ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬರ್ ಮುಖ್ಯವಲ್ಲ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ವಿಭಜನೆಯಾಗಲಿದೆ: ಬೊಮ್ಮಾಯಿ

ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಆಶ್ಚರ್ಯಕರ ಬೆಳವಣಿಗೆ ನಡೆದು, ಪಕ್ಷ ವಿಭಜನೆಯಾಗಿ ರಾಜ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
Published 21 ಮೇ 2024, 14:09 IST
Last Updated 21 ಮೇ 2024, 14:09 IST
ಅಕ್ಷರ ಗಾತ್ರ

ಕಲಬುರಗಿ: ‘ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಆಶ್ಚರ್ಯಕರ ಬೆಳವಣಿಗೆ ನಡೆದು, ಪಕ್ಷ ವಿಭಜನೆಯಾಗಿ ರಾಜ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಲಾಬಿ ಮತ್ತು ವ್ಯಕ್ತಿಗತ ಪೈಪೋಟಿ ಜೋರಾಗಿದೆ. ರಾಜಕೀಯವಾಗಿ ವಿಭಜನೆಯಾದರೂ ಆಶ್ಚರ್ಯವಿಲ್ಲ’ ಎಂದರು.

‘ಒಬ್ಬರು ಸಿಎಂ ಗಾದಿಗೆ ಏರಲು ತುದಿಗಾಲಲ್ಲಿ ನಿಂತಿದ್ದಾರೆ, ಮತ್ತೊಬ್ಬರು ಸಿಎಂ ಪಟ್ಟ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇಂತಹ ವ್ಯಕ್ತಿಗತ ಪೈಪೋಟಿ ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ರಾತ್ರೋರಾತ್ರಿ ಅಮೂಲಾಗ್ರ ಬದಲಾವಣೆ ತಂದ ನಿದರ್ಶನಗಳಿವೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಅವರು ರಾತ್ರೋರಾತ್ರಿ ರಾಜೀನಾಮೆ ಕೊಟ್ಟರು. 130ಕ್ಕೂ ಹೆಚ್ಚು ಸ್ಥಾನಗಳು ಗೆದ್ದು ದೇವರಾಜ ಅರಸು ಮುಖ್ಯಮಂತ್ರಿಯಾದರೂ ಕಾಂಗ್ರೆಸ್ ಪಕ್ಷ ವಿಭಜನೆಯಾಯಿತು. ಗುಂಡೂರಾವ್, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಬಿಟ್ಟು ಬೇರೆ ಯಾರೂ ಇರಲಿಲ್ಲ. ಆದರೂ ರಾತ್ರೋರಾತ್ರಿ ದೊಡ್ಡ ಬದಲಾವಣೆಯಾಗಿ ಸರ್ಕಾರ ಬಿದ್ದು, ಗುಂಡೂರಾವ್ ಮುಖ್ಯಮಂತ್ರಿಯಾದರು. ಮುಂದೆ ಬಂಗಾರಪ್ಪ, ಮೊಯ್ಲಿ ಅವರೂ ಸಿಎಂ ಆದರು’ ಎಂದು ಸ್ಮರಿಸಿದರು.

‘ರಾಜಕೀಯದಲ್ಲಿ ನಂಬರ್ ಮುಖ್ಯವಲ್ಲ, ರಾಜಕೀಯ ಬೆಳವಣಿಗೆ ಮುಖ್ಯವಾಗುತ್ತದೆ. ಭಿನ್ನಾಭಿಪ್ರಾಯಕ್ಕಿಂತ ರಾಜಕೀಯ ಮಹತ್ವಾಕಾಂಕ್ಷೆಯು ದೂರಗಾಮಿ ಪರಿಣಾಮ ಬೀರುತ್ತದೆ. ರಾಜ್ಯದ ಇತಿಹಾಸ ಗಮನಿಸಿದರೆ ಗೊತ್ತಾಗುತ್ತದೆ. ಫಲಿತಾಂಶ ನಂತರದ ರಾಜಕೀಯ ಬೆಳವಣಿಗೆಗಳನ್ನು ಎದುರು ನೋಡುತ್ತಿದ್ದೇವೆ’ ಎಂದರು.

‘ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವವರಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಕ್ಕು, ರಾಜಕೀಯದ ಬಲವೂ ಇರುವುದರಿಂದ ಕೊಲೆ, ಸೂಲಿಗೆ ಹೆಚ್ಚುತ್ತಿದೆ. ನಾಯಕತ್ವದ ಮುಸುಕಿನ ಗುದ್ದಾಟ ಸರ್ಕಾರದ ವಿಫಲತೆಗೆ ಸಾಕ್ಷಿ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT