ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುಮಾರಪಾರ್ಕ್ ಸರ್ಕಾರಿ ಗೃಹ ಕಚೇರಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಷಯ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮಧ್ಯೆಯೇ ಈ ಇಬ್ಬರು ಸುಮಾರು ಒಂದು ತಾಸು ರಹಸ್ಯವಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ಜಾರಕಿಹೊಳಿ ತಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಾಬಲ್ಯಕ್ಕೆ ಸವಾಲು ಹಾಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಶಿವಕುಮಾರ್ ಪ್ರಾಮುಖ್ಯತೆ ನೀಡಿರುವುದಕ್ಕೆ ಜಾರಕಿಹೊಳಿ ಅಸಮಾಧಾನಗೊಂಡಿದ್ದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ನಿರ್ದೇಶಕರು, ನಿರ್ಮಾಪಕರು ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಷಯವನ್ನು ಸುದ್ದಿಗಾರರು ಗಮನಕ್ಕೆ ತಂದಾಗ, ಆ ರೀತಿ ಹೇಳಿಕೆ ನೀಡಿದವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿಕೊಡೋಣ ಎಂದು ಶಿವಕುಮಾರ್ ತಿರುಗೇಟು ನೀಡಿದ್ದರು. ಈ ಹಿನ್ನೆಲೆಯಲ್ಲಿಯೂ ಇವರಿಬ್ಬರ ಭೇಟಿ ಚರ್ಚೆಗೆ ಗ್ರಾಸವಾಗಿದೆ.