ಬೆಂಗಳೂರು: ನೂತನ ಸಂಸತ್ ಕಟ್ಟಡದಲ್ಲಿ ಇಂದಿನಿಂದ (ಮಂಗಳವಾರ) ಕಲಾಪಗಳು ಆರಂಭವಾಗಿವೆ. ಈ ವೇಳೆ ರಾಜ್ಯಸಭಾ ಸದಸ್ಯ ಎಚ್.ಡಿ ದೇವೇಗೌಡ ಅವರು, ಕಿರಿಯ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.
ಸಂಸತ್ ಇರುವುದು ಚರ್ಚೆಗಳು ನಡೆಸುವುದಕ್ಕೆ. ಪ್ರತಿಭಟನೆ ನಡೆಸುವುದಕ್ಕಲ್ಲ ಎಂದು ಯುವ ಸಂಸದರಿಗೆ ದೇವೇಗೌಡ ಅವರು ಬುದ್ಧಿಮಾತು ಹೇಳಿದ್ದಾರೆ.
‘ನಾನು ಜನಪ್ರತಿನಿಧಿಯಾಗಿದ್ದ ಅವಧಿಯಲ್ಲಿ ಒಂದು ಬಾರಿ ಮಾತ್ರ ಬಾವಿಗೆ ಇಳಿದು ಪ್ರತಿಭಟಿಸಿದ್ದೆ. ಅದು ಕೂಡ ಕಡಿಮೆ ಅವಧಿಗೆ ಆಗಿತ್ತು. ಆ ನಿರ್ಧಾರದ ಬಗ್ಗೆ ನಾನು ಮರುಗಿದ್ದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಯಮಾಡಿ ಸಂಸತ್ ಗ್ರಂಥಾಲಯವನ್ನು ಬಳಕೆ ಮಾಡಿ ಎಂದು ಮನವಿ ಮಾಡಿಕೊಂಡಿರುವ ಅವರು, ಸಂಸದೀಯ ಇತಿಹಾಸವನ್ನು ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
1991ರಲ್ಲಿ ದೆಹಲಿಗೆ ಬಂದಾಗ ನನಗೆ ಸ್ನೇಹಿತರು ಇರಲಿಲ್ಲ. ಆ ವೇಳೆ ನಾನು ಗ್ರಂಥಾಲಯದಲ್ಲಿ ಓದುತ್ತಿದ್ದೆ. 1962ರಲ್ಲಿ ಕರ್ನಾಟಕ ವಿಧಾನಸಭೆಗೆ ಬಂದಾಗಲೂ ನಾನು ಗ್ರಂಥಾಲಯದಲ್ಲಿ ಸಮಯ ಕಳೆಯುತ್ತಿದ್ದೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಅಲ್ಲದೆ ಸಂಸತ್‌ಗೆ ಬರುವಾಗ ಪೂರ್ವತಯಾರಿಯೊಂದಿಗೆ ಬನ್ನಿ ಎಂದು ಸಲಹೆ ನೀಡಿದ್ದಾರೆ.
‘ಭಾರತ ಬಹು ಪಕ್ಷಗಳ ಪ್ರಜಾಪ್ರಭುತ್ವ. ದೇಶ ಹಾಗೂ ಪ್ರಜಾಪ್ರಭುತ್ವ ಅಭಿವೃದ್ಧಿಗೆ ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳ ಮತ್ತು ಪಕ್ಷೇತರ ಸದಸ್ಯರು ನೀಡಿದ ಕೊಡುಗೆಯನ್ನು ದೊಡ್ಡ ರಾಷ್ಟ್ರೀಯ ಪಕ್ಷಗಳು ಅರಿತುಕೊಂಡು ಅಂಗೀಕರಿಸಬೇಕು ಎಂದು ಜೆಡಿಎಸ್ ವರಿಷ್ಠ ಭಿನ್ನವಿಸಿಕೊಂಡಿದ್ದಾರೆ.
ಅಲ್ಲದೆ ಸಂಸತ್ ಯಾವತ್ತಿಗೂ ಬಡವರು, ರೈತರು, ತುಳಿತಕ್ಕೊಳಗಾದವರು, ಕಡೆಗಣಿಸಲ್ಪಟ್ಟವರು, ಅಲ್ಪಸಂಖ್ಯಾತರು ಹಾಗೂ ಧ್ವನಿ ಇಲ್ಲದವರನ್ನು ಮರೆಯಬಾರದು. ಹೊಸ ಸಂಸತ್ ಕಟ್ಟಡದಲ್ಲಿ ಇವರ ಅಗತ್ಯತೆ ಹಾಗೂ ಅಭಿವೃದ್ಧಿಯ ಚರ್ಚೆಗೆ ಶೇ 90ರಷ್ಟು ಸಮಯ ಸಿಗಲಿದೆ ಎಂದು ನಾನು ಆಶಾಭಾವನೆ ಇಟ್ಟುಕೊಂಡಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ.
ಹೊಸ ಸಂಸತ್ ಕಟ್ಟಡದಲ್ಲಿ ನಮ್ಮ ದೀರ್ಘ ಇನ್ನಿಂಗ್ಸ್ ಸಂತೋಷ, ಶಾಂತಿ ಹಾಗೂ ಉತ್ಪಾದಕತೆಯಿಂದ ಕೂಡಿರಲಿದೆ ಎಂದು ಆಶಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.