ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ: ಬಾಂಬ್ ಇಟ್ಟಿದ್ದ ಮುಸಾವೀರ್, ಅಬ್ದುಲ್ ಮಥೀನ್ ವಶಕ್ಕೆ

ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆ * ಪಶ್ಚಿಮ ಬಂಗಾಳದಲ್ಲಿ ಸಿಕ್ಕಿಬಿದ್ದ ಆರೋಪಿಗಳು
Published 12 ಏಪ್ರಿಲ್ 2024, 4:45 IST
Last Updated 12 ಏಪ್ರಿಲ್ 2024, 4:45 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳು ಎನ್ನಲಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ ಅವರನ್ನು ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

‘ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟಿಸಲಾಗಿತ್ತು. ಬಾಂಬ್ ಇರಿಸಿದ್ದ ತೀರ್ಥಹಳ್ಳಿಯ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಲೆಮರೆಸಿ ಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ (ಏಪ್ರಿಲ್ 12) ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಸೆರೆ ಹಿಡಿಯಲಾಗಿದೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಶ್ಚಿಮ ಬಂಗಾಳಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಬಂದಿದ್ದ ಶಂಕಿತರು, ಹೋಟೆಲ್‌ವೊಂದರಲ್ಲಿ ಉಳಿದು
ಕೊಂಡಿದ್ದರು. ಎರಡು ದಿನ ಬಿಟ್ಟು ಹೋಟೆಲ್ ಕೊಠಡಿ ಖಾಲಿ ಮಾಡಿ ಗಡಿ ಮೂಲಕ ಬಾಂಗ್ಲಾದೇಶಕ್ಕೆ ಹೋಗಲು ತಯಾರಿ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು’ ಎಂದು ಅವರು ತಿಳಿಸಿದರು.

‘ಕೇಂದ್ರ ಗುಪ್ತಚರ ದಳ, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ಹಾಗೂ ಕೇರಳ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಹೋಟೆಲ್‌ನಲ್ಲಿಯೇ ಶಂಕಿತರನ್ನು ಬಂಧಿಸಲಾಯಿತು’ ಎಂದು ಅವರು ಹೇಳಿದರು.

ಹಲವು ವರ್ಷಗಳ ಸಂಚು: ‘ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಭಯೋತ್ಪಾದನಾ ಸಂಘಟನೆಯ ಉಗ್ರರ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಜೊತೆ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ಒಡನಾಟ ಇಟ್ಟುಕೊಂಡಿದ್ದರು. ಭಯೋತ್ಪಾದನಾ ಕೃತ್ಯ ಎಸಗಲು ಹಲವು ವರ್ಷಗಳಿಂದ ಇವರಿಬ್ಬರು ಸಂಚು ರೂಪಿಸುತ್ತಿದ್ದರು. ಶಿವಮೊಗ್ಗದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲೂ ಇವರಿಬ್ಬರು ಭಾಗಿಯಾಗಿದ್ದರು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಅಬ್ದುಲ್ ಮಥೀನ್‌ ಸಂಚು ರೂಪಿಸಿದ್ದ. ಯಾವ ಬಾಂಬ್ ಇರಿಸಬೇಕು? ಯಾವ ಸಮಯದಲ್ಲಿ ಇರಿಸಬೇಕು? ಯಾರು ಇರಿಸಬೇಕು? ಎಂಬಿತ್ಯಾದಿ ವಿಷಯಗಳ ಕುರಿತು ನಿರ್ಧರಿಸಿ ಸಿದ್ಧತೆ ಮಾಡಿಕೊಂಡಿದ್ದ. ಮುಸಾವೀರ್‌ಗೆ ವಿಷಯ ತಿಳಿಸಿ, ಬಾಂಬ್ ಇಟ್ಟು ಬರುವಂತೆ ಸೂಚಿಸಿದ್ದ. ನಂತರ, ಇಬ್ಬರೂ ಸೇರಿ ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದರು. ಅದನ್ನು ಮುಸಾವೀರ್, ರಾಮೇಶ್ವರಂ ಕೆಫೆಯಲ್ಲಿ ಇರಿಸಿ ಪರಾರಿಯಾಗಿದ್ದ’ ಎಂದು ತಿಳಿಸಿವೆ.

ಬಾಂಬ್‌ ಸ್ಫೋಟ ಪ್ರಕರಣದಲ್ಲಿ‌ ಚಿಕ್ಕಮಗಳೂರಿನ ಮುಜಮೀಲ್ ಶರೀಫ್ ಹಾಗೂ ತೀರ್ಥಹಳ್ಳಿಯ ಮಾಝ್ ಮುನೀರ್‌ ಅಹಮದ್‌ನನ್ನು ಎನ್ಐಎ ಅಧಿಕಾರಿಗಳು ಈಗಾಗಲೇ ‌ಬಂಧಿಸಿದ್ದಾರೆ. ಇದೀಗ ಪ್ರಮುಖ ರೂವಾರಿಗಳನ್ನು ಬಂಧಿಸಿದ್ದು, ಪ್ರಕರಣ ದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮತ್ತಷ್ಟು ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ. 

3 ದಿನ ಎನ್‌ಐಎ ಕಸ್ಟಡಿಗೆ

‘ಮುಸಾವೀರ್ ಹಾಗೂ ಅಬ್ದುಲ್ ಮಥೀನ್‌ ನನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು. ಟ್ರಾನ್ಸಿಟ್ ವಾರೆಂಟ್ ಮೇಲೆ ಇಬ್ಬರನ್ನೂ ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ. ಬೆಂಗಳೂರಿಗೆ ಕರೆತಂದು ವಿಚಾರಣೆ ಮುಂದುವರಿಸಲಾಗುವುದು’ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದರು.

ಬಿಜೆಪಿ–ಟಿಎಂಸಿ ವಾಕ್ಸಮರ

ಕೋಲ್ಕತ್ತ (ಪಿಟಿಐ): ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಇಬ್ಬರು ಆರೋಪಿ ಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಬೆನ್ನಲ್ಲೇ ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷ ಬಿಜೆಪಿ ಮಧ್ಯೆ ವಾಕ್ಸಮರ ಶುರುವಾಗಿದೆ.

ಟಿಎಂಸಿ ಆಡಳಿತವು ರಾಜ್ಯವನ್ನು ಉಗ್ರರ ಸುರಕ್ಷಿತ ಸ್ವರ್ಗವಾಗಿ ಪರಿವರ್ತಿಸಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

‘ಪ್ರಕರಣದ ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರ ಅವಧಿಯಲ್ಲಿ ಪಶ್ಚಿಮ ಬಂಗಾಳವು ಭಯೋತ್ಪಾದಕರ ಸುರಕ್ಷಿತ ಸ್ವರ್ಗವಾಗಿದೆ’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅಮಿತ್‌ ಮಾಳವೀಯ ‘ಎಕ್ಸ್‌’ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈ ಬೆನ್ನಲ್ಲೇ ಟಿಎಂಸಿ ನಾಯಕ ಕುನಾಲ್‌ ಘೋಷ್‌, ‘ಆರೋಪಿಗಳನ್ನು ಪಶ್ಚಿಮ ಬಂಗಾಳ ಪೊಲೀಸರ ನೆರವಿನಿಂದ ಎನ್‌ಐಎ ಬಂಧಿಸಿದೆ’ ಎಂದು ತಿರುಗೇಟು ನೀಡಿದ್ದಾರೆ.

‘ಸಮಾಜ ವಿರೋಧಿಗಳು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು ಪಶ್ಚಿಮ ಬಂಗಾಳದ ಕಾಂಥಿಯಲ್ಲಿ. ಬಿಜೆಪಿಯ ಪ್ರಮುಖ ನಾಯಕ ಮತ್ತು ಅವರ ಕುಟುಂಬದವರು ಕಾಂಥಿಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದ್ದಾರೆ.

ಕಾಂಥಿ ಕ್ಷೇತ್ರವು ಬಿಜೆಪಿಯ ಸುವೇಂದು ಅಧಿಕಾರಿ ಅವರ ಭದ್ರಕೋಟೆ ಯಾಗಿದೆ.

ಕೂಚ್‌ ಬಿಹಾರ್‌ನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳುಸುದ್ದಿ ಹರಡುತ್ತಿದೆ’ ಎಂದು ಕಿಡಿಕಾರಿದ್ದಾರೆ.

‘ಬಂಗಾಳ ಸುರಕ್ಷಿತ ಅಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ರಾಜ್ಯದ ಪೊಲೀಸರ ಪ್ರಾಮಾಣಿಕ ಪ್ರಯತ್ನದ ಫಲವಾಗಿ  ಆರೋಪಿಗಳನ್ನು 2 ಗಂಟೆಗಳಲ್ಲಿ ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಆರೋಪವನ್ನು ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆ ಕೂಡ ತಳ್ಳಿಹಾಕಿದೆ. ‘ಬಿಜೆಪಿಯ ಸುಳ್ಳನ್ನು ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆಯು ಬಹಿರಂಗಪಡಿಸುತ್ತದೆ. ಆರೋಪಿಗಳನ್ನು ಗುಪ್ತಚರ ದಳ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ  ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆಯ ಪಾತ್ರ ಏನೆಂದು ಎನ್‌ಐಎ ದೃಢಪಡಿಸಿದೆ’ ಎಂದು ಅದು ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT