ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಪೊಲೀಸರಿಗೆ ಮಾದರಿಯಾದ ಬಂಡೆಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ರೂಪಿಸಿದ ‘ದರ್ಪಣ’

ಪ್ರತಿಯೊಂದು ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ‘ಲೋಕ ಸ್ಪಂದನ’ ಕ್ಯೂಆರ್‌ ಕೋಡ್ ವ್ಯವಸ್ಥೆ
Published 30 ಜುಲೈ 2023, 14:36 IST
Last Updated 30 ಜುಲೈ 2023, 14:36 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ಕಾರ್ಯವೈಖರಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ‘ಲೋಕ ಸ್ಪಂದನ’ ಕ್ಯೂಆರ್‌ ಕೋಡ್ ವ್ಯವಸ್ಥೆ ರೂಪಿಸಲಾಗಿದ್ದು, ಪ್ರತಿಯೊಂದು ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ವ್ಯವಸ್ಥೆ ಜಾರಿಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್‌ ಮೋಹನ್ ಆದೇಶ ಹೊರಡಿಸಿದ್ದಾರೆ.

‘ಠಾಣೆಗೆ ಹೋದ ಸಂದರ್ಭದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಎಫ್‌ಐಆರ್ ದಾಖಲಿಸಲು ಸತಾಯಿಸುತ್ತಾರೆ. ಕೆಲವರು ಹಣ ಹೇಳುತ್ತಾರೆ. ಹೀಗಾಗಿ, ಪೊಲೀಸರ ವರ್ತನೆಯಿಂದ ನೋವು ಉಂಟಾಗುತ್ತಿದೆ’ ಎಂಬುದು ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿತ್ತು.

ಜನರ ಸಮಸ್ಯೆ ಆಲಿಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದ ಬೆಂಗಳೂರು ಬಂಡೇಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್ ಎಲ್‌.ವೈ. ರಾಜೇಶ್, ತಮ್ಮ ಠಾಣೆಯಲ್ಲಿ ‘ದರ್ಪಣ’ ಕ್ಯೂಆರ್ ಕೋಡ್ ವ್ಯವಸ್ಥೆ ರೂಪಿಸಿದ್ದರು. ಠಾಣೆಗೆ ಬರುವ ಜನ, ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ಸಿಬ್ಬಂದಿ ವರ್ತನೆ ವಿರುದ್ಧ ದೂರು ನೀಡಲಾರಂಭಿಸಿದ್ದರು. ಇದರಿಂದ ಎಚ್ಚೆತ್ತ ಸಿಬ್ಬಂದಿ, ಅಮಾನತಾಗುವ ಭಯದಲ್ಲಿ ಜನರ ಜೊತೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ.

ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ವ್ಯವಸ್ಥೆ ಯಶಸ್ವಿಯಾಗುತ್ತಿದ್ದಂತೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ, ತಮ್ಮ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿ ‘ದರ್ಪಣ’ ಜಾರಿಗೊಳಿಸಿದ್ದರು. ಇದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೇ ವ್ಯವಸ್ಥೆಯನ್ನು ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಗೆ ವಿಸ್ತರಿಸಿರುವ ಕಮಿಷನರ್ ಬಿ.ದಯಾನಂದ್, ‘ಲೋಕ ಸ್ಪಂದನ’ ಎಂಬುದಾಗಿ ನಾಮಕರಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಯಶಸ್ವಿಯಾಗಿರುವ ‘ಲೋಕ ಸ್ಪಂದನ’ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಇದೀಗ ರಾಜ್ಯವ್ಯಾಪಿ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೆಲ ಜಿಲ್ಲೆಯಲ್ಲೂ ಇದೇ ರೀತಿಯ ಕ್ಯೂಆರ್‌ ಕೋಡ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ.

ಪ್ರತಿಯೊಂದು ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ‘ಲೋಕ ಸ್ಪಂದನ’ ಕ್ಯೂಆರ್‌ ಕೋಡ್ ಅಳವಡಿಸುವಂತೆ ಡಿಜಿ–ಐಜಿಪಿ ಹೇಳಿದ್ದಾರೆ. ವ್ಯವಸ್ಥೆ ಬಗ್ಗೆ ಜನರಿಗೆ ತಿಳಿಸಿ, ಅವರಿಂದ ಪ್ರತಿಕ್ರಿಯೆ ದಾಖಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವ್ಯವಸ್ಥೆ ಬಳಕೆ ಹೇಗೆ: ಪೊಲೀಸ್ ಠಾಣೆ ಹಾಗೂ ಅಧಿಕಾರಿಗಳ ಕಚೇರಿಯ ಪ್ರವೇಶ ದ್ವಾರದಲ್ಲಿ ‘ಲೋಕ ಸ್ಪಂದನ’ ಕ್ಯೂಆರ್‌ ಕೋಡ್ ಅಳವಡಿಸಲಾಗಿರುತ್ತದೆ. ಠಾಣೆ ಹಾಗೂ ಕಚೇರಿಗೆ ಹೋದ ಸಂದರ್ಭದಲ್ಲಿ ಜನರು, ತಮ್ಮ ಮೊಬೈಲ್‌ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಅವಾಗಲೇ ಪ್ರತ್ಯೇಕ ಲಿಂಕ್ ತೆರೆದುಕೊಳ್ಳುತ್ತದೆ. ಹೆಸರು ಹಾಗೂ ವಿಳಾಸ ನಮೂದಿಸಬೇಕು.

ಯಾವ ಕೆಲಸಕ್ಕೆ ಬಂದಿದ್ದಿರಾ? ಸಿಬ್ಬಂದಿ ವರ್ತನೆ ಹೇಗಿತ್ತು ? ನಿಮ್ಮ ಸಮಸ್ಯೆ ಆಲಿಸಿದ್ದಾರೆಯೇ ? ಏನಾದರೂ ದೂರು ನೀಡಬೇಕು ? ಎಂಬಿತ್ಯಾದಿ ಮಾಹಿತಿಯನ್ನು ಜನರು ಭರ್ತಿ ಮಾಡಬೇಕು. ಜನರ ಅಭಿಪ್ರಾಯಗಳು, ಆಯಾ ಜಿಲ್ಲೆಯ ಎಸ್ಪಿ, ಕಮಿಷನರೇಟ್‌ ವ್ಯಾಪ್ತಿಯ ಡಿಸಿಪಿಗಳಿಗೆ ಹೋಗುತ್ತವೆ. ಏನಾದರೂ ಗಂಭೀರ ದೂರುಗಳಿದ್ದರೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಿದ್ದಾರೆ.

‘ಲೋಕಸ್ಪಂದನ’ ಕ್ಯೂ ಆರ್ ಕೋಡ್
‘ಲೋಕಸ್ಪಂದನ’ ಕ್ಯೂ ಆರ್ ಕೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT