ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಆಚರಣೆಗಳ ನೆಪದಲ್ಲಿ ಶಬ್ದ ಮಾಲಿನ್ಯ: SC ನ್ಯಾಯಮೂರ್ತಿ ಎ.ಎಸ್‌.ಓಕಾ ಕಳವಳ

Published 13 ಏಪ್ರಿಲ್ 2024, 13:46 IST
Last Updated 13 ಏಪ್ರಿಲ್ 2024, 13:46 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರ್ಮಿಕ ಉತ್ಸವಗಳ ಆಚರಣೆ ನೆಪದಲ್ಲಿ ರಾತ್ರಿ 10 ಗಂಟೆಯ ನಂತರವೂ ಭಾರಿ ಉಲ್ಲಾಸಗಳಿಂದ ಸಡಗರ ವ್ಯಕ್ತಪಡಿಸುವ ಜನರು ಶಬ್ದಮಾಲಿನ್ಯ ಉಂಟುಮಾಡುವುದರ ಜೊತೆಗೆ ಬೆದರಿಕೆ ಹುಟ್ಟಿಸುತ್ತಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ತೀವ್ರ ಕಳವಳ ವ್ಯಕ್ತಪಡಿಸಿದರು.

ಹೈಕೋರ್ಟ್‌ನ ಹಿರಿಯ ವಕೀಲ ಡಿ.ಎಲ್‌.ಎನ್‌.ರಾವ್ ಪ್ರತಿಷ್ಠಾನದ ವತಿಯಿಂದ ಶನಿವಾರ ಇಲ್ಲಿ ಆಯೋಜಿಸಲಾಗಿದ್ದ, ‘ಪರಿಸರ ನ್ಯಾಯವನ್ನು ನಿಶ್ಚಿತಗೊಳಿಸುವ ಹಾದಿಗಳು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ‘ಇಂದು ಎಲ್ಲೆಡೆ ವಾಹನಗಳ ಸಮಸ್ಯೆ ಭಾರಿ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವೇಗದ ನಗರೀಕರಣದಿಂದ ಪರಿಸರ ಕಲುಷಿತಗೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು. 

‘ನಮ್ಮ ಅಭಿವೃದ್ಧಿ ಪರಿಕಲ್ಪನೆಯೇ ಸರಿಯಿಲ್ಲ. ಅಭಿವೃದ್ಧಿ ಎಂದರೆ ಸೇತುವೆ, ರಸ್ತೆಗಳ ನಿರ್ಮಾಣ ಅಥವಾ ಮೆಟ್ರೊ ರೈಲುಗಳ ಸಂಪರ್ಕ ಕಲ್ಪಿಸುವುದು ಎಂಬಂತಹ ತಪ್ಪು ಅಬಿಪ್ರಾಯ ತಲೆಯಲ್ಲಿದೆ. ಕಟ್ಟಕಡೆಯ ಬಡವನಿಗೆ ಒಂದು ಪುಟ್ಟ ಮನೆ, ಆತನ ಮಕ್ಕಳಿಗೆ ಕೈಗೆಟುಕವ ದರದಲ್ಲಿ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಸಿಗುವಂತಾವುದೇ ನಿಜವಾದ ಅಭಿವೃದ್ಧಿ’ ಎಂದರು.

‘ನಾನು ಚಿಕ್ಕವನಿದ್ದಾಗ ಬೆಂಗಳೂರು ಹಸಿರಿನ ನಗರಿ ಎಂದು ಕೇಳುತ್ತಿದ್ದೆ. ಆದರೆ, ಇವತ್ತು ಬೆಂಗಳೂರಿನ ಪರಿಸರ ಗಮನಾರ್ವವಾಗಿ ಕ್ಷೀಣಿಸುತ್ತಿದೆ. ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೆರೆ, ನೆಲದಾಳದಲ್ಲಿನ ನೀರು ಬತ್ತಿ ಹೋಗುತ್ತಿದೆ. ಕೃಷಿಕರು ಕಂಗಲಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ, ಪ್ರತಿಯೊಂದು ಮರವೂ ನಮ್ಮ ಕುಟುಂಬದ ಸದಸ್ಯ ಎಂಬ ಸಂತ ತುಕಾರಾಮನ ಮಾತುಗಳು ಮಾರ್ಗದರ್ಶಕವಾಗಬೇಕು’ ಎಂದರು.

‘ಎಗ್ಗಿಲ್ಲದೆ ನೀರು, ಗಾಳಿಯನ್ನು ಕಲುಷಿತಗೊಳಿಸುತ್ತಿರುವ ಇಂದಿನ ದಿನಗಳಲ್ಲಿ ಪರಿಸರದ ಕಾನೂನುಗಳ ಅನುಷ್ಠಾನ ಅಂದುಕೊಂಡಂತೆ ಸಾಧ್ಯವಾಗುತ್ತಿಲ್ಲ. ಪರಿಸರ ನ್ಯಾಯವನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಮಕ್ಕಳಿಗೆ ಕಲಿಸುವಂತಾದರೆ ಮುಂದೆ ಅದೊಂದು ಅಭಿಯಾನವಾಗಿ ಪರಿಸರದ ಉಳಿವಿಗೆ ಎಡೆ ಮಾಡಿಕೊಡುತ್ತದೆ. ಬೇರೆ ಕಾನೂನುಗಳ ಜೊತೆಗೆ ಇದೂ ಒಂದು ಅವಿಭಾಜ್ಯ ಅಂಗವಾಗಬೇಕು. ಇದರ ವ್ಯಾಪ್ತಿ ಹಿಗ್ಗಬೇಕು’ ಎಂದರು.

ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಮತ್ತು ಡಿ.ಎಲ್‌.ಎನ್‌.ರಾವ್ ಮಾತನಾಡಿದರು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅನಂತ ರಾಮನಾಥ ಹೆಗಡೆ, ಸಿ.ಎಂ.ಪೂಣಚ್ಚ, ವಿಜಯಕುಮಾರ ಎ.ಪಾಟೀಲ್, ಶಿವಶಂಕರ ಅಮರಣ್ಣವರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಹಿರಿಯ ವಕೀಲರು, ಪರಿಸರ ಹೋರಾಟಗಾರರು ಉಪಸ್ಥಿತರಿದ್ದರು.

‘ಬ್ರ್ಯಾಂಡ್‌ ಮಾಡುವುದು ಸಲ್ಲ’

‘ಸಮಾಜದಲ್ಲಿನ ದಟ್ಟ ದರಿದ್ರರಿಗೂ ಒದಗಿಸುವ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವೇ ಪರಿಸರ ನ್ಯಾಯ. ಪರಿಸರ ಸಂರಕ್ಷಣೆಗಾಗಿ ಕೋರ್ಟ್‌ಗಳ ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಹೋರಾಡುವ ಉತ್ಸಾಹಿಗಳನ್ನು ಅಭಿವೃದ್ಧಿ ವಿರೋಧಿಗಳೆಂದು ಬ್ರ್ಯಾಂಡ್ ಮಾಡಲಾಗುತ್ತಿರುವುದು ಸಲ್ಲ’ ಎಂದರು.

‘ಇಂಥವರಿಗೆ ಸಹಕಾರ ಸಿಗುತ್ತಿಲ್ಲ. ಪ್ರತಿಯೊಬ್ಬ ಉತ್ಸಾಹಿಗಳೂ ಪರಿಸರ ಸಂರಕ್ಷಣೆಯನ್ನು ಒಂದು ಹೋರಾಟ ಎಂದೇ ಕೈಗೆತ್ತಿಕೊಳ್ಳಬೇಕು. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರವೇ ಕೋರ್ಟ್‌ಗಳು ಈ ವಿಷಯದಲ್ಲಿ ಯಶ ಕಾಣಲು ಸಾಧ್ಯ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT