ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಕೇಂದ್ರಗಳ ಬಳಿ ಸೌರಶಕ್ತಿ ಘಟಕ: ಜಾರ್ಜ್‌

ಕಲಬುರಗಿಯಲ್ಲಿ 5ರಂದು ಗೃಹ ಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಚಾಲನೆ
Published 1 ಆಗಸ್ಟ್ 2023, 15:40 IST
Last Updated 1 ಆಗಸ್ಟ್ 2023, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದಿಸಲು ಪ್ರತ್ಯೇಕ ನೀತಿ ರೂಪಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

‘ರೈತರ ಪಂಪ್‌ಸೆಟ್‌, ಬೃಹತ್‌ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿದ್ಯುತ್‌ ಬಿಲ್‌ ಕಡಿಮೆ ಮಾಡಲು ಎಲ್ಲ ವಿದ್ಯುತ್ ಉಪಕೇಂದ್ರಗಳ ಸಮೀಪ ಸೌರವಿದ್ಯುತ್ ಘಟಕಗಳನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದ, ವಿತರಣಾ ನಷ್ಟ ತಡೆಯಲು ಹಾಗೂ ಸ್ಥಳೀಯವಾಗಿ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್‌ ಉತ್ಪಾದಿಸಿದರೆ ಸೋರಿಕೆ ತಪ್ಪಿಸಬಹುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಉಪಕೇಂದ್ರಗಳ ಸುತ್ತ ರೈತರು ಲೀಸ್‌ ಆಧಾರದ ಮೇಲೆ ಭೂಮಿ ನೀಡಿದರೆ ಪಾವಗಡ ರೀತಿಯಲ್ಲೇ ಸೌರಶಕ್ತಿ ವಿದ್ಯುತ್‌ ಉತ್ಪಾದನೆ ಮಾಡಬಹುದು. ಈ ಸ್ಥಳಗಳ ಸುತ್ತ 5ರಿಂದ 10 ಎಕರೆ ಪ್ರದೇಶದಲ್ಲಿ 10 ಮೆಗಾವ್ಯಾಟ್‍ವರೆಗೂ ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಇದರಿಂದ,  ಗ್ರಾಹಕರಿಗೂ ಅನುಕೂಲವಾಗಲಿದೆ’ ಎಂದರು.

‘ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ 11 ಮೆಗಾವಾಟ್‌ ಸಾಮರ್ಥ್ಯದ ಸ್ಥಾವರವನ್ನು ಬಿಡದಿಯಲ್ಲಿ ಇಂಧನ ಇಲಾಖೆ ಮತ್ತು ಬಿಬಿಎಂಪಿ ವತಿಯಿಂದ ಸ್ಥಾಪಿಸಲಾಗಿದ್ದು, ಆಗಸ್ಟ್‌ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ. ಈ ಘಟಕದಲ್ಲಿ ಪ್ರತಿ ಯೂನಿಟ್‌ ವಿದ್ಯುತ್‌ ಉತ್ಪಾದನೆಗೆ ₹8 ವೆಚ್ಚವಾಗಲಿದೆ. ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಉಳಿದ ಸ್ಥಳೀಯ ಸಂಸ್ಥೆಗಳಲ್ಲೂ ಅನುಷ್ಠಾನಗೊಳಿಸಲಾಗುವುದು. ಇದರಿಂದ, ಸ್ಥಳೀಯ ಮಟ್ಟದಲ್ಲಿ ತ್ಯಾಜ್ಯ ಸಮಸ್ಯೆ ಪರಿಹರಿಸಲು ನೆರವು ದೊರೆಯಲಿದೆ’ ಎಂದು ಸಚಿವರು ತಿಳಿಸಿದರು.

ಗೃಹ ಜ್ಯೋತಿ ಯೋಜನೆ ಕುರಿತು ವಿವರಿಸಿದ ಸಚಿವರು, ‘ಈ ಯೋಜನೆಗೆ ಆ.5ರಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅರ್ಹ ಗ್ರಾಹಕರಿಗೆ ಶೂನ್ಯ ಬಿಲ್‌ ನೀಡುವ ಕಾರ್ಯ ಮಂಗಳವಾರದಿಂದಲೇ ಆರಂಭವಾಗಿದೆ’ ಎಂದು ತಿಳಿಸಿದರು.

'ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಮೊದಲ ತಿಂಗಳಿನಲ್ಲೇ 1.42 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ಆಗಸ್ಟ್‌ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಲಿದ್ದಾರೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್‌ನಲ್ಲಿ ಬಳಕೆ ಆಧಾರದ ಮೇಲೆ ಸೆಪ್ಟೆಂಬರ್‌ ತಿಂಗಳ ಬಿಲ್‌ನಲ್ಲಿ ಪ್ರಯೋಜನ ಪಡೆಯಲಿದ್ದಾರೆ’ ಎಂದು ವಿವರಿಸಿದರು.

‘ರಾಜ್ಯದ ಸರಾಸರಿ ತಲಾ ವಿದ್ಯುತ್‌ ಬಳಕೆ 53 ಯೂನಿಟ್‌ಗಳು. ಸರಾಸರಿ ಬಳಸುವ ಯೂನಿಟ್‌ ವಿದ್ಯುತ್ 200 ಯೂನಿಟ್‌ಗಳಿಗಿಂತ ಕಡಿಮೆ ಇದ್ದರೆ, ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಸರಾಸರಿಗಿಂತ ಹೆಚ್ಚು ಯೂನಿಟ್ ಬಳಸಿದರೆ, ಹೆಚ್ಚುವರಿ ಯೂನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, 200ಕ್ಕೂ ಹೆಚ್ಚು ಯೂನಿಟ್ ಬಳಸಿದರೆ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಈ ಯೋಜನೆ ಅಡಿಯಲ್ಲಿ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ಘೋಷಿಸಿಲ್ಲ. ಯಾವುದೇ ಸಮಯದಲ್ಲಿ ನೋಂದಾಯಿಸಿಕೊಂಡರೂ ನಂತರದ ತಿಂಗಳಿನಿಂದ ಪ್ರಯೋಜನ ಪಡೆಯಬಹುದು’ ಎಂದು ವಿವರಿಸಿದರು.

ಜುಲೈ ಬಿಲ್‌ ಪಾವತಿಸಿದ್ದರೆ ವಾಪಸ್‌

‘ಜುಲೈ 1ರಿಂದ 15ರ ಅವಧಿಯಲ್ಲಿ ಬಿಲ್‌ ಪಾವತಿಸಿದ ಗ್ರಾಹಕರಿಗೆ ಮರುಪಾವತಿ ಮಾಡಲಾಗುವುದು. ಆದರೆ ಯಾವುದೇ ರೀತಿ ಬಾಕಿ ಇರಬಾರದು. ಬಾಕಿ ಉಳಿದಿದ್ದರೆ ಆ ಮೊತ್ತವನ್ನು ಹೊಂದಾಣಿಕೆ  ಮಾಡಿಕೊಳ್ಳಲಾಗುವುದು. ಜತೆಗೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿರಬೇಕು’ ಎಂದು ಸಚಿವ ಜಾರ್ಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT