ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಮನವಿ; ಮೋದಿಗೆ ಸಿಎಂ ಪತ್ರ

ಲೈಂಗಿಕ ದೌರ್ಜನ್ಯ ಪ್ರಕರಣ
Published 23 ಮೇ 2024, 4:50 IST
Last Updated 23 ಮೇ 2024, 4:50 IST
ಅಕ್ಷರ ಗಾತ್ರ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪತ್ರದ ಬಗ್ಗೆ 'ಎಎನ್‌ಐ' ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

'ಪ್ರಜ್ವಲ್‌ ಅವರು ಆರೋಪಿಯಾಗಿರುವ ಪ್ರಕರಣದ ಕುರಿತು ತಮ್ಮ ಗಮನ ಸೆಳೆಯಲು ಮತ್ತೊಮ್ಮೆ ಪತ್ರ ಬರೆಯುತ್ತಿದ್ದೇನೆ. ಈ ಪ್ರಕರಣವು ರಾಜ್ಯದ ಜನರ ಆತ್ಮಸಾಕ್ಷಿಯನ್ನು ಘಾಸಿಗೊಳಿಸಿರುವುದಷ್ಟೇ ಅಲ್ಲದೆ, ದೇಶದಾದ್ಯಂತ ಕಳವಳಕ್ಕೆ ಕಾರಣವಾಗಿದೆ' ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಸಂಸದ ಪ್ರಜ್ವಲ್‌ ಅವರು ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಗುವ ಕೆಲವೇ ಗಂಟೆಗಳ ಮೊದಲು 2024ರ ಏಪ್ರಿಲ್‌ 27ರಂದು ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ದೇಶ ತೊರೆದು ಜರ್ಮನಿಗೆ ಓಡಿಹೋಗಿರುವುದು ನಾಚಿಕೆಗೇಡಿನ ಸಂಗತಿ' ಎಂದು ಹೇಳಿದ್ದಾರೆ.

'ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ತ್ವರಿತ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಂಡು ಪ್ರಜ್ವಲ್ ಅವರ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ' ಎಂದು ಮನವಿ ಮಾಡಿದ್ದಾರೆ.

'ಸ್ಪಂದಿಸದ ಕೇಂದ್ರ ಸರ್ಕಾರ'
ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಸ್‌ಐಟಿ ಪತ್ರ ಬರೆದಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಬುಧವಾರ ದೂರಿದ್ದಾರೆ.

ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್‌ ವಿರುದ್ಧ ವಾರಂಟ್‌ ಜಾರಿ ಮಾಡಿರುವುದನ್ನು ಕೇಂದ್ರದ ಗಮನಕ್ಕೆ ತರಲಾಗಿದೆ. ವಾರಂಟ್‌ ಜಾರಿಯಾದ ಬಳಿಕ ಪಾಸ್‌ಪೋರ್ಟ್‌ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT