ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶನಿವಾರ, ಭಾನುವಾರವೂ ಇನ್ನು ಸ್ವತ್ತು ನೋಂದಣಿ

ರಾಜ್ಯದ 35 ಉಪನೋಂದಣಿ ಕಚೇರಿಗಳಲ್ಲಿ ಈ ಸೌಲಭ್ಯ
Published : 24 ಸೆಪ್ಟೆಂಬರ್ 2024, 1:12 IST
Last Updated : 24 ಸೆಪ್ಟೆಂಬರ್ 2024, 1:12 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್‌ 21ರಿಂದ ಶನಿವಾರ ಮತ್ತು ಭಾನುವಾರ ಸ್ವತ್ತುಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಐದು ಉಪನೋಂದಣಿ ಕಚೇರಿಗಳು ಸೇರಿ ರಾಜ್ಯದ 35 ಉಪನೋಂದಣಿ ಕಚೇರಿಗಳಲ್ಲಿ ಈ ಸೌಲಭ್ಯ ಸಿಗಲಿದೆ.

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಶನಿವಾರ ಮತ್ತು ಭಾನುವಾರ ನೋಂದಣಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇತ್ತು. ಇದರಿಂದ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಹಾಗೂ ಹೊರ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೂ ಅನುಕೂಲವಾಗಲಿದೆ. ಪ್ರತಿ ಜಿಲ್ಲೆಯಲ್ಲಿ ನಾಲ್ಕು ಅಥವಾ ಐದು ಉಪನೋಂದಣಿ ಕಚೇರಿಗಳಿದ್ದರೆ, ಒಂದು ಕಚೇರಿ ಮಾತ್ರ ಈ ಎರಡು ದಿನಗಳಂದು ಕಾರ್ಯ ನಿರ್ವಹಿಸುತ್ತದೆ. ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸಿದ ಕಚೇರಿಗಳಿಗೆ ಮಂಗಳವಾರ ರಜೆ ನೀಡಲಾಗುತ್ತದೆ ಎಂದು ಹೇಳಿದರು.

ಸ್ವತ್ತು ನೋಂದಾಯಿಸಿಕೊಳ್ಳಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗಲೇ ಶನಿವಾರ ಅಥವಾ ಭಾನುವಾರ ನೋಂದಣಿ ಮಾಡಿಸಿಕೊಳ್ಳುವ ಸಂಬಂಧ ನಮೂದಿಸಬೇಕು. ಯಾವ ಯಾವ ಕಚೇರಿಗಳು ಈ ಎರಡು ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂಬ ಮಾಹಿತಿಯನ್ನು ಆನ್‌ಲೈನ್‌ ಮೂಲಕವೇ ನೀಡಲಾಗುತ್ತದೆ. ಆಯಾ ಜಿಲ್ಲೆಯ, ಯಾವುದೇ ನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಉತ್ತಮ ಮತ್ತು ಜನಪರ ಆಡಳಿತದ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಅನುಮತಿ ನೀಡಿದೆ ಎಂದು ಅವರು ಹೇಳಿದರು.

‘ಸ್ವತ್ತು ಖಾತೆಗಳ ಡಿಜಿಟಲೀಕರಣ’

ರಾಜ್ಯದಲ್ಲಿ ಸ್ವತ್ತುಗಳಿಗೆ ಸಂಬಂಧಿಸಿದಂತೆ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಗಟ್ಟಲು ಖಾತೆಗಳ ಡಿಜಿಟಲೀಕರಣ ವ್ಯವಸ್ಥೆ ಒಟ್ಟು 12 ಜಿಲ್ಲೆಗಳಲ್ಲಿ ಜಾರಿ ಬರಲಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಖಾತೆಗಳ ಡಿಜಿಟಲೀಕರಣವನ್ನು ಕಳೆದ 7– 8 ತಿಂಗಳಿಂದ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ಎಲ್ಲೂ ಸಮಸ್ಯೆ ಆಗಿಲ್ಲ. ಹೀಗಾಗಿ ಹೊಸದಾಗಿ ಇನ್ನು ಎಂಟು ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ಇದರಿಂದ ಖಾತೆಗಳು ಕಾಗದ ರೂಪದಲ್ಲಿ ಮಾತ್ರವಲ್ಲದೇ ಡಿಜಿಟಲ್‌ ರೂಪದಲ್ಲಿ ಲಭ್ಯವಿರುತ್ತದೆ. ಭವಿಷ್ಯದಲ್ಲಿ ಬಯೊಮೆಟ್ರಿಕ್‌ ದೃಢೀಕರಣ ವ್ಯವಸ್ಥೆಯನ್ನು ಅಳವಡಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಪುರಸಭೆ ಬಿಬಿಎಂಪಿ ಬಿಡಿಎ ಸೇರಿ ಎಲ್ಲ ಸ್ಥಳೀಯ ಆಡಳಿತದ ಬಳಿಯೂ ಖಾತೆಗಳ ಡಿಜಿಟಲ್‌ ದತ್ತಾಂಶ ಇರುತ್ತದೆ. ಪ್ರತಿಯೊಂದು ಸ್ವತ್ತಿನ ಮಾಲೀಕನ ಹೆಸರು ವಿಳಾಸ ಸಂಖ್ಯೆ ದಾಖಲಾಗಿರುತ್ತವೆ. ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಎಲ್ಲ ಮಾಹಿತಿ ಸರಿ ಇದ್ದರೆ ಮಾತ್ರ ಖಾತಾ ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ತಿರಸ್ಕರಿಸಲ್ಪಡುತ್ತದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಕಲಿ ಖಾತೆ ಹಾವಳಿ ಹೆಚ್ಚಾಗಿದೆ. ಇದರಿಂದ ಅಮಾಯಕರು ತೊಂದರೆಗೆ ಸಿಲುಕುತ್ತಿದ್ದಾರೆ. ನಕಲಿ ಖಾತೆಗಳ ಮೂಲಕ ಸರ್ಕಾರಕ್ಕೆ ವರ್ಷಕ್ಕೆ ಕನಿಷ್ಠ ₹500 ಕೋಟಿಯಿಂದ ₹600 ಕೋಟಿಯಷ್ಟು ಆದಾಯ ನಷ್ಟವಾಗುತ್ತಿದೆ. ಇದನ್ನು ತಡೆಗಟ್ಟಲು ಖಾತೆಗಳ ಡಿಜಿಟಲೀಕರಣ ಒಂದು ಉತ್ತಮ ಮಾರ್ಗ ಎಂದು ಅವರು ತಿಳಿಸಿದರು.

ನೋಂದಣಿ ಮಾಡಿಸುವ  ಸಂದರ್ಭದಲ್ಲಿ ಸ್ವತ್ತಿನ ಸ್ಕೆಚ್‌ ಕಡ್ಡಾಯ. ಆದರೆ ಸ್ಕೆಚ್‌ ಇಲ್ಲದೇ ಟಿಡಿಆರ್‌ ಹೆಸರಿನಲ್ಲಿ ನೋಂದಣಿ ಮಾಡುವ ಮೂಲಕ ವಂಚಿಸಲಾಗುತ್ತಿದೆ. ಅಲ್ಲದೇ ಮಾರ್ಗಸೂಚಿ ದರದಿಂದ ತಪ್ಪಿಸಿಕೊಳ್ಳಲು ಸ್ವತ್ತಿನ ನಮೂನೆಯನ್ನು ಇತರೆ ಎಂದು ನಮೂದಿಸಲಾಗುತ್ತಿದೆ. ಇತರೆಯಲ್ಲಿ ಆಶ್ರಯ  ಮನೆಗಳು ಬರುತ್ತವೆ. ಇದರಿಂದಲೂ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಬೆಂಗಳೂರಿನಲ್ಲಿ ಶೇ 91ರಷ್ಟು ನೋಂದಣಿಯಲ್ಲಿ ‘ಇತರೆ’ ಎಂದು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸತ್ತವರ ಹೆಸರಲ್ಲಿ 48 ಲಕ್ಷ ಖಾತೆಗಳು

ರಾಜ್ಯದಲ್ಲಿ 48 ಲಕ್ಷ ಖಾತೆಗಳು ಸತ್ತವರ ಹೆಸರಲ್ಲೇ ಇವೆ. ಆಧಾರ್ ಜೋಡಣೆಯಿಂದ ಈ ಅಂಶ ಪತ್ತೆಯಾಗಿದೆ ಎಂದು ಸಚಿವ ಕೃ‌ಷ್ಣಬೈರೇಗೌಡ ಹೇಳಿದರು. ಇದರಿಂದಾಗಿ ಎಷ್ಟು ಪೌತಿ ಖಾತೆಗಳು ಆಗಿಲ್ಲ ಎಂಬ ಮಾಹಿತಿಯೂ ಗ್ರಾಮವಾರು ಲಭ್ಯವಾಗಿದೆ. ಪೌತಿ ಖಾತೆ ಮಾಡಿಕೊಡಲು ಅಭಿಯಾನ ಆರಂಬಿಸಲಾಗುವುದು. ಇದಕ್ಕೆ ದಿನಾಂಕ ನಿಗದಿ ಮಾಡಬೇಕಾಗಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ಪೌತಿ ಖಾತೆಗಳು ಆಗಿಲ್ಲ ಎಂದು ಅವರು ತಿಳಿಸಿದರು. ಪೌತಿ ಖಾತೆ ಮಾಡಿಸಿಕೊಳ್ಳಲು ತಕರಾರು ಇದ್ದರೆ ಅದನ್ನು ಆ ಕುಟುಂಬದವರಿಂದ ಬರೆಸಿಕೊಂಡು ಡಿಜಿಟಲೀಕರಣ ಮಾಡಿಟ್ಟುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT