ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CM ವಿರುದ್ಧ ಮರುತನಿಖೆ: 6 ತಿಂಗಳಲ್ಲಿ ವರದಿ ಸಲ್ಲಿಸಲು ಲೋಕಾಯುಕ್ತಕ್ಕೆ ನಿರ್ದೇಶನ

Published 22 ಫೆಬ್ರುವರಿ 2024, 23:41 IST
Last Updated 22 ಫೆಬ್ರುವರಿ 2024, 23:41 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವಿವೇಕ್ ಹೋಟೆಲ್‌ ವ್ಯವಸ್ಥಾಪಕ ನಿರ್ದೇಶಕ ಎಲ್.ವಿವೇಕಾನಂದ ಅಲಿಯಾಸ್ ಕಿಂಗ್ಸ್ ಕೋರ್ಟ್ ವಿವೇಕ್ ಅವರಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನ (ಬಿಟಿಸಿಎಲ್) ಸ್ಟೀವರ್ಡ್ ಆಗಿ ನೇಮಕ ಮಾಡಿದ್ದಾರೆ’ ಎಂದು ಆರೋಪಿಸಲಾದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

‘ಬಿ’ ರಿಪೋರ್ಟ್‌ ಸಲ್ಲಿಕೆಯನ್ನು ಆಕ್ಷೇಪಿಸಿ, ದೂರುದಾರರೂ ಆದ ಬಿಜೆಪಿ ಮುಖಂಡ ಎನ್‌.ಆರ್.ರಮೇಶ್ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ‌’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಪುರಸ್ಕರಿಸಿದ್ದಾರೆ.

‘ತನಿಖಾಧಿಕಾರಿ ಸಲ್ಲಿಸಿರುವ ಬಿ ರಿಪೋ‌ರ್ಟ್‌ ಅನ್ನು ತಿರಸ್ಕರಿಸಲಾಗುತ್ತಿದೆ. ತನಿಖಾಧಿಕಾರಿ ಹೊಸದಾಗಿ ಹೆಚ್ಚಿನ ತನಿಖೆ ನಡೆಸಿ ಆರು ತಿಂಗಳ ಒಳಗಾಗಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

‘ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ನಿವೇಶನ ಖರೀದಿಸಲು ಮತ್ತು ಗೃಹ ನಿರ್ಮಾಣಕ್ಕಾಗಿ ₹1.30 ಕೋಟಿ ಪಡೆದ ಬಳಿಕ ವಿವೇಕಾನಂದ ಅವರನ್ನು ಬಿಟಿಸಿಎಲ್ ಸ್ಟೀವರ್ಡ್ ಆಗಿ ನಾಮನಿರ್ದೇಶನ ಮಾಡಿದ್ದಾರೆ ಎಂಬ ಆರೋಪವಿದೆ. ಇಲ್ಲಿ ಭ್ರಷ್ಟಾಚಾರ ನಡೆದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸದೇ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ. ಕಾನೂನಿನ ದೃಷ್ಟಿಯಲ್ಲಿ ಇದು ಸರಿಯಲ್ಲ. ಪ್ರಾಥಮಿಕ ತನಿಖೆಯನ್ನಷ್ಟೇ ಆಧರಿಸಿ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ಹಣ ಅಕ್ರಮವಾಗಿ ಸ್ವೀಕರಿಸಿದ ಆರೋಪವಿದ್ದು, ಪ್ರತಿಫಲಾಪೇಕ್ಷೆಯ ಆರೋಪವನ್ನೂ ಮಾಡಿರುವಾಗ ಇದರಲ್ಲಿ ದುರುದ್ದೇಶ ಇದೆಯೇ? ಜನಪ್ರತಿನಿಧಿಗಳಿಗೆ ಇರುವ ನೀತಿ ಸಂಹಿತೆ ಉಲ್ಲಂಘಿಸಲಾಗಿದೆಯೇ ಎಂಬುದನ್ನೆಲ್ಲಾ ತನಿಖಾ ಸಂಸ್ಥೆ ಪರಿಶೀಲಿಸಬೇಕು. ಇದನ್ನು ಪರಿಗಣಿಸದೇ ಸಲ್ಲಿಸುವ ವರದಿಯನ್ನು ಪೂರ್ಣ ವರದಿ ಎನ್ನಲಾಗದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT