ಬೆಂಗಳೂರು: ನಾಗಮಂಗಲ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳು ಮತ್ತು ಮತೀಯ ಮೂಲಭೂತವಾದಿಗಳ ಕೈವಾಡವಿರುವ ಬಲವಾದ ಸಂದೇಹ ಇರುವುದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕೆಎಫ್‌ಡಿನಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ದುರುಳರು ಗಲಭೆಗೂ ಮುನ್ನ 150 ಮಾಸ್ಕ್ ಖರೀದಿಸಿದ್ದಾರೆ, ಸಿಸಿಟಿವಿಗಳನ್ನು ನಾಶ ಮಾಡಿದ್ದಾರೆ. ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ ಮತ್ತು ಪೂರ್ವ ನಿಯೋಜಿತವಾಗಿದೆ ಎಂಬುದು ಸ್ಥಳೀಯರ ಅನುಮಾನವಾಗಿದೆ’ ಎಂದು ಅಶೋಕ ತಿಳಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ PFI, KFD ಅಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಈ ದುರುಳರು ಗಲಭೆಗೊ ಮುನ್ನ 150 ಮಾಸ್ಕ ಖರೀದಿಸಿದ್ದಾರೆ, ಸಿಸಿಟಿವಿಗಳನ್ನ ನಾಶ ಮಾಡಿದ್ದಾರೆ, ಮತ್ತು ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ… pic.twitter.com/Kf0g7BBarf
— R. Ashoka (@RAshokaBJP) September 15, 2024
‘ಅಷ್ಟೇ ಅಲ್ಲದೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೊದಲ 23 ಆರೋಪಿಗಳು ಹಿಂದೂಗಳೇ ಆಗಿರುವುದರಿಂದ ಪೊಲೀಸರು ನಿಷೇಧಿತ ಸಂಘಟನೆಗಳ ಒತ್ತಡದಲ್ಲಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ. ಈ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಬಲವಾದ ಸಂದೇಹ ಇರುವುದರಿಂದ ಸ್ಥಳೀಯ ಪೊಲೀಸರು ಪ್ರಕರಣವನ್ನು ಬೇಧಿಸುವುದು ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಒತ್ತಾಯಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.