ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓಲಾ, ಉಬರ್ ಆಟೊ ಸೇವೆ ಸ್ಥಗಿತ: ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್

Published : 11 ಅಕ್ಟೋಬರ್ 2022, 13:59 IST
ಫಾಲೋ ಮಾಡಿ
Comments

ಬೆಂಗಳೂರು: ಓಲಾ, ಉಬರ್ ಮತ್ತು ರ್‍ಯಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೊರಿಕ್ಷಾ ಸೇವೆ ಬುಧವಾರದಿಂದಸ್ಥಗಿತವಾಗಲಿದೆ.

ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್,‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ –2016ರ ಪ್ರಕಾರ ಆಟೊ ಸೇವೆ ಒದಗಿಸಲು ಈ ಕಂಪನಿಗಳಿಗೆ ಅವಕಾಶ ಇಲ್ಲ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿದೆ. ಆಟೊ ಸೇವೆಯನ್ನು ಆ್ಯಪ್‌ನಿಂದ ತೆಗೆಯಲುಸೂಚನೆ ನೀಡಿದ್ದೇವೆ. ತೆಗೆಯದಿದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಈ ಆ್ಯಪ್‌ಗಳಲ್ಲಿಆಟೊರಿಕ್ಷಾ ಸೇವೆ ಸ್ಥಗಿತಗೊಳಿಸಲಾಗುವುದು’ ಎಂದುಹೇಳಿದರು.

‘ಆಟೊ ಸೇವೆ ಅನಧಿಕೃತ ಆಗಿರುವುದರಿಂದ ಆಟೊ ಚಾಲಕರು ಮತ್ತು ಪ್ರಯಾಣಿಕರು ಆ್ಯಪ್‌ನಲ್ಲಿ ಈ ಸೇವೆ ಬಳಕೆ ಮಾಡಬಾರದು. ಬಳಕೆ ಮಾಡಿ ತೊಂದರೆ ಅನುಭವಿಸಿದರೆ ಅದಕ್ಕೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂಬ ಪ್ರಕಟಣೆಯನ್ನೂ ಹೊರಡಿಸಲಾಗುವುದು’ ಎಂದು ಟಿಎಚ್‌ಎಂ ಕುಮಾರ್ ತಿಳಿಸಿದರು.

‘₹5 ಸಾವಿರ ದಂಡ: ಚಾಲಕರಿಗಲ್ಲ’

ಅನಧಿಕೃತವಾಗಿ ಆ್ಯಪ್‌ಗಳಲ್ಲಿ ಆಟೊ ಸೇವೆ ಬಳಕೆ ಮಾಡಲು ಅವಕಾಶ ನೀಡಿದರೆ ಪ್ರತಿ ಆಟೊರಿಕ್ಷಾಕ್ಕೆ ತಲಾ ₹5 ಸಾವಿರದಂತೆ ದಂಡ ವಿಧಿಸಲಾಗುವುದು. ಆದರೆ, ಚಾಲಕರಿಗೆ ದಂಡ ವಿಧಿಸುವುದಿಲ್ಲ, ಆ್ಯಪ್ ಮುನ್ನಡೆಸುವ ಅಗ್ರಿಗೇಟರ್ ಕಂಪನಿಗಳಿಗೆ ದಂಡ ಬೀಳಲಿದೆ ಎಂದು ಟಿಎಚ್‌ಎಂ ಕುಮಾರ್ ಸ್ಪಷ್ಟಪಡಿಸಿದರು.

ಆ್ಯಪ್ ಚಾಲ್ತಿಯಲ್ಲಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಅದನ್ನು ಆಧರಿಸಿ ದಂಡ ವಿಧಿಸಲಾಗುವುದು. ದಂಡದ ಮೊತ್ತವನ್ನು ಆ ಕಂಪನಿಗಳಿಂದ ವಸೂಲಿ ಮಾಡಲಾಗುವುದು ಎಂದರು.

‘ಒಂದು ಬಾರಿ ದಂಡ ಹಾಕಿ ಸುಮ್ಮನವಾಗುವುದಿಲ್ಲ. ಪ್ರತಿ ದಿನವೂ ದೂರುಗಳನ್ನು ಪರಿಶೀಲಿಸಿ ₹5 ಸಾವಿರದಂತೆ ದಂಡ ಹಾಕಲಾಗುವುದು. ಅದೆಲ್ಲದಕ್ಕೂ ಮುಂಚೆ ಆಟೊ ಸೇವೆಯನ್ನು ಆ್ಯಪ್‌ನಿಂದ ತೆಗೆಸಲು ಕ್ರಮ ಕೈಗೊಳಲಾಗುವುದು’ ಎಂದು ಹೇಳಿದರು.

ಸಾರ್ವಜನಿಕರು ದೂರು ನೀಡಲು ಸಹಾಯವಾಣಿ ತೆರೆಯಲಾಗಿದೆ. 9449863429 / 9449863426 ಸಂಖ್ಯೆಗೆ ದಾಖಲೆಗಳ ಸಹಿತ ವಾಟ್ಸ್‌ ಆ್ಯಪ್ ಮಾಡಬೇಕು ಎಂದು ಅವರು ತಿಳಿಸಿದರು.

ನಿರ್ದಾಕ್ಷಿಣ್ಯ ಕ್ರಮಕ್ಕೆ ಸಾರಿಗೆ ಇಲಾಖೆ ಹಿಂದೇಟು

ಹಲವು ಸುತ್ತಿನ ಮಾತುಕತೆ, ಮೌನಕ್ಕೆ ಶರಣಾದ ಅಗ್ರಿಗೇಟರ್ ಕಂಪನಿಗಳ ಪ್ರತಿನಿಧಿಗಳು, ನಿರ್ದಾಕ್ಷಿಣ್ಯ ಕ್ರಮಕ್ಕೆ ಅಧಿಕಾರಿಗಳ ಹಿಂದೇಟು...

ಸಾರಿಗೆ ಇಲಾಖೆಯಲ್ಲಿ ಮಂಗಳವಾದ ನಡೆದ ಈ ನಾಟಕೀಯ ಬೆಳವಣಿಗಳು ಅಧಿಕಾರಿಗಳ ಮೇಲಿರುವ ರಾಜಕೀಯ ಒತ್ತಡದ ಅನುಮಾನ ಹುಟ್ಟಿಸಿದವು.

ಸಭೆಯಲ್ಲಿಯೂ ಕಂಪನಿಗಳ ಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ನೀಡದೆ ಆಟೊ ಸೇವೆ ಒದಗಿಸುವ ಸಂಬಂಧ ಅರ್ಜಿ ನೀಡಿದರೆ ಸರ್ಕಾರಕ್ಕೆ ರವಾನೆ ಮಾಡಲಾಗುವುದು ಎಂದು ಆಯುಕ್ತರು ಹೇಳಿದರೆ, ಆಟೊರಿಕ್ಷಾಗಳಿಗೆ ಜಿಲ್ಲಾಡಳಿತ ನಿಗದಿ ಮಾಡಿರುವ ದರದ ಜತೆಗೆ ಜಿಎಸ್‌ಟಿ ಮೊತ್ತ ಸೇರಿಸಿ ಸೇವೆ ಮುಂದುವರಿಸಲು ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆದವು.

‘ಜಿಎಸ್‌ಟಿ ಜತೆಗೆ ಕನ್ವಿನಿಯನ್ಸ್‌ ಶುಲ್ಕ ವಿಧಿಸುವ ಬಗ್ಗೆಯೂ ಕಂಪನಿಗಳ ಪ್ರತಿನಿಧಿಗಳು ಪ್ರಸ್ತಾಪಿಸಿದ್ದಾರೆ. ಈ ವಿಷಯದಲ್ಲೂ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದರು. ಆ ಮೂಲಕ ಆಟೊ ಸೇವೆ ಮತ್ತೆ ಆರಂಭವಾಗಲಿದೆ ಎಂಬ ಸುಳಿವನ್ನೂ ಅವರು ನೀಡಿದರು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಾರಿಗೆ ಆಯುಕ್ತರು, ಅನಧಿಕೃತವಾಗಿ ಆಟೊ ಸೇವೆ ಒದಗಿಸಲು ಸಾರಿಗೆ ಇಲಾಖೆಯೇ ಅನುಮತಿ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಇಕ್ಕಟ್ಟಿಗೆ ಸಿಲುಕಿದರು.

ರಾಜಕೀಯ ಒತ್ತಡ ಇರುವುದು ಮೇಲ್ನೋಟಕ್ಕೆ ಕಂಡು ಬಂದರೂ ಅವರು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಆದರೆ, ಆ್ಯಪ್‌ಗಳಲ್ಲಿ ಆಟೊ ಸೇವೆ ಸ್ಥಗಿತಗೊಳಿಸುವಂತೆ ಕಂಪನಿ ಪ್ರತಿನಿಧಿಗಳಿಗೆ ಖಡಕ್ ಸೂಚನೆ ನೀಡಲು ತಡಕಾಡಿದರು. ಪದೇ ಪದೇ ಸಾರಿಗೆ ಸಚಿವರಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದರು.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿದರು. ಕೊನೆಗೂ ‘ನಾಳೆಯಿಂದ ಆಟೊ ಸೇವೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿಕೆ ನೀಡಿದರು.

ಬಳಿಕ ಮೂರು ಕಂಪನಿಗಳ ಪ್ರತಿನಿಧಿಗಳ ಜತೆ ಆಯುಕ್ತರು ಮತ್ತೊಂದು ಸುತ್ತಿನ ಸಭೆ ನಡೆಸಿದರು. ಆಟೊ ಸೇವೆ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಕಂಪನಿಗಳ ಪ್ರತಿನಿಧಿಗಳು ನಿರಾಕರಿಸಿದರು. ಕ್ಯಾಮೆರಾಗಳ ಸಹಿತ ಮಾಧ್ಯಮ ಪ್ರತಿನಿಧಿಗಳು ಹಿಂದೆ ಬಿದ್ದರೂ ತುಟಿ ಬಿಚ್ಚಲಿಲ್ಲ.

‘ಆಟೊ ಸೇವೆ ಗೊತ್ತಿರಲೇ ಇಲ್ಲ’

‘ಅಗ್ರಿಗೇಟರ್ ಕಂಪನಿಗಳು ಆಟೊ ಸೇವೆಯನ್ನೂ ನೀಡುತ್ತಿರುವುದು ಗೊತ್ತಿರಲೇ ಇಲ್ಲ’ ಎಂದು ಸಾರಿಗೆ ಆಯುಕ್ತ ಕುಮಾರ್ ಹೇಳಿದರು.

‘ಈವರೆಗೆ ಅನಧಿಕೃತವಾಗಿ ಆಟೊ ಸೇವೆ ನೀಡುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಏನು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಆ್ಯಪ್‌ಗಳಲ್ಲಿ ಆಟೊ ಸೇವೆಯೂ ಇರುವುದು ಗೊತ್ತಿರಲಿಲ್ಲ. ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ತಿಳಿಯಿತು’ ಎಂದರು.

‘ಟ್ಯಾಕ್ಸಿ ಸೇವೆಗೆ ನಿಗದಿಗಿಂತ ಎರಡು–ಮೂರು ಪಟ್ಟು ದರ ಪಡೆಯುತ್ತಿರುವ ಬಗ್ಗೆ ಈಗಲೂ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಷಯ ಗೊತ್ತಿಲ್ಲ. ಈಗ ನೀವು ಹೇಳಿದ್ದೀರಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT