ಬೆಂಗಳೂರು: ರಾಜ್ಯದಲ್ಲಿ ಅಂಗಾಂಗಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಸದ್ಯ 5,948 ಮಂದಿ ಅಂಗಾಂಗಗಳಿಗಾಗಿ ಎದುರು ನೋಡುತ್ತಿದ್ದಾರೆ.

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆ ಅಂಗಾಂಗಗಳ ಕೊರತೆ ನೀಗಿಸಲು ಶ್ರಮಿಸುತ್ತಿದೆ. ಅಂಗಾಂಗ ದಾನಕ್ಕೆ ಪ್ರೋತ್ಸಾಹಿಸುವ ಜತೆಗೆ ಅಂಗಾಂಗ ವೈಫಲ್ಯ ಆಗಿರುವ ರೋಗಿಗಳಿಗೆ ಅಂಗಾಂಗಗಳನ್ನು ಒದಗಿಸಲು ನೆರವಾಗುತ್ತಿದೆ.

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಪಡೆಯಲಾದ ಅಂಗಾಂಗಗಳನ್ನು ಸಂಸ್ಥೆಯಡಿ ಹೆಸರು ನೋಂದಾಯಿಸಿದವರಿಗೆ ಒದಗಿಸಲಾಗುತ್ತಿದೆ. ದಾನಿಗಳ ಕೊರತೆ, ಹೊಂದಾಣಿಕೆ ಆಗದಿರುವುದು ಇತ್ಯಾದಿ ಕಾರಣಗಳಿಂದ ಹಲವರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಅಂಗಾಂಗ ಕಸಿ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆರೋಗ್ಯ ಇಲಾಖೆ 70 ಆಸ್ಪತ್ರೆಗಳಿಗೆ ಮಾನ್ಯತೆ ನೀಡಿದೆ. ಅವುಗಳಲ್ಲಿ ಬೆಂಗಳೂರು ನಗರದಲ್ಲಿಯೇ 47 ಆಸ್ಪತ್ರೆಗಳಿವೆ. ದಕ್ಷಿಣ ಕನ್ನಡದಲ್ಲಿ 9, ಮೈಸೂರಿನಲ್ಲಿ 6, ಧಾರವಾಡದಲ್ಲಿ 4, ಕಲಬುರಗಿಯಲ್ಲಿ 2, ಬೆಳಗಾವಿ ಮತ್ತು ಉಡುಪಿಯಲ್ಲಿ ತಲಾ ಒಂದು ಆಸ್ಪತ್ರೆ ಅಂಗಾಂಗ ಕಸಿಗೆ ನೋಂದಣಿಯಾಗಿವೆ.

ಬೆಂಗಳೂರಿನಲ್ಲಿಯೇ ಅಧಿಕ ಆಸ್ಪತ್ರೆಗಳು ನೋಂದಣಿಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ರಾಜಧಾನಿಗೆ ಕಸಿ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದಾರೆ. ಜೀವಸಾರ್ಥಕತೆಯಡಿ ಅಂಗಾಂಗ ಕಸಿಗೆ ಹೆಸರು ನೋಂದಾಯಿಸಿಕೊಂಡವರಲ್ಲಿ ಬಹುತೇಕರು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೇ ಆಗಿದ್ದಾರೆ.

ಜನರಲ್ಲಿ ಅರಿವಿನ ಕೊರತೆಯು ಅಂಗಾಂಗ ದಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಸಕಾಲಕ್ಕೆ ಕಸಿ ಮಾಡದಿದ್ದಲ್ಲಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇಲಾಖೆಯಡಿ ಕಸಿಗೆ ಮಾನ್ಯತೆ ಪಡೆದ ಆಸ್ಪತ್ರೆಗಳ ವೈದ್ಯರೂ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿಸಿ, ಸಂಗ್ರಹಿಸಿದ ಅಂಗಾಂಗವನ್ನು ನೋಂದಾಯಿತ ರೋಗಿಗಳಿಗೆ ಕಸಿ ಮಾಡುತ್ತಿದ್ದಾರೆ. ಇಷ್ಟಾಗಿಯೂ ಅಂಗಾಂಗಗಳ ಬೇಡಿಕೆ– ಪೂರೈಕೆ ನಡುವಿನ ಅಂತರವು ಹೆಚ್ಚುತ್ತಲೇ ಇದೆ.

ಮೂತ್ರಪಿಂಡಕ್ಕೆ ಬೇಡಿಕೆ: ಜೀವಸಾರ್ಥಕತೆ ಸಂಸ್ಥೆಯ ಪ್ರಕಾರ, ಅಂಗಾಂಗ ವೈಫಲ್ಯ ಕಾರಣ ಹೆಸರು ನೋಂದಾಯಿಸಿದವರಲ್ಲಿ ಅರ್ಧಕ್ಕೂ ಅಧಿಕ ಮಂದಿ ಮೂತ್ರಪಿಂಡ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದವರಾಗಿದ್ದಾರೆ. ಬದಲಾದ ಜೀವನ ಶೈಲಿ ಸೇರಿ ವಿವಿಧ ಕಾರಣಗಳಿಂದ ಅಂಗಾಂಗ ವೈಫಲ್ಯಕ್ಕೆ ಒಳಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಯಕೃತ್ತು, ಹೃದಯ, ಶ್ವಾಸಕೋಶ ಕಸಿಗೂ ಅಧಿಕ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

‘ಮಾನವ ಅಂಗಾಂಗ ದಾನ ಕಸಿ ಕಾಯ್ದೆ 1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಇದು ಕಾನೂನು ಬದ್ಧವಾಗಿದೆ. ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

68 ಮಂದಿ ಅಂಗಾಂಗ ದಾನ

ಜೀವಸಾರ್ಥಕತೆ ಪ್ರಕಾರ ರಾಜ್ಯದಲ್ಲಿ ಈ ವರ್ಷ 68 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಇವರಿಂದ 116 ಮೂತ್ರಪಿಂಡ ಸೇರಿ 196 ಅಂಗಾಂಗಗಳನ್ನು ಸ್ವೀಕರಿಸಲಾಗಿದೆ. ಚರ್ಮ ಹೃದಯದ ಕವಾಟ ಸೇರಿ 145 ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ. ಐದು ವರ್ಷಗಳಲ್ಲಿ 629 ಮಂದಿ ದಾನ ಮಾಡಿದ್ದಾರೆ. ಸಂಸ್ಥೆಯ ಪ್ರಕಾರ ಒಬ್ಬ ದಾನಿಯು ಹೃದಯ ಮೂತ್ರಪಿಂಡ ಶ್ವಾಸಕೋಶ ಯಕೃತ್ತು ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿ ದಾನದ ಮೂಲಕ ಎಂಟು ಜೀವಗಳಿಗೆ ಹೃದಯದ ಕವಾಟ ಚರ್ಮ ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ ಹಲವು ಮಂದಿಗೆ ನೆರವಾಗಬಹುದಾಗಿದೆ.

‘ಜಿಲ್ಲಾಸ್ಪತ್ರೆಗಳಲ್ಲಿ ಕೇಂದ್ರ ಪ್ರಾರಂಭ’

‘ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟವರಿಂದ ಅಂಗಾಂಗಗಳನ್ನು ಪಡೆಯುವ ಪ್ರಯತ್ನಗಳು ಸರ್ಕಾರಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾಗಬೇಕು. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಕಳೆದ ವಾರ ಜೀವಸಾರ್ಥಕತೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಂಗಾಂಗ ದಾನ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.