ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳೇ ಧರ್ಮದ ಸಂಕೋಲೆ ಕಳಚಿ: ಪರಕಾಲ ಪ್ರಭಾಕರ್

Published 15 ಮಾರ್ಚ್ 2024, 13:55 IST
Last Updated 15 ಮಾರ್ಚ್ 2024, 13:55 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳು ಜಾತಿ, ಧರ್ಮದ ಸಂಕೋಲೆ ಕಳಚಿ, ವೈಚಾರಿಕ ವಿಷಯಗಳತ್ತ ಗಮನಹರಿಸಬೇಕು. ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣುವ ರಾಜಕೀಯ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.

ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಶುಕ್ರವಾರ ‘ಭವಿಷ್ಯವನ್ನು ಸಶಕ್ತಗೊಳಿಸುವುದು: ಯುವಕರು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಪ್ರೋತ್ಸಾಹಿಸುವ’ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲೇ ಸಮಯ ವ್ಯರ್ಥ ಮಾಡುತ್ತಿದೆ. ಸಂದೇಶಗಳನ್ನು ಹರಿಬಿಟ್ಟ ತಕ್ಷಣ ಲಕ್ಷಾಂತರ ಜನರಿಗೆ ತಲುಪುತ್ತದೆ ಎಂಬ ಭ್ರಮೆ ಬಹುತೇಕರಲ್ಲಿದೆ. ವ್ಯಕ್ತಿ–ವ್ಯಕ್ತಿಗಳ ಮಧ್ಯೆ, ಸಮುದಾಯಗಳ ಮಧ್ಯೆ ಬೆರೆತು ಕಲಿಯುವ, ಮುಖಾಮುಖಿ ತಲುಪಿಸುವ ಕೆಲಸಗಳು ಆಗಬೇಕಿದೆ. ಅದಕ್ಕಾಗಿ ಮಾನವೀಯ ಸಂಬಂಧಗಳನ್ನು ಬೆಸೆಯಬೇಕಿದೆ ಎಂದರು.

‘ಯುವ ಜನರು ಪ್ರಬುದ್ಧರಾಗಬೇಕು. ಆಡಳಿತ, ರಾಜಕೀಯ ವಿಚಾರಗಳನ್ನು ವಿಮರ್ಶೆ ಮಾಡಬೇಕು. ನಮ್ಮಿಂದ ಆಯ್ಕೆಯಾದ ಸರ್ಕಾರ ನಮಗಾಗಿ ಇದೆಯೇ ಹೊರತು, ನಾವು ಸರ್ಕಾರಕ್ಕಾಗಿ ಅಲ್ಲ ಎನ್ನುವ ಸತ್ಯ ಅರ್ಥ ಮಾಡಿಕೊಂಡು ನಡೆಯಬೇಕು. ತಪ್ಪುಗಳನ್ನು ಖಂಡಿಸಬೇಕು. ಉತ್ತಮ ಕಾರ್ಯಗಳನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ಒಮ್ಮೆ ಮತದಾನ ಮಾಡಿ, ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಂದಿನ ಐದು ವರ್ಷಗಳವರೆಗೆ ಮನೆಯಲ್ಲೇ ಕುಳಿತುಕೊಳ್ಳುವ ಜನರ ಸಂಖ್ಯೆ ಹೆಚ್ಚಾಗಿದೆ. ಇಂತಹ ಮನೋಭಾವ ತೊರೆಯಬೇಕು. ರಾಜಕೀಯ ವಿಚಾರ, ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದರು.

ಸರ್ಕಾರಗಳು ಜನರನ್ನು ಹೇಗೆ ದಾರಿ ತಪ್ಪಿಸುತ್ತವೆ. ಅದಕ್ಕೆ ಜನರು ಹೇಗೆ ಹೊಂದಿಕೊಂಡಿದ್ದಾರೆ ಎನ್ನುವುದಕ್ಕೆ ಕೆಲ ಉದ್ಘಾಟನಾ ಕಾರ್ಯಕ್ರಮಗಳು ಅತ್ಯುತ್ತಮ ಉದಾಹರಣೆ. ಮಾಧ್ಯಮಗಳೂ ಉದ್ಘಾಟನೆಗೆ ಭಾರಿ ಪ್ರಚಾರ ನೀಡುತ್ತವೆ. ಆದರೆ, ಯಾರೂ ಆ ಕಾಮಗಾರಿಗಳ ಗುಣಮಟ್ಟ ಕುರಿತು ಚರ್ಚಿಸುವುದೇ ಇಲ್ಲ ಎಂದರು. 

ನಿವೃತ್ತ ಐಎಎಸ್‌ ಅಧಿಕಾರಿ ಕಣ್ಣನ್ ಗೋಪಿನಾಥನ್‌, ಆಮ್ನೆಸ್ಟಿ ಇಂಟರ್‌ ನ್ಯಾಷನಲ್ ವಕ್ತಾರ ಆಕಾರ್ ಪಟೇಲ್, ಸಂಶೋಧನಾ ವಿದ್ಯಾರ್ಥಿ ಇಳಾ ಅನನ್ಯಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT