ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರಂ ಕೆಫೆ‌ ಬಾಂಬ್ ಸ್ಫೋಟ: ಶಂಕಿತರು 10 ದಿನ ಎನ್ಐಎ ಕಸ್ಟಡಿಗೆ

ಭಯೋತ್ಪಾದನೆಯ ದೊಡ್ಡ ಸಂಚಿನ ಭಾಗ: ಎನ್‌ಐಎ ವಕೀಲ
Published 13 ಏಪ್ರಿಲ್ 2024, 7:13 IST
Last Updated 13 ಏಪ್ರಿಲ್ 2024, 7:13 IST
ಅಕ್ಷರ ಗಾತ್ರ

ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ’ಯಲ್ಲಿನ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಹತ್ತು ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿ ನಗರದ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಇಬ್ಬರೂ ಆರೋಪಿಗಳನ್ನು ಗುರುವಾರ (ಏ.12) ರಾತ್ರಿ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಂಧಿಸಿದ್ದ ಎನ್ಐಎ ತನಿಖಾಧಿಕಾರಿಗಳು ಶನಿವಾರ ಬೆಳಗ್ಗೆ 11.30ಕ್ಕೆ ನಗರದ ಎನ್ಜಿವಿ ಕಾಂಪ್ಲೆಕ್ಸ್‌ನಲ್ಲಿರುವ ಎನ್ಐಎ ವಿಶೇಷ ಕೋರ್ಟ್‌ನ ಉಸ್ತುವಾರಿ ನ್ಯಾಯಾಧೀಶ ಸಿ.ಬಿ.ಸಂತೋಷ್ ಅವರ ಗೃಹ ಕಚೇರಿಯಲ್ಲಿ ಹಾಜರುಪಡಿಸಲಾಯಿತು.

ಎನ್ಐಎ ಪರ ಹಾಜರಾಗಿದ್ದ ವಕೀಲ ಪಿ.ಪ್ರಸನ್ನಕುಮಾರ್, ‘ಆರೋಪಿಗಳನ್ನು ಕೋಲ್ಕತ್ತಾ ಮಹಾನಗರಕ್ಕೆ ಹೊಂದಿಕೊಂಡ ಪೂರ್ವ ಮೇದಿನಿಪುರ ಜಿಲ್ಲೆಯ ಹೋಟೆಲ್ ವೊಂದರಲ್ಲಿ ಗುರುವಾರ (ಏ.11) ರಾತ್ರಿ ವೇಳೆ ಎನ್ಐಎ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಇವರ ವಿರುದ್ಧ ಗುರುತರ ಆರೋಪಗಳಿದ್ದು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ವಶಕ್ಕೆ ಒಪ್ಪಿಸಲು ಆದೇಶಿಸಬೇಕು’ ಎಂದು ಕೋರಿದರು.

‘ಜನಸಂದಣಿ ಸ್ಥಳದಲ್ಲಿ ಬಾಂಬ್ ಇರಿಸಿ ಸ್ಫೋಟಿಸಿ, ಜನರಲ್ಲಿ ಭಯವನ್ನುಂಟು ಮಾಡಲಾಗಿದೆ. ಭಯೋತ್ಪಾದನೆಯ ದೊಡ್ಡ ಸಂಚಿನ ಭಾಗ ಇದಾಗಿದೆ. ಇದರಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಸಂಚಿನ ಪ್ರತಿಯೊಂದು ಸಂಗತಿಯನ್ನೂ ಪತ್ತೆ ಮಾಡಬೇಕಿದೆ. ಇದಕ್ಕಾಗಿ ಶಂಕಿತರ ವಿಚಾರಣೆ ಅಗತ್ಯವಿದೆ’ ಎಂದು ತಿಳಿಸಿದರು.

ಸುಮಾರು ಒಂದು ಗಂಟೆ ಎನ್ಐಎ ಪರ ಪ್ರಾಸಿಕ್ಯೂಷನ್ ವಾದ ಆಲಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು 10 ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿ ಆದೇಶಿಸಿದರು.

‘ಆರೋಪಿಗಳ ಬಂಧನದ ಬಗ್ಗೆ ಅವರ ಕುಟುಂಬ ವರ್ಗದವರಿಗೆ ಶುಕ್ರವಾರವೇ ಮಾಹಿತಿ ನೀಡಲಾಗಿತ್ತು. ಇಂದು ಅವರ ಪರವಾಗಿ ಕುಟುಂಬದ ಯಾವುದೇ ಸದ್ಯರಾಗಲೀ ಅಥವಾ ಅವರನ್ನು ಪ್ರತಿನಿಧಿಸುವ ವಕೀಲರಾಗಲೀ ವಿಚಾರಣೆ ವೇಳೆ ಹಾಜರಾಗಿರಲಿಲ್ಲ’ ಎಂದು ಪ್ರಸನ್ನ ಕುಮಾರ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT