿರುವ ಮುನಿಷ ಮೌದ್ಗಿಲ್ ಅವರ ಕೊಡುಗೆಯು ಕಂದಾಯ ಮತ್ತು ಸರ್ವೆ ಇಲಾಖೆಯ ಅಧುನಿಕರಣ, ಡಿಜಿಟೈಸೇಷನ್‌, ಮತ್ತು ಸಾರ್ವಜನಿಕ ಸ್ನೇಹಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಮುಂದಾಳತ್ವ ವಹಿಸಿದರು.

ಭೂಮಿ ಲ್ಯಾಂಡ್‌ ರೆಕಾರ್ಡ್ ಯೋಜನೆಯ ಅಂಕಿಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಂದಾಜು 200 ಮಿಲಿಯನ್ ಅಂದರೆ 20 ಕೋಟಿಯಷ್ಟು ಕಂದಾಯ ದಾಖಲೆಗಳು ಇವೆ. ಒಟ್ಟು 6.7 ಮಿಲಿಯನ್‌ ರೈತರು ಇದ್ದಾರೆ. ಅಲ್ಲದೇ, ಮುದ್ರಾಂಕ ಮತ್ತು ನೋಂದಣಿ ಇಲಾಖೆಯ 2019-20ನೇ ಸಾಲಿನ ಅಂಕಿ ಅಂಶದಂತೆ ಸುಮಾರು 9,667 ಕೋಟಿಗಳ ವಹಿವಾಟನ್ನು ಕಂದಾಯ ಇಲಾಖೆ ಹೊಂದಿದೆ.

ಏರಿದ ಭೂಮಿಯ ಬೆಲೆ

ಹರೀಶ್ ನಾಯ್ಕ
ಹರೀಶ್ ನಾಯ್ಕ

ಕರ್ನಾಟಕ ಭೂಸುಧಾರಣಾ ಕಾಯ್ದೆ 1973 ಕಲಂ 79-80ಅನ್ನು ರದ್ದುಪಡಿಸಿದ ಮೇಲೆ ಪ್ರಸ್ತುತ ಕೃಷಿಕರು ಅಲ್ಲದವರು ಕೂಡ ಕೃಷಿ ಭೂಮಿಯನ್ನು ಕ್ರಯಕ್ಕೆ ಪಡೆಯಬಹುದಾಗಿರುವುದರಿಂದ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಕೃಷಿ ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು, ವಿಶೇಷ ಅರ್ಥಿಕ ವಲಯಗಳು ಮತ್ತು ವಸತಿ ಯೋಜನೆಗಳನ್ನು ಭೂಪರಿವರ್ತನೆ ಮಾಡಿಕೊಂಡು ಅನುಷ್ಠಾನಗೊಳಿಸಬಹುದಾಗಿರುವುದರಿಂದ ಪ್ರಸ್ತುತ ಕೃಷಿ ಜಮೀನುಗಳ ಬೆಲೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವೂ ಹೆಚ್ಚಾಗಿದೆ.

ಪ್ರಸ್ತುತ ತುದಿಬೆರಳಲ್ಲಿ ಕಂದಾಯ ದಾಖಲೆಗಳು ವಿವಿಧ ಆ್ಯಪ್‌ಗಳ ಮೂಲಕ ಜನರಿಗೆ ಲಭ್ಯ ಇವೆ. ಚಿನ್ನದ ಬೆಲೆಯ ಭೂದಾಖಲೆಗಳನ್ನು 25 ವರ್ಷಗಳ ಹಿಂದೆ ಎಚ್ಚೆತ್ತು ಆಧುನಿಕರಣಗೊಳಿಸದೆ ಇದ್ದಿದ್ದರೆ ಇಂದು ಬೋಗಸ್‌ ಅಥವಾ ಸೃಷ್ಟಿಸಿದ ದಾಖಲೆಗಳು ಆಗದೆ ಇರುವುದಲ್ಲಿ ಯಾವುದೇ ಸಂಶಯವಿರಲಿಲ್ಲ. ಇದರ ಹಿಂದೆ ಕಂದಾಯ ಇಲಾಖೆಯ ಸಿಬ್ಬಂದಿಗಳ ಪರಿಶ್ರಮವಿದೆ. ಇದರ ಪರಿಣಾಮವೇ ಇಂದು ಅಟಲ್ ಜನಸ್ನೇಹಿ ಕೇಂದ್ರ, ಗ್ರಾಮ ಒನ್, ನಾಡ ಕಚೇರಿ, ಮೋಜಣಿ ಕೇಂದ್ರಗಳಲ್ಲಿ ಕೇವಲ ಸರ್ವೆ ನಂಬರ್ ಹೇಳಿದರೆ ಅತ್ಯಂತ ಕಡಿಮೆ ದರದಲ್ಲಿ ದಾಖಲೆಗಳು ಕೈಗೆಟಕುತ್ತಿವೆ.

ಪ್ರಾಂತ್ಯವಾರು ಕಂದಾಯ ಕಾನೂನು!

ಅಖಂಡ ಕರ್ನಾಟಕ ರಾಜ್ಯ ಉದಯವಾಗುವ ಮುನ್ನ ಕರ್ನಾಟಕ ರಾಜ್ಯವು ಮೈಸೂರು ಪ್ರಾಂತ್ಯ, ಬಾಂಬೆ ಪ್ರಾಂತ್ಯ, ಮದ್ರಾಸ್‌ ಪ್ರಾಂತ್ಯ, ಹೈದರಾಬಾದ್-ಕರ್ನಾಟಕ ಮತ್ತು ಕೂರ್ಗ್‌ ಪ್ರಾಂತ್ಯವಾಗಿದ್ದು ಎಲ್ಲಾ ಐದು ಪ್ರಾಂತ್ಯಗಳಲ್ಲೂ ಬೇರೆ ಬೇರೆ ರೀತಿಯ ಕಂದಾಯ ಇಲಾಖೆಯಲ್ಲಿ ಪ್ರದೇಶವಾರು ನಿಯಮಾವಳಿಗಳು ಇದ್ದವು. ಬ್ರಿಟಿಷರು ಮೇಲ್ಕಂಡ ಐದು ವಿಭಾಗಗಳಲ್ಲೂ ಅಲ್ಲಿನ ಪ್ರಾದೇಶಿಕ ವ್ಯವಸ್ಥೆಯಂತೆ ಆಡಳಿತ ನಡೆಸುತ್ತಿದ್ದರು. ಅಂದಿನ ಕಲೆಕ್ಟರ್, ಸಬ್‌ಕಲೆಕ್ಟರ್, ಅಮಾಲ್ದಾರ, ಶಿರಸ್ತೆದಾರ, ಗ್ರಾಮ ಸಹಾಯಕ, ಗ್ರಾಮಸೇವಕ, ಶ್ಯಾನಭೋಗರು, ಕಂದಾಯ ಇಲಾಖೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಆಡಳಿತ ನಡೆಸುತ್ತಿದ್ದರು.

ವಿಶೇಷವೆಂದರೆ ಬೆಳಗಾವಿ, ದಾರವಾಡ ಕಡೆಯ ಕಂದಾಯ ಪದಕೋಶವು ಹೆಚ್ಚಾಗಿ ಮರಾಠಿಯಲ್ಲಿದ್ದವು. ಬಳ್ಳಾರಿ-ಮಂಗಳೂರು, ಕೊಳ್ಳೆಗಾಲಗಳಲ್ಲಿ ಕಂದಾಯ ದಾಖಲೆಗಳು ತಮಿಳು ಭಾಷೆಯಲ್ಲಿದ್ದವು. ಮೈಸೂರು ಪ್ರಾಂತ್ಯದಲ್ಲಿ ಕನ್ನಡದಲ್ಲಿ ಮತ್ತು ಹೈದರಾಬಾದ್‌ -ಕರ್ನಾಟಕ ಪ್ರಾಂತ್ಯದಲ್ಲಿ ಉರ್ದು ಮಿಶ್ರಿತ ತೆಲುಗಿನಲ್ಲಿ ಇರುವುದುದರಿಂದ ಇಂದಿಗೂ ಕೂಡ ಕಂದಾಯ ಆಡಳಿತಗಾರರಿಗೆ ಕಂದಾಯ ಮತ್ತು ಸರ್ವೆ ಪದಕೋಶಗಳು ಕಬ್ಬಿಣದ ಕಡಲೆಯಾಗಿವೆ.

ಆರ್.ಟಿ.ಸಿ (ಪಹಣಿ ಪ್ರಮುಖ ಭೂ ದಾಖಲೆ)

ಪಹಣಿ ಪತ್ರಿಕೆಯಲ್ಲಿ ಸಾಮಾನ್ಯವಾಗಿ 16 ಕಾಲಂಗಳು ಇವೆ. ಕಾಲಂ 1 ರಿಂದ 9 ರಲ್ಲಿ ಸರ್ವೆ ನಂಬರ್, ವಿಸ್ತೀರ್ಣ, ಖರಾಬು, ಒಟ್ಟು ವಿಸ್ತೀರ್ಣ, ಹಕ್ಕುದಾರನ ಹೆಸರು, ಪ್ರತಿಯೊಬ್ಬರ ಖರಾಬು ವಿಸ್ತೀರ್ಣ ಮತ್ತು ಕಲಂ 11ರಲ್ಲಿ ಯಾವುದೇ ನಿಬಂಧನೆಗಳು, ಬ್ಯಾಂಕಿನ ಸಾಲದ ತಿರುವಳಿ, ಅಡಮಾನ, ಸರ್ಕಾರಿಜಮೀನು ಮಂಜೂರಾತಿ, ಆದೇಶಗಳು, ನ್ಯಾಯಾಲಯಗಳ ವಿವರಗಳು ಮತ್ತು ಕಲಂ 12ರಿಂದ 16 ರಲ್ಲಿ ಸಾಗುವಳಿ ಪದ್ದತಿ, ಗೇಣಿ ಮತ್ತು ಭೂವಿಯ ಉಪಯೋಗ, ಬೆಳೆಯ ಮತ್ತು ಬೆಳೆಯ ವಿಸ್ತೀರ್ಣಗಳ ಬಗ್ಗೆ ದಾಖಲು ಇರುತ್ತದೆ. ಈ ಪಹಣಿಗಳನ್ನು 1965ರಲ್ಲಿ ಶ್ಯಾನುಭೋಗರು ಕೈಬರಹದಲ್ಲಿ ಬರೆಯುತ್ತಿದ್ದರು. ತದನಂತರ ಗ್ರಾಮ ಲೆಕ್ಕಾಧಿಕಾರಿಗಳು 2000ನೇ ಸಾಲಿನವರೆಗೂ ಕೈಬರಹದಲ್ಲಿ ಬರೆದರು. ಅಲ್ಲದೇ ಯಾವುದೇ ಕ್ರಯವಿಕ್ರಯ, ಪವತಿ, ಭಾಗ-ವಿಭಾಗ, ಹಕ್ಕು ಬಿಡುಗಡೆ, ಋಣಗಳ ಬಗ್ಗೆ ವ್ಯವಹಾರಗಳು ನಡೆದಾಗ ಯಾರಿಂದ ಯಾರಿಗೆ ಹಕ್ಕು ವರ್ಗಾವಣೆಯಾಯಿತು ಎಂಬ ಮಾಹಿತಿಯನ್ನು ‘ಮ್ಯುಟೇಷನ್’ ಎಂದು ಕರೆಯುತ್ತಾರೆ. ಕೆ.ಎಲ್.ಆರ್. 1964 ಕಲಂ 128 ಮತ್ತು 129 ರಂತೆ ಶ್ಯಾನಭೋಗರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ನಮೂನೆ 21 ಮತ್ತು 12ರಲ್ಲಿ ನೋಟಿಸ್ ಹೊರಡಿಸಿ ಯಾವುದೇ ತಕಾರರು ಇಲ್ಲದಿದ್ದಲ್ಲಿ ಪಹಣಿ ಮತ್ತು ಮ್ಯುಟೇಷನ್‌ನಲ್ಲಿ ಕ್ರಯ, ಪವತಿ, ದಾನ ಮುಂತಾದವುಗಳಂತೆ ಬರೆಯುತ್ತಿದ್ದರು.

2000ನೇ ಸಾಲಿನಿಂದ ಕೈಬರಹದ ಪಹಣಿ ಮತ್ತು ಮ್ಯುಟೇಷನ್‌ಗಳನ್ನು ಗಣಕೀಕರಣವಾಯಿತು. ಆದರೆ ಅಂದಿನ ಹಸ್ತಾಕ್ಷರಗಳನ್ನು ಕಂಡುಹಿಡಿಯುವುದು ಮತ್ತು ಪಹಣಿ ಪತ್ರಿಕೆಯಲ್ಲಿನ ದೋಷಗಳು ಮುಂತಾದವುಗಳಿಂದ ಇಂದಿಗೂ ಕೂಡ ಕಂದಾಯ ದಾಖಲೆಗಳ ತಿದ್ದುಪಡಿ ಪ್ರಕರಣಗಳು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇರುತ್ತದೆ.

ವಿಡಿಯೋ ನೋಡಿ:ಸರ್ಕಾರಿ ಸೇವೆ ಪಡೆಯುವುದು ಹೇಗೆ?ಹೇಗಿರುತ್ತದೆ ಪೋಡಿ ಪ್ರಕ್ರಿಯೆ ?

ಸಾಫ್ಟ್‌ವೇರ್‌ ಪಾರಮ್ಯ

ಕಂದಾಯ ಇಲಾಖೆಯ ‘ಭೂಮಿ’ ತಂತ್ರಾಂಶ, ಸರ್ವೆ ಇಲಾಖೆಯಲ್ಲಿ ಮೋಜಣಿ, ‘ದಿಶಾಂಕ್‌’ ಮತ್ತು ‘ಸ್ವಾವಲಂಬಿ’ ತಂತ್ರಾಂಶಗಳು, ನೋಂದಣಿ ಇಲಾಖೆಯ ‘ಕಾವೇರಿ’ ತಂತ್ರಾಂಶ ಮತ್ತು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ‘ಪಂಚತಂತ್ರ’ ತತ್ರಾಂಶಗಳು ಒಂದಕ್ಕೊಂದು ಅಂತರಿಕ ಕೊಂಡಿ (Interlink) ಹೊಂದಿವೆ.

ಜಮೀನು ಪರಭಾರೆ, ಮಾರಾಟದ ದಾಖಲೆ ಪ್ರಕ್ರಿಯೆ

ಯಾವುದೇ ದಸ್ತಾವೇಜು ನೋಂದಣಿ ಇಲಾಖೆಯಲ್ಲಿ ನೋಂದಣಿಯ ಪೂರ್ವದಲ್ಲಿ, ಸರ್ವೆ ಇಲಾಖೆಯ ಮೋಜಣಿ ತತ್ರಾಂಶದಲ್ಲಿ 11ಇ ನಕ್ಷೆ/ಭೂಪರಿವರ್ತನೆ ನಕ್ಷೆಗಳಾಗಿರಬೇಕು ಮತ್ತು ಭೂಮಿ ತಂತ್ರಾಂಶದ ಪಹಣಿ ಮತ್ತು ಮ್ಯುಟೇಷನ್‌ಗಳಲ್ಲಿ ಮಾರಾಟಗಾರನ ಹೆಸರಿರಬೇಕು. ಇವುಗಳೆಲ್ಲವನ್ನು ಪರಿಶೀಲಿಸಿಕೊಂಡು ಉಪ ನೋಂದಣಾಧಿಕಾರಿಯವರು ದಸ್ತಾವೇಜನ್ನು ನೋಂದಣಿ ಮಾಡಿದ ಕೂಡಲೆ ಎಲ್ಲಾ ಸ್ಕ್ಯಾನ್‌ ಆದ ದಾಖಲೆಗಳನ್ನು ನೇರವಾಗಿ ಚೆಕ್ ಲಿಸ್ಟ್‌ನೊಂದಿಗೆ ಭೂಮಿ ತಂತ್ರಾಂಶದಲ್ಲಿ ಬಂದ ನಂತರ ತಾಲ್ಲೂಕು ಕಚೇರಿಯ ಆಪರೇಟರ್ ಪ್ರಿಂಟ್ ತೆಗೆದು ರಾಜಸ್ವ ನಿರೀಕ್ಷಕರಿಗೆ ಹಸ್ತಾಂತರಿಸುತ್ತಾರೆ. ನಂತರ ಮೂವತ್ತು ದಿನಗಳ ಅವಧಿಯ ಒಳಗಾಗಿ ನೋಂದಣಿ ಬಗ್ಗೆ ಗ್ರಾಮದಲ್ಲಿ ಪ್ರಚುರಪಡಿಸಿದ ನಂತರ ಯಾವುದೇ ತಕಾರರು ಇಲ್ಲದಿದ್ದಲ್ಲಿ ಆನ್‌ಲೈನ್‌ ಮುಖಾಂತರ ಖಾತಾ ಪಹಣಿ ಮಾಡುತ್ತಾರೆ. ಕಂಪ್ಯೂಟರ್‌ ವ್ಯವಸ್ಥೆಯಿಂದ ಪ್ರತಿಹಂತದಲ್ಲೂ ಎಲ್ಲಿ ಬಾಕಿ ಇರುವ ಬಗ್ಗೆ ಮತ್ತು ಸಾಧಿಸಿದ ಪ್ರಗತಿಯನ್ನು ಭೂಮಿ ಡೇಟಾ ಬೇಸ್‌ನಲ್ಲಿ ಪರಿಶೀಲಿಸಬಹುದು.

ಭೂಪರಿವರ್ತಿತ ಮತ್ತು ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳಲ್ಲಿನ ನಿವೇಶನಗಳು, ಸ್ಥಳೀಯ ನಗರ ಪಾಲಿಕೆ / ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಕಂದಾಯ ಖಾತಾಗಳನ್ನು ಉಪನೋಂದಣಾಧಿಕಾರಿಗಳು ಪಂಚತಂತ್ರ ಮತ್ತು ನಗರ ಪಾಲಿಕೆಗಳ ಆ್ಯಪ್‌ನಿಂದ ದಾಖಲೆಗಳನ್ನು ಪರಿಶೀಲಿಸಿಕೊಂಡು ನೋಂದಣಿ ಮಾಡಿದ ನಂತರ ದಸ್ತಾವೇಜುಗಳು ನೇರವಾಗಿ ಗ್ರಾಮಾಂತರ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮತ್ತು ನಗರ ಪ್ರದೇಶದ ದಾಖಲೆಗಳು ಮಹಾನಗರ ಪಾಲಿಕೆ/ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆನ್‌ಲೈನ್ ಮೂಲಕ ಬರುತ್ತವೆ. ಮೇಲ್ಕಂಡ ನಾಲ್ಕು ತಂತ್ರಾಂಶಗಳು ಒಂದಕ್ಕೊಂದು ಆಂತರಿಕ ಕೊಂಡಿ ಹೊಂದಿವೆ. ಸಾರ್ವಜನಿಕರು ನೋಂದಣಿಯಾದ ನಂತರ ವಿವಿಧ ಇಲಾಖೆಗಳಿಗೆ ಎಡತಾಕುವ ಪ್ರಮೇಯವು ಉದ್ಭವವಾಗುವುದಿಲ್ಲ.

ಪ್ರತಿವಾರ ಮತ್ತು ತಿಂಗಳಿಗೊಮ್ಮೆ ಕಂದಾಯ ಮತ್ತು ಸರ್ವೆ ದಾಖಲೆಗಳ ತಿದ್ದುಪಡಿಯ ಬಗ್ಗೆ ಸಾಧಿಸಿದ ಪ್ರಗತಿ ಪರಿಶೀಲನೆಯನ್ನು ಆಯುಕ್ತರು, ಸರ್ವೆ ಮತ್ತು ಭೂದಾಖಲೆಗಳ ಇಲಾಖೆಯವರು ತಹಶೀಲ್ದಾರರು, ಎ.ಡಿ.ಎಲ್.ಆರ್ / ಡಿ.ಡಿ.ಎಲ್.ಆರ್ ಮತ್ತು ಉಪವಿಭಾಗಾಧಿಕಾರಿಗಳ ಸಭೆಯನ್ನು ನಡೆಸಿ ಪರಿಶೀಲಿಸುತ್ತಾರೆ ಮತ್ತು ಪ್ರತಿಯೊಬ್ಬ ಅಧಿಕಾರಿಗಳಿಗೆ ನಿಗದಿತ ಗುರಿ ನೀಡಲಾಗಿರುತ್ತದೆ. ಪಹಣಿ ಮತ್ತು ಸರ್ವೆ ದಾಖಲೆಗಳು ತಿದ್ದುಪಡಿಯಲ್ಲಿ ಸಾರ್ವಜನಿಕರು ಯಾವುದೇ ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆಯಿಲ್ಲ ಮತ್ತು ಬಹು ಮಾಲೀಕತ್ವದ ಪಹಣಿಗಳ ತಿದ್ದುಪಡಿಯಲ್ಲಿ ನ್ಯೂನತೆ ಇದ್ದಲ್ಲಿ ಉಪವಿಭಾಗಾಧಿಕಾರಿಗಳು ಕೆ.ಎಲ್.ಆರ್ 136 (2) ರಡಿ ನೋಟಿಸ್ ನೀಡಿ ದಾಖಲೆ ಪಡೆದು ತಿದ್ದುಪಡಿ ಮಾಡುತ್ತಾರೆ.

ಸಾರ್ವಜನಿಕರು ತಮ್ಮ ಬೆರಳ ತುದಿಯಲ್ಲಿ ಪಹಣಿ, ಮ್ಯುಟೇಷನ್, ಸರ್ವೆ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ನೋಡಬಹುದು ಮತ್ತು ಪಡೆಯಬಹುದು. ಅಲ್ಲದೆ ದಿಶಾಂಕ್‌ ಆ್ಯಪ್‌ನಲ್ಲಿ ಕರ್ನಾಟಕದ ಯಾವುದೇ ಹಳ್ಳಿಯ ಸರ್ವೆ ನಂಬರ್, ಪಹಣಿ ವಿವರ, ಬೌಗೋಳಿಕ ಮೇಲ್ಮಮೈ ಮತ್ತು ಪೋಡುಗಳ ಬಗ್ಗೆ ಸ್ವಯಂ ಆಗಿ ಪರಿಶೀಲಿಸಬಹುದು.

ಲೇಖಕರು:ಕಾರ್ಯದರ್ಶಿ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಮತ್ತು
ವಿಶೇಷ ಭೂಸ್ವಾಧೀನಾಧಿಕಾರಿ, ಡಾ.ಕೆ.ಶಿವರಾಮ ಕಾರಂತ ಬಡಾವಣೆ,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

***

ಮುಂದಿನ ಸಂಚಿಕೆಯಲ್ಲಿ:ಕರ್ನಾಟಕದಲ್ಲಿ ಭೂ ದಾಖಲೆಗಳು ಬಂದ ಇತಿಹಾಸ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT