ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಎರಡು ತಿಂಗಳು ತರಗತಿಗಳಿಗೆ ಕುತ್ತು

ಮತಯಂತ್ರ ಸಂರಕ್ಷಣೆ, ಮತ ಎಣಿಕೆ ಕೇಂದ್ರಗಳಿಗೆ ಕಾಲೇಜು ಕಟ್ಟಡಗಳು
Published 29 ಏಪ್ರಿಲ್ 2024, 23:56 IST
Last Updated 29 ಏಪ್ರಿಲ್ 2024, 23:56 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ನಂತರ ಶೈಕ್ಷಣಿಕ ವೇಳಾಪಟ್ಟಿಯಲ್ಲಿನ ಏರುಪೇರಿನಿಂದ ಸಂಕಷ್ಟ ಅನುಭವಿಸುತ್ತಾ ಬಂದಿದ್ದ ಪದವಿ ವಿದ್ಯಾರ್ಥಿಗಳು ಚುನಾವಣಾ ಕಾರಣಕ್ಕೆ ಸಮರ್ಪಕವಾಗಿ ತರಗತಿಗಳು ನಡೆಯದೇ ಪರಿತಪಿಸುವಂತಾಗಿದೆ. 

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹಳೆ ಮೈಸೂರು ಪ್ರಾಂತ್ಯದ 14 ಜಿಲ್ಲೆಗಳಲ್ಲಿ ಈಗಾಗಲೇ (ಏ. 26) ಮತದಾನ ಮುಕ್ತಾಯವಾಗಿದೆ. ಕಲ್ಯಾಣ ಕರ್ನಾಟಕ, ಮಲೆನಾಡು, ಮಧ್ಯ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ 14 ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ.

ಚುನಾವಣಾ ಆಯೋಗವು ಮತ ಎಣಿಕೆಗಾಗಿ ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾಲೇಜುಗಳ ಕಟ್ಟಡಗಳನ್ನು ಈಗಾಗಲೇ ವಶಕ್ಕೆ ಪಡೆದಿದೆ. ಏ.26ರಂದು ಮತದಾನ ನಡೆದ ಕ್ಷೇತ್ರಗಳಲ್ಲಿನ ಮತಯಂತ್ರಗಳು ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಗಳನ್ನು ಸೇರಿವೆ. ಮತ ಎಣಿಕೆ ಜೂನ್‌ 4ಕ್ಕೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಾಲೇಜು ಆವರಣ ಪ್ರವೇಶಿಸಲು ಸಾಧ್ಯವಾಗದು. ಏಪ್ರಿಲ್‌ ಎರಡನೇ ವಾರ ಆರಂಭವಾಗಿದ್ದ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‌ಗಳನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಬೇಕಿದೆ. ಆದರೆ, ಎಣಿಕೆ ಕೇಂದ್ರಗಳಿಗೆ ಬಿಟ್ಟು ಕೊಟ್ಟ ಕಾಲೇಜುಗಳಲ್ಲಿ ಸುಮಾರು ಎರಡು ತಿಂಗಳು ಪಾಠ ನಡೆಸಲು ಅಡ್ಡಿಯಾಗುತ್ತಿದೆ. 

ಮತಯಂತ್ರ ಸಂರಕ್ಷಣೆ ಹಾಗೂ ಮತ ಎಣಿಕೆಗಾಗಿ ಚುನಾವಣಾ ಆಯೋಗ ವಶಕ್ಕೆ ಪಡೆದ ಬಹುತೇಕ ಕಟ್ಟಡಗಳು ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಾಗಿವೆ. ಕೋವಿಡ್‌ ನಂತರ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗಿದ್ದ ಕಾರಣ ರಜೆಯ ಅವಧಿ ಆಗಸ್ಟ್‌, ಸೆಪ್ಟೆಂಬರ್‌ಗೆ ಹೋಗಿದೆ. ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‌ ತರಗತಿಗಳು ಇದೇ ಏಪ್ರಿಲ್‌ ಎರಡನೇ ವಾರದಿಂದ ಆರಂಭವಾಗಿವೆ. ತರಗತಿಗಳು ಆರಂಭವಾದ ಒಂದೆರಡು ದಿನಗಳಲ್ಲೇ ಹಲವು ಕ್ಷೇತ್ರಗಳ ಪದವಿ ಕಾಲೇಜುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿದೆ. 

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜನ್ನು ಮತ ಎಣಿಕೆ ಕೇಂದ್ರಕ್ಕೆ ಪಡೆದ ಕಾರಣ 1,600ಕ್ಕೂ ಹೆಚ್ಚಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ವಿಜ್ಞಾನ ಕಾಲೇಜಿನಲ್ಲಿ ಮಧ್ಯಾಹ್ನ 3ರ ನಂತರ ಕೆಲ ತರಗತಿಗಳನ್ನು ನಡೆಸಲಾಗುತ್ತಿದೆ. ಕೋಲಾರದ ಸರ್ಕಾರಿ ಪದವಿ ಕಾಲೇಜನ್ನು ಸಮೀಪದ ಪಿಯು ಕಾಲೇಜಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ಬೆಳಗಾವಿಯ ರಾಣಿ ಪಾರ್ವತಿ ದೇವಿ ಪದವಿ ಕಾಲೇಜು, ಕೊಪ್ಪಳದ ಗವಿಸಿದ್ದೇಶ್ವರ ಪದವಿ ಕಾಲೇಜು, ಕುಮಟಾದ (ಉತ್ತರ ಕನ್ನಡ ಕ್ಷೇತ್ರ) ಡಾ.ಎ.ವಿ.ಬಾಳಿಗಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೂ ಪಿಯು ಕಾಲೇಜು ಕಟ್ಟಡದಲ್ಲಿ ಪಾಠ ಮಾಡಲಾಗುತ್ತಿದೆ. ಬೀದರ್‌ನ ಬಿ.ವಿ. ಭೂಮರಡ್ಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ತರಗತಿ ನಡೆಸಲಾಗುತ್ತಿದೆ. ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಮೂಲಕ ಪಾಠ ಮಾಡಲಾಗುತ್ತಿದೆ. ಅಗತ್ಯವಿದ್ದಾಗ ಪಕ್ಕದ ಹಾಸ್ಟೆಲ್‌ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ಕೆಲ ಪದವಿಪೂರ್ವ ಕಾಲೇಜುಗಳನ್ನೂ ಮತ ಎಣಿಕೆಗೆ ಪಡೆಯಲಾಗಿದೆ. ಪ್ರಸ್ತುತ ಪಿಯು ವಿದ್ಯಾರ್ಥಿಗಳಿಗೆ ರಜೆ ಇರುವ ಕಾರಣ ಸಮಸ್ಯೆ ಇಲ್ಲ. ಹಾಗೆಯೇ, ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಅಲ್ಲಿನ ವಿಶ್ವವಿದ್ಯಾಲಯಗಳನ್ನು ಬಳಸಿಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಕಟ್ಟಡಗಳು ಲಭ್ಯ ಇರುವುದರಿಂದ ಅಂತಹ ಮತ ಎಣಿಕೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿಲ್ಲ.

ಒಂದು ಸೆಮಿಸ್ಟರ್‌ ಅವಧಿ ನಾಲ್ಕು ತಿಂಗಳು, ಪಾಠ ನಡೆಯುವುದು ಮೂರು ತಿಂಗಳು. ಎರಡು ತಿಂಗಳು ಆನ್‌ಲೈನ್ ಪಾಠಕ್ಕೆ ಹೇಳಿದ್ದಾರೆ. ಗ್ರಾಮಗಳಲ್ಲಿ ನೆಟ್‌ವರ್ಕ್‌ ಇಲ್ಲ. ಇದು ಕಲಿಕೆ ಮೇಲೆ ಪರಿಣಾಮ ಬೀರಿದೆ.
ಕೈವಲ್ಯಾ, ವಿದ್ಯಾರ್ಥಿನಿ, ಮಹಾರಾಣಿ ಕಾಲೇಜು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT