ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕರು, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ಮುಂದೆ ಪರೇಡ್ ನಡೆಸುವಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು.
ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಶುಕ್ರವಾರ (ಆಗಸ್ಟ್ 23) ಸಂಜೆ 4 ಗಂಟೆಗೆ ನಾನು ಮತ್ತು ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇವೆ. ರಾಷ್ಟ್ರಪತಿ ಮುಂದೆ ಪರೇಡ್ ನಡೆಸುವ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ’ ಎಂದಿದ್ದಾರೆ.
‘ಕುಮಾರಸ್ವಾಮಿ, ಎಚ್. ಡಿ ದೇವೇಗೌಡರು ಮತ್ತು ಅಮಿತ್ ಶಾ ಮಾತನಾಡಿ ಇಷ್ಟೆಲ್ಲ ಬೆಳವಣಿಗೆಗಳು ನಡೆದಿದೆ. ಮುಡಾ ವಿಷಯವನ್ನು ಜನತಾ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗೋಣ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಪಟ್ಟಿ ಮಾಡಿ, ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಆ ಕೆಲಸವನ್ನೂ ಮಾಡೋಣ’ ಎಂದೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದೂ ಮೂಲಗಳು ಹೇಳಿವೆ.
ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ‘ರಾಜ್ಯಪಾಲರ ತೀರ್ಮಾನವನ್ನು ಖಂಡಿಸುವ ಜತೆಗೆ, ಸರ್ವಾನುಮತದಿಂದ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲುವ ನಿರ್ಣಯ ತೆಗೆದುಕೊಳ್ಳಲಾಯಿತು’ ಎಂದರು.
‘ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ– ಜೆಡಿಎಸ್‌ನವರು ಎಷ್ಟೇ ಪ್ರಯತ್ನಿಸಿದರೂ ಸರ್ಕಾರವನ್ನು ಜಗ್ಗಿಸಲು ಸಾಧ್ಯವಿಲ್ಲ.ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ಧ ಸಂಚು ನಡೆಯುತ್ತಿದ್ದು, ನಾವು ಇದಕ್ಕೆ ಜಗ್ಗುವುದಿಲ್ಲ’ ಎಂದರು.
‘ಇಂಡಿಯಾ’ ಮೈತ್ರಿಕೂಟದ ಬೆಂಬಲ ಇದೆಯೇ ಎಂದು ಕೇಳಿದಾಗ, ‘ಸದ್ಯ ರಾಜ್ಯದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ವರಿಷ್ಠರ ಜೊತೆ ಚರ್ಚಿಸಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
ಸಭೆಯಲ್ಲಿ, ರಾಜ್ಯಪಾಲ ತೀರ್ಮಾನದ ವಿರುದ್ಧದ ಖಂಡನಾ ನಿರ್ಣಯವನ್ನು ಆರ್.ವಿ. ದೇಶಪಾಂಡೆ ಮಂಡಿಸಿದರು. ತನ್ವೀರ್ ಸೇಠ್ ಅನುಮೋದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.