ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಕರ ಸಂಬಳಕ್ಕೆ ಶಾಲಾ ಶುಲ್ಕ ಹೆಚ್ಚಳ ಅನಿವಾರ್ಯ’

Last Updated 13 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ನಿಗದಿಪಡಿಸಿರುವ ವೇತನವನ್ನೆ ಶಿಕ್ಷಕರಿಗೆ ಕಡ್ಡಾಯವಾಗಿ ನೀಡಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಶಿಕ್ಷಣ ಇಲಾಖೆ ಮುಂದಾದರೆ ಮಕ್ಕಳ ಶಾಲಾ ಶುಲ್ಕವನ್ನು ಹೆಚ್ಚಿಸಲು ಅನುದಾನರಹಿತ ಶಾಲೆಗಳ ಒಕ್ಕೂಟ ನಿರ್ಧರಿಸಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶುಲ್ಕದ ವಿವರಗಳನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ನಿಗದಿತ ವಿದ್ಯಾರ್ಹತೆ ಹೊಂದಿದ ಶಿಕ್ಷಕರನ್ನೆ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ನಿರ್ದಿಷ್ಟ ಮೊತ್ತದ ವೇತನವನ್ನೆ ನೀಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2018ರಲ್ಲಿಯೇ ಸುತ್ತೋಲೆ ಹೊರಡಿಸಿದ್ದರು.

ಆ ಸುತ್ತೋಲೆಯನ್ನೆ ಉಲ್ಲೇಖಿಸಿ ಈಗ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ನಿಯಮವನ್ನು ಜಾರಿ ಮಾಡುವಂತೆ ಅನುದಾನರಹಿತ ಶಾಲೆಗಳ ಗಮನ ಸೆಳೆಯುತ್ತಿದ್ದಾರೆ. ಆದರೆ, ನಿಯಮ ಜಾರಿಗೆ ಅನುದಾನರಹಿತ ಶಾಲೆಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸುತ್ತಿದೆ.

‘ಇಲಾಖೆ ಸೂಚಿಸಿದ್ದಂತೆ ನಾವು ಶಿಕ್ಷಕರ ಸಂಬಳವನ್ನು ನೀಡಬೇಕಾದರೆ, ಮಕ್ಕಳ ಶಾಲಾ ಶುಲ್ಕವನ್ನು ಶೇ 200ರಿಂದ 300 ರವರೆಗೆ ಹೆಚ್ಚಳ ಮಾಡಬೇಕಾಗುತ್ತದೆ. ಆಯಾ ಶಿಕ್ಷಣ ಸಂಸ್ಥೆಗಳು ಶಿಕ್ಷಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೆಲಸಕ್ಕೆ ನಿಯೋಜಿಸಿಕೊಂಡಿರುತ್ತವೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು’ ಎಂದು ರಾಜ್ಯ ಅನುದಾನ ರಹಿತ ಶಾಲೆಗಳಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಿ. ಶಶಿಕುಮಾರ್‌ ತಿಳಿಸಿದರು.

‘ಬೋಧನಾ ವ್ಯವಸ್ಥೆ ಮತ್ತು ಶಾಲೆಯಲ್ಲಿನ ಸೌಕರ್ಯಗಳ ನಿರ್ವಹಣೆಗೆ ಅನುಗುಣವಾಗಿ ಆಯಾ ಶಾಲೆಗಳು ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಕನಿಷ್ಠ ₹ 4,000 ದಿಂದಲೂ ಶುಲ್ಕ ಸಂಗ್ರಹಿಸುತ್ತವೆ. ಶೇ 80ರಷ್ಟು ಶಾಲೆಗಳಲ್ಲಿ ಮಧ್ಯಮ ವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಕರಿಗೆ ನಿರ್ದಿಷ್ಟ ಸಂಬಳ ನೀಡುವ ಹೊರೆ ನಮ್ಮ ಮೇಲೆ ಬಿದ್ದರೆ, ಶಾಲಾ ಶುಲ್ಕ ಹೆಚ್ಚಿಸುವ ಮೂಲಕ ಅದನ್ನು ಪೋಷಕರ ಹೆಗಲಿಗೆ ವರ್ಗಾಯಿಸದೆ ನಮಗೆ ಬೇರೆ ದಾರಿ ಇಲ್ಲ’ ಎಂದು ಅವರು ಹೇಳಿದರು.

‘ಬಹುತೇಕ ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗರಿಷ್ಠ ₹ 15,000, ಪ್ರೌಢಶಾಲಾ ಶಿಕ್ಷಕರಿಗೆ ಗರಿಷ್ಠ ₹ 20,000 ಸಂಬಳ ನೀಡಲಾಗುತ್ತಿದೆ’ ಎಂದು ಮುಖ್ಯೋಪಾಧ್ಯಾಯರೊಬ್ಬರು ತಿಳಿಸಿದರು.

ಇಲಾಖೆ ನಿಯಮದ ಪ್ರಕಾರ ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ₹ 25,800, ಪ್ರೌಢಶಾಲಾ ಶಿಕ್ಷಕರಿಗೆ ₹ 33,450, ಅಲ್ಲಿನ ಪ್ರಥಮ ದರ್ಜೆ ಸಹಾಯಕರಿಗೆ ₹ 27,650, ದ್ವಿತೀಯ ದರ್ಜೆ ಸಹಾಯಕರಿಗೆ ₹ 21,400 ಹಾಗೂ ‘ಡಿ’ ದರ್ಜೆ ನೌಕರರಿಗೆ ₹ 17,000 ಸಂಬಳ ಪ್ರತಿ ತಿಂಗಳು ನೀಡಬೇಕು.

*
ನಮ್ಮ ಶಾಲಾ ಶಿಕ್ಷಕರಿಗೆ ಉತ್ತಮ ಸಂಬಳ ನಿಗದಿ ಪಡಿಸಿರುವ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿನ ಅತಿಥಿ ಶಿಕ್ಷಕರಿಗೆ ಯಾಕೆ ಕೇವಲ ₹ 6,500 ಕೊಡುತ್ತಿದೆ?
–ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT