ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಆರೋಪ ಪ್ರಕರಣ: ಪಿಎಸ್‌ಐ ಅಮಾನತಿಗೆ ವಿಪಕ್ಷ ಸದಸ್ಯರ ಪಟ್ಟು

Published 20 ಫೆಬ್ರುವರಿ 2024, 16:57 IST
Last Updated 20 ಫೆಬ್ರುವರಿ 2024, 16:57 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ವಕೀಲರ ಸಂಘದ 40 ವಕೀಲರ ಮೇಲೆ ಎಫ್‌ಐಆರ್‌ ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ ರಾಮನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಧಾನಸಭೆಯಲ್ಲಿಯೂ ಮಂಗಳವಾರ ಪ್ರತಿಧ್ವನಿಸಿತು.

ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕು, ವಕೀಲ ಚಾಂದ್‌ಪಾಷಾನನ್ನು ಗಡಿಪಾರು ಮಾಡಬೇಕು ಎಂದು ಪಟ್ಟುಹಿಡಿದು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು. ಈ ವೇಳೆ ಆಡಳಿತ– ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದವೂ ನಡೆಯಿತು.

ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಿಷಯ ಪ್ರಸ್ತಾಪಿಸಿದರು. ಗೃಹ ಸಚಿವ ಜಿ. ಪರಮೇಶ್ವರ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ– ಜೆಡಿಎಸ್‌ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸದನ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್‌, ಆಡಳಿತ– ವಿರೋಧ ಪಕ್ಷದ ಸದಸ್ಯರನ್ನು ತಮ್ಮ ಕೊಠಡಿಗೆ ಕರೆಯಿಸಿ ಸಂಧಾನ ನಡೆಸಿದರು. ಮತ್ತೆ ಕಲಾಪ ಆರಂಭವಾದಾಗ, ಈ ಪ್ರಕರಣಕ್ಕೆ ಕುರಿತಂತೆ ಬುಧವಾರ ಮತ್ತೊಮ್ಮೆ ಉತ್ತರ ನೀಡುವುದಾಗಿ ಪರಮೇಶ್ವರ ಭರವಸೆ ನೀಡಿದ್ದರಿಂದ ಧರಣಿ ಕೈಬಿಡಲಾಯಿತು.

ರಾಮಗರದ ಐಜೂರಿನಲ್ಲಿ ನಡೆದ ಪ್ರಕರಣವನ್ನು ಬಿಚ್ಚಿಟ್ಟ ಆರ್‌. ಅಶೋಕ, ‘ವಕೀಲ ಚಾಂದ್‌ಪಾಷಾ ಅವಾಚ್ಯ ಶಬ್ದಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಾನೆ. ಆತನ ಬೆಂಬಲಿಗರು ವಕೀಲರ ಸಭೆ ನಡೆಸುತ್ತಿದ್ದ ವೇಳೆ ದಾಂಧಲೆ ನಡೆಸಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ, ಚಾಂದ್‌ಪಾಷಾ ಬೆಂಬಲಿಗರು ನೀಡಿದ ದೂರಿನ ಮೇರೆಗೆ 40 ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಕಿಡಿಕಾರಿದರು.

ಅದಕ್ಕೆ ಉತ್ತರಿಸಿದ ಪರಮೇಶ್ವರ, ‘ಚಾಂದ್‌ಪಾಷ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಪಿಎಸ್‌ಐ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಆದರೂ, ತನಿಖೆ ನಡೆಸಿ ವರದಿ ನೀಡುವಂತೆ ಚನ್ನಪಟ್ಟಣ ಡಿವೈಎಸ್‌ಪಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

‌ಸಚಿವರ ಉತ್ತರಕ್ಕೆ ‌ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ ಅವರು ಪಿಎಸ್ಐ ಅಮಾನತಿಗೆ ಆಗ್ರಹಿಸಿದರು.

ಈ ಮಧ್ಯೆಯೇ, ಕೆಲವು ಮಸೂದೆಗಳ ಮಂಡನೆಗೆ ಮತ್ತು ಅಂಗೀಕಾರಕ್ಕೆ ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಸಭಾಧ್ಯಕ್ಷರ ಈ ನಡೆಗೆ ಆರ್‌. ಅಶೋಕ ಮತ್ತು ಇತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT