ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಿಕ ಸೇವಾ ಮಂಡಳಿ ರಚನೆ ಕೋರಿಕೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Published 20 ಆಗಸ್ಟ್ 2024, 15:36 IST
Last Updated 20 ಆಗಸ್ಟ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ದಿಷ್ಟ ಸ್ಥಳ ಮತ್ತು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಐಎಎಸ್ ಅಧಿಕಾರಿಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸುವ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅವರ ಹಿತಕಾಯುವ ಉದ್ದೇಶ ಹೊಂದಿದ, ‘ನಾಗರಿಕ ಸೇವಾ ಮಂಡಳಿ’ (ಸಿಎಸ್‌ಬಿ) ರಚಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೈಕೋರ್ಟ್‌ ವಕೀಲ ರಿಷಬ್ ಟ್ರಕ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಎಸ್‌.ಸುಶೀಲಾ ವಾದ ಮಂಡಿಸಿ, ‘ಈಗಾಗಲೇ ದೇಶದ 20 ರಾಜ್ಯಗಳಲ್ಲಿ ಸಿಎಸ್‌ಬಿ ರಚನೆ ಆಗಿದೆ. ಕರ್ನಾಟಕದಲ್ಲಿ 2014ರಲ್ಲಿ ಮಂಡಳಿ ರಚಿಸಿ ನಂತರ ಅದನ್ನು ಅಮಾನತಿನಲ್ಲಿ ಇರಿಸಲಾಗಿದೆ. ನಂತರ ಮಂಡಳಿ ರಚನೆ ಸಂಬಂಧ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ 2021ರಲ್ಲಿ ಆದೇಶ ನೀಡಿದೆ. ಆದಾಗ್ಯೂ, ರಾಜ್ಯದಲ್ಲಿ ಈವರೆಗೆ ನಾಗರಿಕ ಸೇವಾ ಮಂಡಳಿ ರಚನೆ ಆಗಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಸರ್ಕಾರದ ಪರ ವಕೀಲರು, ‘ಅರ್ಜಿದಾರರು ಜುಲೈ 2024ರ 11ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಆತುರಾತುರವಾಗಿ ಮನವಿ ಪರಿಶೀಲನೆಗೂ ಮುನ್ನವೇ ಜುಲೈ 18ರಂದು ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ, ನ್ಯಾಯಾಲಯದ ಮುಂದೆ ಮಂಡಿಸಿರುವ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಅಡಕಗೊಳಿಸಿಲ್ಲ. ಪರಿಷ್ಕೃತ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ವಿಷಯದಲ್ಲಿ ಸರ್ಕಾರದ ಕ್ರಮ ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ’ ಎಂದು ಮೌಖಿಕವಾಗಿ ಅತೃಪ್ತಿ ಹೊರಹಾಕಿತಲ್ಲದೆ, ‘ಈ ಸಂಬಂಧ ಸರ್ಕಾರದ ನಿಲುವೇನು ಎಂಬುದನ್ನು ವಿವರಿಸಿ’ ಎಂದು ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.

ಮನವಿ ಏನು?: ‘ಆಡಳಿತಾತ್ಮಕ ಮೇಲಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರರು ನ್ಯಾಯಬಾಹಿರ ಹಾಗೂ ನಿರಂಕುಶ ಒತ್ತಡದಿಂದ ಐಎಎಸ್ ಅಧಿಕಾರಿಗಳನ್ನು ರಕ್ಷಿಸಬೇಕು. ಯಾವುದೇ ಮೌಖಿಕ ಸೂಚನೆ, ಆದೇಶ, ಅಭಿಪ್ರಾಯ ಅಥವಾ ಪ್ರಸ್ತಾವನೆಗಳನ್ನು ಆಧರಿಸಿ ಅವರು ಸೇವೆ ಸಲ್ಲಿಸುವಂತಾಗಬಾರದು. ಈ ನಿಟ್ಟಿನಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಕರ್ನಾಟಕದಲ್ಲೂ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸಬೇಕು ಹಾಗೂ ನಾಗರಿಕ ಸೇವಾ ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT