ಬೆಂಗಳೂರು: ‘ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸಿ ಶೀಘ್ರ ಆದೇಶ ಜಾರಿ ಮಾಡಬೇಕು’ ಎಂದು ಆರೋಗ್ಯ ಸಚಿವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ.
‘ರಾಯಚೂರಿನಲ್ಲಿ ವೈದ್ಯರು ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದು ಭಾಷೆಯ ಬೆಳವಣಿಗೆಗೆ ಸಹಕರಿಸ ಬೇಕೆಂದು ನೀಡಿದ ಕರೆಗೆ, ನೂರಾರು ಕನ್ನಡಪ್ರಿಯ ವೈದ್ಯರು ಸಕಾರಾತ್ಮಕ ವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಚೇತೋಹಾರಿ ಸಂಗತಿಯಾಗಿದೆ. ಹಾಗಾಗಿ ಸರ್ಕಾರಿ ವೈದ್ಯರೆಲ್ಲರೂ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ಕಡ್ಡಾಯ ಮಾಡುವಲ್ಲಿ ಕೂಡಲೇ ಸರ್ಕಾರದ ಆದೇಶ ಹೊರಡಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದಾರೆ.
‘ಕನ್ನಡಪ್ರಿಯ ವೈದ್ಯರನ್ನು, ಅವರ ಭಾಷಾ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅಭಿನಂದಿಸುವ ಹಾಗೂ ಪುರಸ್ಕರಿಸುವ ಕೆಲಸವಾಗಬೇಕು’ ಎಂದು ಅವರು ಕೋರಿದ್ದಾರೆ.