ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ಪಂದನ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

Published 1 ಸೆಪ್ಟೆಂಬರ್ 2024, 20:30 IST
Last Updated 1 ಸೆಪ್ಟೆಂಬರ್ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ‘ಜನಸ್ಪಂದನ’ ಕಾರ್ಯಕ್ರಮ ಜನರ ಹಲವು ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಯಿತು. ಕಂದಾಯ ಸೇರಿದಂತೆ ಕೆಲ ಇಲಾಖೆಗಳ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಆರೋಗ್ಯ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲೇ ನೆರವು ಒದಗಿಸಿದರು.

ರಾಮನಗರ ಜಿಲ್ಲೆಯ ವಿಜಯಕುಮಾರ್‌ ಅವರ ಕಿಡ್ನಿ ಕಸಿ ಚಿಕಿತ್ಸೆಗಾಗಿ ₹4 ಲಕ್ಷ, ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಸನಗೌಡ ಬಿರಾದಾರ್‌ ‘ಬೋನ್‌ಮ್ಯಾರೊ’ ಕಸಿಗಾಗಿ ₹4 ಲಕ್ಷ, ತುಮಕೂರು ಜಿಲ್ಲೆಯ ಎಂಟು ವರ್ಷದ ಶಾಂಭವಿಗೆ ಶ್ರವಣ ಸಾಧನ ಖರೀದಿಸಲು ₹50 ಸಾವಿರ, ಅಪಘಾತಕ್ಕೆ ಒಳಗಾದ ಬಾಲಕ ಲೋಕೇಶ್‌ಗೆ ₹50 ಸಾವಿರ, ಕೋಲಾರ ಜಿಲ್ಲೆಯ ಕೆಜಿಎಫ್‌ನ ಎಂಟು ವರ್ಷದ ಎನ್.ಕೃಷ್ಣಗೆ ₹ 1ಲಕ್ಷ ಪರಿಹಾರವನ್ನು ಮಂಜೂರು ಮಾಡಿದರು.

ತುಮಕೂರು ಜಿಲ್ಲೆಯ ಮಡಕಶಿರಾ ಗ್ರಾಮದ ಶಾಂತಿಬಾಯಿ ಅವರ ಬುದ್ಧಿಮಾಂದ್ಯ ಮಗುವಿನ ಚಿಕಿತ್ಸೆಗೆ, ನೆಲಮಂಗಲದ ಚೌಡೇಶ್ವರಿ ಅವರ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ, ರಾಯಚೂರಿನ ಮೂರು ವರ್ಷದ ಶುಶಾಂತ್ ತಲೆಸ್ಸೇಮಿಯಾ ಚಿಕಿತ್ಸೆಗೆ, ಬೆಂಗಳೂರಿನ ಜೆ.ಜೆ ನಗರ ಎಂ.ಶ್ರೀಧರ್‌ ಅವರ ಮೂತ್ರಪಿಂಡಗಳ ಕಸಿಗೆ, ಚೇತನ ಸತ್ಯನಾರಾಯಣ ಅವರಿಗೆ ಡಯಾಲಿಸಿಸ್‌ ಚಿಕಿತ್ಸೆಗಾಗಿ ಆರ್ಥಿಕ ನೆರವು ಕೋರಿದರು. 

ಉದ್ಯೋಗಕ್ಕಾಗಿ ಅಂಗವಿಕಲರ ಮೊರೆ: ಜನಸ್ಪಂದನ ಕಾರ್ಯಕ್ರಮದಲ್ಲಿ ಹಲವು ಅಂಗವಿಕಲರು ಉದ್ಯೋಗ ಕೊಡಿಸುವಂತೆ, ಎಲೆಕ್ಟ್ರಿಕಲ್‌ ವಾಹನ ನೀಡುವಂತೆ ಮನವಿ ಮಾಡಿದರು. 

ಎರಡು ಪದವಿ ಪಡೆದಿರುವ ಬೆಂಗಳೂರಿನ ಚೇತನ ನವ್ಯಶ್ರೀ, ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯದಿಂದ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರುವ ಹುಣಸೂರು ತಾಲ್ಲೂಕಿನ ಶಿವಕುಮಾರಾಚಾರಿ ಅವರು ಉದ್ಯೋಗ ನೀಡುವಂತೆ, ಒಂದು ಕಾಲು ಕಳೆದುಕೊಂಡಿರುವ ರಾಮನಗರ ಮಾಜಿ ಯೋಧ ಶ್ರೀನಿವಾಸ ಎಲೆಕ್ಟ್ರಿಕಲ್ ವಾಹನ ಕೊಡಿಸುವಂತೆ ಮನವಿ ಮಾಡಿದರು. 

ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಶರಣಬಸವ ಕುಮಾರ್‌ ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಕೋರಿದರು. 

ಮುಖ್ಯಮಂತ್ರಿ ಮುಂದೆ ಅತ್ತೆ–ಸೊಸೆ ಜಗಳ: ಹುಬ್ಬಳ್ಳಿಯ ರಜಿಯಾಬೇಗಂ ಪುತ್ರ ಪಶುಪಾಲನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈಚೆಗೆ ನಿಧನರಾಗಿದ್ದಾರೆ. ‘ಮಗನ ಬಹುತೇಕ ನಾಮ ನಿರ್ದೇಶನದಲ್ಲಿ ನನ್ನ ಹೆಸರಿದ್ದರೂ, ಇಲಾಖೆಯ ಅಧಿಕಾರಿಗಳು ಸೊಸೆಗೆ ಹಣ ನೀಡಿದ್ದಾರೆ. 70 ದಾಟಿದ ನನಗೆ ಜೀವನ ಮಾಡುವುದೇ ಕಷ್ಟವಾಗಿದೆ. ಹೇಗಿದ್ದರೂ ಆಕೆಗೆ ಅನುಕಂಪದ ನೌಕರಿ, ಪಿಂಚಣಿ ದೊರೆಯುತ್ತದೆ. ನೆರವು ಕೇಳಿದರೆ ಜಗಳಕ್ಕೆ ಬರುತ್ತಾರೆ. ನನಗೂ ಸ್ವಲ್ಪ ಹಣ ಕೊಡಿಸಿ’ ಎಂದು ರಜಿಯಾಬೇಗಂ ಕೋರಿದರು.

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ಜನಸ್ಪಂದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೈ ಮುಗಿದ ಮಹಿಳೆ–ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ಜನಸ್ಪಂದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೈ ಮುಗಿದ ಮಹಿಳೆ–ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

‘ಕಷ್ಟಕ್ಕೆ ಸಂಸದೆ ಸಹಾಯ ಮಾಡಲಿಲ್ಲ. ನನಗೆ ದಯಾಮರಣಕ್ಕೆ ಅವಕಾಶ ಕೊಡಿಸಿ’ ಎಂದು ಮಂಡ್ಯದ ವಿಧವೆಯೊಬ್ಬರು ಹಾಗೂ ‘ಮಗ ಮನೆಗೆ ಸೇರಿಸಿಲ್ಲ, ಮಗಳ ಮನೆಯಲ್ಲಿ ಇರಲು ಆಗುತ್ತಿಲ್ಲ’ ಸಹಾಯ ಮಾಡಿ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಸಿದ್ದರಾಮಯ್ಯ ಕಾಲಿಗೆ ಎರಗಲು ಮುಂದಾದರು. ಇಂತಹ ವಿಷಯಗಳಿಗೆಲ್ಲ ಇಲ್ಲಿಯವರೆಗೆ ಬರುತ್ತೀರಲ್ಲ ಎಂದು ಸಿದ್ಧರಾಮಯ್ಯ ಮೆಲ್ಲಗೆ ಗದರಿದರು.  

ಮೊಮ್ಮಗಳಿಗಾಗಿ ವಿಧಾನಸೌಧಕ್ಕೆ ಬಂದ ಶತಾಯುಷಿ: ಪದವಿ ಓದಿರುವ ಮೊಮ್ಮಗಳಿಗೆ ತಂದೆ ಇಲ್ಲ. ಆಕೆಗೆ ಒಂದು ಒಳ್ಳೆಯ ಕೆಲಸ ಕೊಡಿಸಿ ಎಂದು ಹೊಸಕೋಟೆಯ ಶತಾಯುಷಿ ಶಾಂತಮ್ಮ ಮುಖ್ಯಮಂತ್ರಿಗೆ ಮನವಿ ಮಾಡಿದರು. 

ಸ್ವಚ್ಛತಾ ಕಾರ್ಯದ ಹಣ ಕೊಟ್ಟಿಲ್ಲ: ಬಿಬಿಎಂಪಿ ವ್ಯಾಪ್ತಿಯ ಆರ್‌ಆರ್‌ ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿರುವ ನಮಗೆ 6 ತಿಂಗಳಿನಿಂದ ವೇತನ ನೀಡಿಲ್ಲ.  ಎಂಜಿನಿಯರ್‌ ಅಲೆದಾಡಿಸುತ್ತಾರೆ ಎಂದು ಪೌರ ಕಾರ್ಮಿಕರಾದ ಗೀತಾ, ಗಜೇಂದ್ರ ದೂರು ಸಲ್ಲಿಸಿದರು.

40 ವರ್ಷಗಳಿಂದ ಇನಾಮು ಜಾಗದಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಇದುವರೆಗೂ ಹಕ್ಕುಪತ್ರ ಕೊಟ್ಟಿಲ್ಲ ಎಂದು ಹಾಜಿ ಸಾಬ್‌ ನೆಲದ ಮೇಲೆ ಮಲಗಿ ಬೇಡಿಕೊಂಡರು.

‘ವಿರೋಧ ಪಕ್ಷಗಳಿಗೆ ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲ’

ವಿರೋಧ ಪಕ್ಷಗಳಿಗೆ ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲ. ಗ್ಯಾರಂಟಿ ಯೋಜನೆಗಳೂ ಅಭಿವೃದ್ಧಿಯ ಒಂದು ಭಾಗ. ಜನರ ಆರ್ಥಿಕ ಅಭಿವೃದ್ಧಿಗೆ ನೇರ ಪರಿಹಾರ ಒದಗಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜನಸ್ಪಂದನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾಮಾಜಿಕ ಸಮಾನತೆ ನಿರ್ಮಾಣದ ಹಾದಿಯಲ್ಲಿ ಗ್ಯಾರಂಟಿ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದರು.

ಕೆಳ ಹಂತದಲ್ಲೇ ಅರ್ಜಿ ಇತ್ಯರ್ಥಪಡಿಸಿ:  ಕೆಳ ಹಂತದಲ್ಲೇ ‘ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಿದರೆ ಜನರು ಬೆಂಗಳೂರಿಗೆ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಅವರು ‘ಜನ ಸ್ಪಂದನೆಗೆ ಬಂದ ಅರ್ಜಿಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.‌ ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಸಮಯ ಮಿತಿಯೊಳಗೆ ಬಗೆಹರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಅರ್ಜಿಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಹೇಳಿದ್ದೇನೆ’ ಎಂದರು.

‘ಮೊದಲ ಜನ ಸ್ಪಂದನೆಯಲ್ಲಿ ಬಂದ ಅರ್ಜಿಗಳ ಪೈಕಿ ಶೇ 98ರಷ್ಟು ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಈ ಬಾರಿಯೂ ಅಷ್ಟೇ ತ್ವರಿತವಾಗಿ ಪರಿಹಾರ ಒದಗಿಸಲು ‌ಸೂಚನೆ ನೀಡಿದ್ದೇನೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಕುಲುಕಲು ಮುಗಿಬಿದ್ದ ಜನ–ಪ್ರಜಾವಾಣಿ ಚಿತ್ರ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಕುಲುಕಲು ಮುಗಿಬಿದ್ದ ಜನ–ಪ್ರಜಾವಾಣಿ ಚಿತ್ರ.

ಅರ್ಜಿ ಕೊಟ್ಟಿದ್ದಕ್ಕಿಂತ ಕೈ ಕುಲುಕಿದವರೇ ಹೆಚ್ಚು!

ಜನಸ್ಪಂದನ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಹೆಚ್ಚು ಜನರು ಬಂದಿದ್ದರು. ಇಲಾಖಾವಾರು ತೆರೆಯಲಾಗಿದ್ದ  ಕೌಂಟರ್‌ಗಳ ಮುಂದೆ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಕೌಂಟರ್‌ ಬಳಿ ತೆರಳಿ ಅರ್ಜಿ ಸ್ವೀಕರಿಸಿದರು.  ಜಮೀನು ವಿವಾದ ನಿವೇಶನ ಊರಿನ ಸಮಸ್ಯೆ ಸೇರಿದಂತೆ ಒಂದು ಸಮಸ್ಯೆಗೆ ಅರ್ಜಿ ಸಲ್ಲಿಸಲು ಹಲವರು ಬಂದಿದ್ದರು. ಗುಂಪಿನ ಮುಖ್ಯಸ್ಥ ಅರ್ಜಿ ನೀಡಿದರೆ ಉಳಿದವರು ಸಿದ್ದರಾಮಯ್ಯ ಕೈಕುಲುಕಲು ಮುಂದಾದರು. ಪ್ರತಿ ಕೌಂಟರ್‌ಗಳ ಮುಂದೂ ಕೈ ಕುಲುಕುವ ಕೆಲಸ ಪುನರಾವರ್ತನೆಯಾಯಿತು. ಅರ್ಜಿ ಸ್ವೀಕರಿಸಲು ವಿಳಂಬವಾಗಿದೆ ಎಂದು ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ತಕ್ಷಣವೇ ಅವರನ್ನು ಸುತ್ತುವರಿದ ಕೆಲವರು ಸಿದ್ದರಾಮಯ್ಯಗೆ ಜೈಕಾರ ಹಾಕಿದರು.

ದಲಿತರಿಗೆ ಸಿಗದ ಸಾಗುವಳಿ ಪತ್ರ

‘ಒಂದೇ ಊರಿನ 22 ದಲಿತ ಕುಟುಂಬಗಳು 1963ರಿಂದ ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಊರಿನ ಇತರೆ ಜಾತಿಗಳಿಗೆ ಸಾಗುವಳಿ ಪತ್ರ ನೀಡಲಾಗಿದೆ. ನಮಗೆ ಅನ್ಯಾಯ ಮಾಡಲಾಗಿದೆ’ ಎಂದು ಶಿರಾ ತಾಲ್ಲೂಕು ಬೊಮ್ಮನಹಳ್ಳಿಯ ನರಸಿಂಹಯ್ಯ ಶಿವಮ್ಮ ಈರಮ್ಮ ರಾಜಪ್ಪ ಚಂದ್ರಪ್ಪ ಸೇರಿದಂತೆ 50ಕ್ಕೂ ಹೆಚ್ಚು ಜನರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದರು.

‘ಬಗರ್‌ಹುಕುಂ ಸಮಿತಿಗಳು ಪ್ರತಿ ಬಾರಿಯೂ ನಮ್ಮ ಅರ್ಜಿಗಳನ್ನು ವಜಾ ಮಾಡಿವೆ. ದುಡ್ಡು ಕೊಟ್ಟವರಿಗೆ  ನ್ಯಾಯ ಸಿಕ್ಕಿದೆ. ನಮಗೂ ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು. 

ಕುಸಿದ ಆಡಳಿತಯಂತ್ರಕ್ಕೆ ‘ಜನಸ್ಪಂದನ’ ಸಾಕ್ಷಿ: ಅಶೋಕ್‌

‘ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ ಪರಿಣಾಮವೇ ಮುಖ್ಯಮಂತ್ರಿ ಜನಸ್ಪಂದನ. ಯಾವುದೇ ಜಿಲ್ಲೆ ಗ್ರಾಮಗಳಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

‘ಜನಸ್ಪಂದನ’ ಎಂದು ಪ್ರಚಾರಕ್ಕಾಗಿ ನಾಟಕ ಆಡುವ ಬದಲು ಮುಖ್ಯಮಂತ್ರಿ ತಮ್ಮ ಉಸ್ತುವಾರಿ ಮಂತ್ರಿಗಳಿಗೆ ಜಿಲ್ಲಾ ಕೇಂದ್ರಗಳಿಗೆ ಮತ್ತು ತಾಲ್ಲೂಕು ಕೇಂದ್ರಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಲು ಸೂಚಿಸಬೇಕು ಎಂದು ಅವರು ಹೇಳಿದರು.

‘ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಇದ್ದರೂ ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದ ಊರುಗಳಿಂದ ಬಸ್ಸು ರೈಲಿಗೆ ಹಣ ಖರ್ಚು ಮಾಡಿಕೊಂಡು ಬಂದಿದ್ದಾರೆ. ದಿನವೆಲ್ಲ ಕಾದು ಮುಖ್ಯಮಂತ್ರಿ ಮುಂದೆ ಕೈ ಚಾಚಬೇಕಾದ ಪರಿಸ್ಥಿತಿ ಇದೆ. ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ’ ಎಂದು ಪ್ರಶ್ನಿಸಿದರು.

ಜನಸ್ಪಂದನದ ವಿಶೇಷಗಳು

* ಇದೇ ಮೊದಲ ಬಾರಿ ವಿಧಾನಸೌಧದ ಮುಂದೆ ಜನಸ್ಪಂದನ

* ಬುಧವಾರ ರಾತ್ರಿಯಿಂದಲೇ ಹರಿದು ಬಂದ ಜನಸಾಗರ

* ಗುರುವಾರ ಬೆಳಿಗ್ಗೆ 8.30ರಿಂದ ಅರ್ಜಿ ಸ್ವೀಕಾರ ಆರಂಭ

* ನೋಂದಣಿಗೆ ಎರಡು ಕೌಂಟರ್‌

* ಅರ್ಜಿ ಸಲ್ಲಿಸಲು ಇಲಾಖಾವಾರು 29 ಕೌಂಟರ್‌

* 11.30ಕ್ಕೆ ವಿಧಾನಸೌಧದ ಆವರಣಕ್ಕೆ ಬಂದ ಸಿ.ಎಂ

* ಜನರು ಕುಳಿತ ಸ್ಥಳಕ್ಕೇ ಮಧ್ಯಾಹ್ನದ ಊಟ ಸರಬರಾಜು

* ನಂದಿನಿ ಪೇಡಾ ಫುಲಾವ್ ವಡೆ ಮೊಸರನ್ನ ವಿತರಣೆ

* ಕುಡಿಯುವ ನೀರು ಶೌಚಾಲಯಕ್ಕಾಗಿ ಜನರ ಪರದಾಟ

* ಬಂದೋಬಸ್ತ್‌ಗೆ ಒಂದು ಸಾವಿರ ಪೊಲೀಸ್‌ ನಿಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT