ಬೆಂಗಳೂರು: ‘ದಾರಿಯಲ್ಲಿ ಹೋಗುವವರು ದೂರು ನೀಡಿದ್ದಕ್ಕೆಲ್ಲಾ ರಾಜ್ಯಪಾಲರು ನೋಟಿಸ್ ಕೊಡುತ್ತಾರೆ. ರಾಜಭವನ ಒಂದು ರೀತಿಯಲ್ಲಿ ಪೊಲೀಸ್ ಠಾಣೆಯಂತಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಪಾಲರು ಪಕ್ಷಾತೀತರಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಬಿಜೆಪಿ ಮುಖಂಡರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಲೋಕಸಭೆ ಚುನಾವಣೆ ನಂತರ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯಪಾಲರು ತೀರ್ಮಾನ ಮಾಡುತ್ತಿದ್ದಾರೆ. ರಾಜಭವನ ಘನತೆಗೆ ತಕ್ಕಂತೆ ಕಾಣುತ್ತಿಲ್ಲ. ರಾಜ್ಯಪಾಲರು ತಮ್ಮ ಮೇಲೆ ಇರುವ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಇದು ಮಾರಕ’ ಎಂದರು.
‘ಕೇರಳ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತನಗೆ ಬೇಕಾದಂತೆ ಬಳಸಿಕೊಂಡ ನಿದರ್ಶನವಿದೆ’ ಎಂದರು.