ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಹುಲಿ ಅಭಯಾರಣ್ಯ ವಿಸ್ತರಣೆ; ರಾಜ್ಯ ಸರ್ಕಾರಕ್ಕೆ ವನ್ಯಜೀವಿ ಮಂಡಳಿ ನಿರ್ದೇಶನ

Published : 6 ಸೆಪ್ಟೆಂಬರ್ 2024, 23:30 IST
Last Updated : 6 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ನವದೆಹಲಿ: ಭದ್ರಾ ಹುಲಿ ಅಭಯಾರಣ್ಯದ ಮೀಸಲು ಪ್ರದೇಶಕ್ಕೆ ಚೊರ್ಡೆನಹಳ್ಳಿ ರಾಜ್ಯ ಅರಣ್ಯ ಹಾಗೂ ಕೈತೊಟ್ಲು ಕಿರು ಅರಣ್ಯಗಳನ್ನು ಸೇರಿಸಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ದೇಶನ ನೀಡಿದೆ. 

ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ ಶೆಟ್ಟಿಹಳ್ಳಿ ವನ್ಯಜೀವಿ ಧಾಮ ಹಾಗೂ ಭದ್ರಾ ಹುಲಿ ಅಭಯಾರಣ್ಯದ ಗಡಿ ಬದಲಾವಣೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಶೆಟ್ಟಿಹಳ್ಳಿ ವನ್ಯಜೀವಿಧಾಮದ ವ್ಯಾಪ್ತಿಯನ್ನು 700 ಚದರ ಕಿ.ಮೀ.ಯಿಂದ 395 ಚದರ ಕಿ.ಮೀ.ಗೆ ಇಳಿಸಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. 

ಸಭೆಯಲ್ಲಿ ಕರ್ನಾಟಕದ ಮುಖ್ಯ ವನ್ಯಜೀವಿ ವಾರ್ಡನ್‌ (ಪಿಸಿಸಿಎಫ್‌) ಮಾತನಾಡಿ, ‘ರಾಜ್ಯದಲ್ಲಿ ವನ್ಯಜೀವಿ ಮಂಡಳಿ ಕೆಲವೇ ದಿನಗಳ ಹಿಂದೆಯಷ್ಟೇ ರಚನೆಯಾಗಿದೆ. ಭದ್ರಾ ಹುಲಿ ಅಭಯಾರಣ್ಯದ ಮೀಸಲು ಪ್ರದೇಶ ವಿಸ್ತರಣೆ ಬಗ್ಗೆ ರಾಜ್ಯ ವನ್ಯಜೀವಿ ಮಂಡಳಿಗೆ ಕೂಡಲೇ ಪ್ರಸ್ತಾವ ಸಲ್ಲಿಸಲಾಗುವುದು. ಅಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಕೇಂದ್ರಕ್ಕೆ ಕಳುಹಿಸಲಾಗುತ್ತದೆ’ ಎಂದರು. 

ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಶೆಟ್ಟಿಹಳ್ಳಿ ಅಭಯಾರಣ್ಯ ಪಶ್ಚಿಮ ಘಟ್ಟದ ಪೂರ್ವ ದಿಕ್ಕಿನಲ್ಲಿವೆ. ಇವು ಹೆಚ್ಚಿನ ಸಂಖ್ಯೆಯ ಹುಲಿಗಳು ಅಥವಾ ಯಾವುದೇ ದೊಡ್ಡ ಸಸ್ತನಿಗಳನ್ನು ದೀರ್ಘಾವಧಿಯಲ್ಲಿ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿಲ್ಲ. ಶೆಟ್ಟಿಹಳ್ಳಿ ಅಭಯಾರಣ್ಯವು ತುಂಗಾ ನದಿಯ ಉತ್ತರಕ್ಕೆ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ದಕ್ಷಿಣಕ್ಕೆ ಇದೆ. ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನದಿಯುದ್ದಕ್ಕೂ ಸೇರಿಸಬಹುದಾದ ಯಾವುದೇ ಪ್ರದೇಶಗಳಿಲ್ಲ. 

ಆದರೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಸಣ್ಣ ಸಣ್ಣ ಅರಣ್ಯ ಪ್ರದೇಶಗಳಿದ್ದು, ಅಭಯಾರಣ್ಯ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳ ನಡುವೆ ಪ್ರಮುಖ ಸಂಪರ್ಕ ಒದಗಿಸಲು ಮೀಸಲು ವಲಯಕ್ಕೆ ಸೇರಿಸಬಹುದು. ಆಡಳಿತಾತ್ಮಕ ದೃಷ್ಟಿಯಿಂದ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಚೊರ್ಡೆನಹಳ್ಳಿ ಹಾಗೂ ಕೈತೊಟ್ಲು ಅರಣ್ಯಗಳನ್ನು ಸೇರಿಸಲು ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸಹಮತ ವ್ಯಕ್ತಪಡಿಸಿದ್ದವು. 

ವನ್ಯಜೀವಿ ಮಂಡಳಿಗೆ ಜುಲೈ 8ರಂದು ಪತ್ರ ಬರೆದಿದ್ದ ಮುಖ್ಯ ವನ್ಯಜೀವಿ ವಾರ್ಡನ್‌, ‘ಈ ಎರಡೂ ಅರಣ್ಯಗಳನ್ನು ಭದ್ರಾ ಮೀಸಲು ಪ್ರದೇಶಕ್ಕೆ ಸೇರಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಆದರೆ, ಭದ್ರಾ ಮೀಸಲು ಪ್ರದೇಶ ವಿಸ್ತರಣೆಗೆ ಅನೇಕ ಗ್ರಾಮ ಪಂಚಾಯಿತಿಗಳು ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಗ್ರಾಮಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಿವೆ. ಸ್ಥಳೀಯ ಜನರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT