ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂದ್ರರನ್ನು ಶಿಕ್ಷಣ ವಂಚಿತರಾಗಿಸುವುದೇ ಎನ್‌ಇಪಿ ತಂತ್ರ: ಸಚಿವ ಮಹಾದೇವಪ್ಪ

Published 28 ಜುಲೈ 2023, 16:15 IST
Last Updated 28 ಜುಲೈ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ಶೂದ್ರರನ್ನು‌ ಶಿಕ್ಷಣ ವಂಚಿತರನ್ನಾಗಿ ಮಾಡುವ ದೂರಗಾಮಿ ತಂತ್ರವೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಗುಪ್ತ ಕಾರ್ಯಸೂಚಿ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹಾದೇವಪ್ಪ ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿ ರೂಪಿಸಲು ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶೇ 2.5ರಷ್ಟಿರುವ ಒಂದು ವರ್ಗದವರು ಸಾವಿರಾರು ವರ್ಷಗಳಿಂದ ಶೂದ್ರ ಸಮುದಾಯಕ್ಕೆ ಶಿಕ್ಷಣ ನಿರಾಕರಿಸುತ್ತಾ ಬಂದಿದ್ದರು. ಅಕ್ಷರ ವಂಚಿತರಿಗೆ ಸಾರ್ವತ್ರಿಕ ಶಿಕ್ಷಣ ಜಾರಿಗೊಳಿಸುವ ಕುರಿತು ಬ್ರಿಟಿಷರು ರಚಿಸಿದ್ದ ಸಮಿತಿಗಳು ಭಾರತಕ್ಕೆ ಬಂದಾಗ ಅದೇ ವರ್ಗದ ಜನರು ‘ಗೋ ಬ್ಯಾಕ್‌’ ಹೇಳಿದ್ದರು. ಈ ವರ್ಗದ ಹಿತಾಸಕ್ತಿಗಾಗಿಯೇ ಎನ್‌ಇಪಿ ರೂಪುಗೊಂಡಿದೆ. ಶಿಕ್ಷಣದ ಮೂಲಕ ಮನು ಸಂಸ್ಕೃತಿಯ ಪುನರ್‌ ಹೇರಿಕೆಗೆ ಸಿದ್ಧತೆ ನಡೆದಿದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ವೈಚಾರಿಕ ಶಿಕ್ಷಣದ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವುದು ಸರ್ಕಾರದ ಆಶಯ. ಸರ್ವಜನಾಂಗದ ಶಾಂತಿಯ ತೋಟದ ನಿರ್ಮಾಣಕ್ಕೆ ಪೂರಕವಾದ ಜನಪರ ಶಿಕ್ಷಣ ನೀತಿ ರೂಪಿಸಲು ಶಿಕ್ಷಣ ಇಲಾಖೆ ಬದ್ಧವಾಗಿದೆ. 3.5 ಲಕ್ಷ ಶಿಕ್ಷಕರು, ಒಂದೂಕಾಲು ಕೋಟಿ ಮಕ್ಕಳು ಇದ್ದಾರೆ. ಎರಡೂವರೆ ಕೋಟಿ ಪೋಷಕರ ಹಿತಾಸಕ್ತಿಗೆ ಅನುಗುಣವಾಗಿ ಹೊಸ ಶಿಕ್ಷಣ ನೀತಿ ರೂಪಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಎನ್‌ಇಪಿ ಅಂತಿಮ ರೂಪ ಪಡೆಯುವ ಮೊದಲೇ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲಾಯಿತು. ಇದರಿಂದ ಅಧ್ಯಾಪಕರು, ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದರು. ಹಿಂದೆ ಇದ್ದ ಶಿಕ್ಷಣ ನೀತಿ ಫಲವಾಗಿ ಉತ್ತಮ ವಿದ್ಯಾರ್ಥಿಗಳು ರೂಪುಗೊಂಡಿದ್ದರು. ಅವರ ಶ್ರಮದಿಂದ ಬೆಂಗಳೂರಿಗೆ ‘ಸಿಲಿಕಾನ್ ವ್ಯಾಲಿ’ ಎಂಬ ಖ್ಯಾತಿ ದೊರೆಯಿತು ಎಂದು ಹೇಳಿದರು.

ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್‌ ಥೋರಟ್‌, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪ, ಮೌಂಟ್‌ ಕಾರ್ಮೆಲ್‌ ಸ್ಕೂಲ್‌ ಡೀನ್‌ ಮೈಕೆಲ್‌ ವಿಲಿಯಮ್ಸ್‌, ಕರ್ನಾಟಕ ಪ್ರಾದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿ ಫ್ರಾನ್ಸಿಸ್‌ ಅಲ್ಮೆಡಾ ಅವರು ಶಿಕ್ಷಣ ನೀತಿಗಳ ಕುರಿತು ವಿಚಾರಗಳನ್ನು ಪ್ರಸ್ತುತಪಡಿಸಿದರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್‌.ರಾಜಶೇಖರ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT