ಬೆಂಗಳೂರು: ‘ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವು ವಿದ್ಯಾರ್ಥಿಯ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ವಿದ್ಯಾರ್ಥಿಯ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ) ಕೇರಿಂಗ್ ವಿತ್ ಕಲರ್-ಎ ಮಾನಸಿ ಕಿರ್ಲೋಸ್ಕರ್ ಇನಿಷಿಯೆಟಿವ್ (ಸರ್ಕಾರೇತರ ಸಂಸ್ಥೆ) ಸಹಯೋಗದಲ್ಲಿ ಡಿಜಿಟಲ್ ಸಂಪನ್ಮೂಲ ಸಾಹಿತ್ಯ ಅಭಿವೃದ್ಧಿಪಡಿಸಿದೆ. ಉರ್ದು ಮಾಧ್ಯಮದಲ್ಲಿರುವ ಇದು, 4ರಿಂದ 7ನೇ ತರಗತಿವರೆಗಿನ ಗಣಿತ ಹಾಗೂ ವಿಜ್ಞಾನದ ವಿಷಯ ಒಳಗೊಂಡಿದೆ.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿಟಲ್ ಸಂಪನ್ಮೂಲ ಸಾಹಿತ್ಯ ಲೋಕಾರ್ಪಣೆ ಮಾಡಿ ಮಾತನಾಡಿದ ಕಾವೇರಿ, ‘ಅಭಿವೃದ್ಧಿಪಡಿಸಲಾದ ಡಿಜಿಟಲ್ ಸಂಪನ್ಮೂಲ ಸಾಹಿತ್ಯವು ‘ಟಿಚೋಪಿಯಾ’ ಎಂಬ ಆ್ಯಪ್‌ನಲ್ಲಿ ಲಭ್ಯವಿದೆ. ಶೈಕ್ಷಣಿಕ ಜಿಲ್ಲಾವಾರು ಡಯಟ್ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಬೋಧಕರು ತಮ್ಮ ಜಿಲ್ಲೆಗಳಲ್ಲಿನ ಉರ್ದು ಶಾಲೆಗಳ ಶಿಕ್ಷಕರಿಗೆ ಈ ಸಂಪನ್ಮೂಲಗಳು ತಲುಪುವಂತೆ ಮಾಡಿ, ಆ ಮೂಲಕ ಶೈಕ್ಷಣಿಕ ಬಲವರ್ಧನೆಗೆ ಶ್ರಮಿಸಬೇಕು’ ಎಂದರು.
ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕ ರಘುವೀರ ಬಿ.ಎಸ್., ‘ಅನುಭವಾತ್ಮಕ ಕಲಿಕಾ ಬೋಧನಾ ವಿಧಾನಕ್ಕೆ ಅನುಗುಣವಾಗಿ ಸಂಪನ್ಮೂಲ ಸಾಹಿತ್ಯವನ್ನು ಉರ್ದು ಮಾಧ್ಯಮದಲ್ಲಿ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲ ಉರ್ದು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯಬೇಕು’ ಎಂದು ತಿಳಿಸಿದರು.
ನಿರ್ದೇಶನಾಲಯದ ಉಪ ನಿರ್ದೇಶಕ ರಾಮು ಎನ್.ಎಂ., ಸಹಾಯಕ ನಿರ್ದೇಶಕರಾದ ಅಸ್ಮಾ ಬೇಗಂ ಮತ್ತು ಕುಮಾರಸ್ವಾಮಿ, ಕೇರಿಂಗ್ ವಿತ್ ಕಲರ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಾಜೀವ್ ಅನ್ನಲೂರು, ಯೋಜನಾ ಅನುಷ್ಠಾನ ವ್ಯವಸ್ಥಾಪಕ ಡಿ.ಆರ್. ಪ್ರಸನ್ನಕುಮಾರ್, ಸೈಯದ್ ಅತೀಕುಲ್ಲಾ ಉಪಸ್ಥಿತರಿದ್ದರು.