ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಟಿ ಎಚ್ಚರಿಕೆ ಕಡೆಗಣನೆ: ಸರ್ಕಾರದ ವೈಫಲ್ಯದಿಂದ ₹2,900 ಕೋಟಿ ನಷ್ಟ

Published 10 ಮಾರ್ಚ್ 2024, 23:44 IST
Last Updated 10 ಮಾರ್ಚ್ 2024, 23:44 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿರಂತರ ಎಚ್ಚರಿಕೆಗಳ ಮಧ್ಯೆಯೂ, ಅಪಾಯಕಾರಿ ಘನ ಮತ್ತು ದ್ರವ ತ್ಯಾಜ್ಯಗಳ ವಿಲೇವಾರಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾಗಿ ಬೊಕ್ಕಸಕ್ಕೆ ₹2,900 ಕೋಟಿ ನಷ್ಟವಾಗಿದೆ’ ಎಂದು ಮಹಾಲೆಕ್ಕ ಪ‌ರಿಶೋಧಕರು ಮತ್ತು ಮಹಾಲೇಖಪಾಲರ ಹಣಕಾಸು ಲೆಕ್ಕ ಪರಿಶೋಧನಾ ಘಟಕ (ಎಫ್ಎಡಬ್ಲ್ಯು) ಅಭಿಪ್ರಾಯಪಟ್ಟಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಫೆಬ್ರುವರಿ 21ರಂದು ಪತ್ರ ಬರೆದಿರುವ ಪ್ರಧಾನ ಅಕೌಂಟೆಂಟ್‌ ಜನರಲ್‌, ‘ಪರಿಸರಕ್ಕೆ ಆಗಿರುವ ನಷ್ಟವನ್ನು ಮರುಸ್ಥಾಪಿಸುವ ಉದ್ದೇಶದಿಂದ ಎನ್‌ಜಿಟಿ ನೀಡಿದ್ದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ತಮ್ಮ ಮಟ್ಟದಲ್ಲಿ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡಬೇಕು’ ಎಂದು ಕೋರಿದ್ದಾರೆ.

‘ರಾಜ್ಯ ಸರ್ಕಾರ, ಅದರಲ್ಲೂ ವಿಶೇಷವಾಗಿ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಿಂದ ಪದೇ ಪದೇ ಆಗಿರುವ ವೈಫಲ್ಯಗಳು ಮತ್ತು ಎನ್‌ಜಿಟಿ ಆಗಾಗ ನೀಡಿದ್ದ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಇಷ್ಟು ದೊಡ್ಡ ಪ್ರಮಾಣದ ನಷ್ಟ ಆಗಿದೆ ಎಂದೂ ಎಫ್ಎಡಬ್ಲ್ಯು ಗಮನಿಸಿದೆ’ ಎಂಬ ಉಲ್ಲೇಖ ಪತ್ರದಲ್ಲಿದೆ. 

ಘನ ಮತ್ತು ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ ಪರಿಸರಕ್ಕೆ ಹಾನಿ ಉಂಟು ಮಾಡಿದ್ದರಿಂದ ಸರ್ಕಾರಕ್ಕೆ 2022ರ ಅಕ್ಟೋಬರ್‌ 13ರಂದು ಎನ್‌ಜಿಟಿ ₹ 3,400 ಕೋಟಿ ದಂಡ ವಿಧಿಸಿತ್ತು. ಎರಡು ತಿಂಗಳಲ್ಲಿ ಪ್ರತ್ಯೇಕ ಖಾತೆಯಲ್ಲಿ ಹಣ ಠೇವಣಿ ಇಡಬೇಕು. ಆರು ತಿಂಗಳಲ್ಲಿ ಮುಖ್ಯ ಕಾರ್ಯದರ್ಶಿ ನಿರ್ದೇಶನದಂತೆ ಪರಿಸರಕ್ಕೆ ಆಗಿರುವ ನಷ್ಟವನ್ನು ಮರುಸ್ಥಾಪಿಸುವ ಕಾರ್ಯ ಆರಂಭಿಸಬೇಕು ಎಂದೂ ಆದೇಶಿಸಿತ್ತು.

ಈ ವಿಷಯವನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಪ್ರಧಾನ ಅಕೌಂಟೆಂಟ್‌ ಜನರಲ್‌, ‘ಎನ್‌ಜಿಟಿ ನೀಡಿದ್ದ ಆದೇಶ ಪಾಲಿಸಲು ಅನುಷ್ಠಾನಗೊಳಿಸುವ ಯೋಜನೆಗಳಿಗೆ ಹಂಚಿಕೆ ಮಾಡಿದ ಅನುದಾನ, ಮಾಡಿರುವ ವೆಚ್ಚದ ವಿವರಗಳನ್ನು ನೀಡಬೇಕು’ ಎಂದೂ ಪತ್ರದಲ್ಲಿ ಕೋರಿದ್ದಾರೆ.

‘ಎನ್‌ಜಿಟಿ ದಂಡ ವಿಧಿಸಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು (ಯೋಜನೆ), ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಹೆಸರಿನಲ್ಲಿ ಹೊಸತಾಗಿ ವೈಯಕ್ತಿಕ ಠೇವಣಿ (ಪಿಡಿ) ಖಾತೆ ತೆರೆದು 2023ರ ಮಾರ್ಚ್‌ 24ರಂದು ₹ 2,467.93 ಕೋಟಿ ಠೇವಣಿ ಇಟ್ಟಿರುವುದನ್ನೂ ಹಣಕಾಸು ಲೆಕ್ಕ ಪರಿಶೋಧನಾ ವಿಭಾಗ ಗಮನಿಸಿದೆ. ವಿವಿಧ ಬಂಡವಾಳ ವೆಚ್ಚದ ಶೀರ್ಷಿಕೆಯಡಿ ಲಭ್ಯವಿದ್ದ ಮೊತ್ತವನ್ನು ‘ವಿಶೇಷ ಮೂಲಸೌಲಭ್ಯ ಯೋಜನೆಗಳು ಅಥವಾ ಬೆಂಗಳೂರು– ಬಂಡವಾಳ ವೆಚ್ಚ’ ಅಡಿ ಮರು ವಿನಿಯೋಗ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ’ ಎಂದೂ ಈ ಪತ್ರದಲ್ಲಿದೆ.

‘ಇತರ ಮೂಲಸೌಲಭ್ಯ ಕಾಮಗಾರಿಗಳಿಗೆ ಮೀಸಲಿಟ್ಟ, ವೆಚ್ಚವಾಗದೆ ಉಳಿದಿರುವ ₹ 2,900 ಕೋಟಿಯನ್ನು ಎನ್‌ಜಿಟಿ ನೀಡಿರುವ ಆದೇಶದ ಪಾಲನೆಗೆ ನಗರಾಭಿವೃದ್ಧಿ ಇಲಾಖೆ ಬಳಸಿದರೆ, ಬಿಬಿಎಂಪಿ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ಮೂಲಸೌಲಭ್ಯ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ಪರಿಹಾರಕ್ಕೆ ಹಣ ಹೊಂದಿಸುವುದು ಮತ್ತು ಬೆಂಗಳೂರು ಹೊರತುಪಡಿಸಿ ಇತರೆಡೆ ಯೋಜನೆ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಕೂಡಾ ಗಮನಕ್ಕೆ ಬಂದಿದೆ’ ಎಂದು ತಿಳಿಸಿದ್ದಾರೆ.

ಪ್ರಧಾನ ಅಕೌಂಟಂಟ್‌ ಜನರಲ್‌ ಸಿ.ಎಸ್‌ಗೆ ನೀಡಿರುವ ಸೂಚನೆ ಏನು?

  • ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ಆದೇಶ ಪಾಲಿಸುವ ನಿಟ್ಟಿನಲ್ಲಿ ಪರಿಸರ ನಷ್ಟ ಮರುಸ್ಥಾಪನೆ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದ ಹಣ ಮತ್ತು ವೆಚ್ಚದ ವಿವರ ನೀಡಬೇಕು

  • ಪರಿಸರಕ್ಕೆ ಹಾನಿ ಉಂಟು ಮಾಡುವ ಘನ ಮತ್ತು ದ್ರವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ನೀಡಿದ್ದ ನಿರ್ದೇಶನವನ್ನು ಗಡುವಿನೊಳಗೆ (2021 ಏಪ್ರಿಲ್‌ 7) ಪಾಲಿಸದಿರಲು ಕಾರಣ ವಿವರಿಸಬೇಕು

  • ಆದೇಶದಲ್ಲಿ ಉಲ್ಲೇಖಿಸಿದ್ದ ತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟ ಜಾಗಗಳು ಮತ್ತು ಅವುಗಳ ಸದ್ಯದ ಸ್ಥಿತಿಯ ಮಾಹಿತಿ ನೀಡಬೇಕು

  • ಎನ್‌ಜಿಟಿ ಆದೇಶದಂತೆ ಆರು ತಿಂಗಳಲ್ಲಿ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಪ್ರಗತಿ ವರದಿಯ ಎರಡು ಪ್ರತಿ ನೀಡಬೇಕು

  • ಚಂದಾಪುರ ಕೆರೆ (ಬೆಂಗಳೂರು) ಸುತ್ತಮುತ್ತ ಪರಿಸರ ಹಾನಿ ಸರಿಪಡಿಸಲು
    ₹ 500 ಕೋಟಿ ವರ್ಗಾವಣೆ ವಿವರ ಕೊಡಬೇಕು

  • ₹ 2,900 ಕೋಟಿಯಲ್ಲಿ ಬಾಕಿ ಮೊತ್ತ ₹ 432.07 ಕೋಟಿ ವರ್ಗಾವಣೆ ಮಾಡಿದ ವಿವರ ಒದಗಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT