ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಪ್ರಜ್ವಲ್ ರೇವಣ್ಣ 6 ದಿನ ಪೊಲೀಸ್ ಕಸ್ಟಡಿಗೆ

Published 31 ಮೇ 2024, 11:25 IST
Last Updated 1 ಜೂನ್ 2024, 0:03 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪಿ‌ಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹೆಚ್ಚಿನ ತನಿಖೆಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಈ ಕುರಿತಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ (ಪೊಲೀಸ್‌ ಬಂಧನ ವಿಸ್ತರಣಾ ಕೋರಿಕೆ) ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಎಸಿಎಂಎಂ) ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್ ಶುಕ್ರವಾರ ವಿಚಾರಣೆ ನಡೆಸಿ, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಅಷ್ಟರೊಳಗೆ ತನಿಖೆ ಪೂರ್ಣಗೊಂಡರೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ನಿರ್ದೇಶಿಸಿದರು.

ಎಸ್‌ಐಟಿ ಪರ ಹಾಜರಿದ್ದ ಅಶೋಕ್ ನಾಯಕ್‌ ಸುದೀರ್ಘ ವಾದ ಮಂಡಿಸಿ, ‘ಆರೋಪಿ ಪ್ರಜ್ವಲ್‌ ಒಬ್ಬ ವಿಕೃತ ಕಾಮಿ. ದುಷ್ಕೃತ್ಯದಿಂದ ನೂರಾರು ಹೆಣ್ಣು ಮಕ್ಕಳು ನೊಂದಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ದೇಶ ಬಿಟ್ಟು ಓಡಿ ಹೋಗಿದ್ದಾರೆ. ದೇಶಕ್ಕೆ ವಾಪಸು ಬರುತ್ತೇನೆ ಎಂದು ಟಿಕೆಟ್‌ ಬುಕ್‌ ಮಾಡಿಸಿದವರು ರದ್ದು ಮಾಡಿದ್ದಾರೆ. ಅಂತೆಯೇ ಈಗ ಬಂದಿರುವುದೂ ತನಿಖೆಗೆ ಸಹಕರಿಸುವ ಉದ್ದೇಶದಿಂದ ಅಲ್ಲ’ ಎಂದು ಆರೋಪಿಸಿದರು.

‘ಪ್ರಕರಣವೀಗ ಜಾಗತಿಕ ಮಟ್ಟದ ಗಮನ ಸೆಳೆದಿದೆ. ಸಂತ್ರಸ್ತರು ಮತ್ತು ಅವರ ಕುಟುಂಬದ ಹೆಣ್ಣು ಮಕ್ಕಳು ಕಂಗಾಲಾಗಿದ್ದಾರೆ. ಇವರ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಲೈಂಗಿಕ ದೃಶ್ಯಗಳ ಕುರಿತಂತೆ ಆಳವಾದ ವೈಜ್ಞಾನಿಕ ತನಿಖೆ ನಡೆಯಬೇಕಿದೆ. ಮೊಬೈಲ್‌ ಸಾಧನಗಳ ಪರೀಕ್ಷೆಯ ಜೊತೆಗೆ ಇತ್ಯಾದಿ ಸಾಕ್ಷ್ಯಗಳ ಒಟ್ಟುಗೂಡಿಸುವಿಕೆಯ ನಿಟ್ಟಿನಲ್ಲಿ ಆರೋಪಿಯನ್ನು 15 ದಿನಗಳ ಕಾಲ ಕಸ್ಟಡಿಗೆ ನೀಡಬೇಕು’ ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಪ್ರಜ್ವಲ್‌ ಪರ ವಕೀಲ ಜಿ.ಅರುಣ್‌, ’ಎಸ್‌ಐಟಿ ಆರೋಪದ ಕಥೆ ನಾಲ್ಕು ವರ್ಷಗಳ ಹಿಂದಿನದ್ದು. ದೂರು ದಾಖಲಾದ ನಂತರ ಸಿಆರ್‌ಪಿಸಿ 164ರ ಅನ್ವಯದ ಹೇಳಿಕೆಯ ಅನುಸಾರ ಅತ್ಯಾಚಾರದ ಆರೋಪ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಹುರುಳಿಲ್ಲ. ಆರೋಪಿಯನ್ನು ಪ್ರಾಸಿಕ್ಯೂಷನ್‌ ಒಂದು ದಿನದ ಮಟ್ಟಿಗೆ ಮಾತ್ರವೇ ವಶಕ್ಕೆ ಪಡೆಯಬಹುದು. 15 ದಿನ ಕಸ್ಟಡಿಗೆ ಕೇಳುವುದು ನ್ಯಾಯಯುತವಲ್ಲ’ ಎಂದರು. 

ಗುಪ್ತಾಂಗ ಪರೀಕ್ಷೆಯಲ್ಲಿ ಸತ್ಯ ಗೊತ್ತಾಗುತ್ತೆ...!

ಪ್ರಾಸಿಕ್ಯೂಟರ್‌ ಅಶೋಕ್‌ ನಾಯಕ್‌ ಅವರು, ‘ಪ್ರಜ್ವಲ್‌ ರೇವಣ್ಣ ಕಾಮ ಕೇಳಿಯನ್ನೆಲ್ಲಾ ತಮ್ಮದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಮೆರೆದಿದ್ದಾರೆ. ಅದರಲ್ಲಿ ತಮ್ಮ ಮುಖ ಕಾಣುವುದಿಲ್ಲ, ಹೀಗಾಗಿ ತಾನು ಬಚಾವ್‌ ಆಗಬಹುದು ಎಂದು ಅವರೇನೋ ಅಂದುಕೊಂಡಿರಬಹುದು. ಆದರೆ, ನಾಳೆ ಅವರ ಗುಪ್ತಾಂಗವನ್ನು ವೈದ್ಯಕೀಯ ಪರೀಕ್ಷೆ ನಡೆಸಿ; ವಿಡಿಯೊದಲ್ಲಿರುವ ದೃಶ್ಯಾವಳಿಗೆ ಹೋಲಿಕೆ ಮಾಡಿದರೆ ಸತ್ಯ ಪತ್ತೆಯಾಗುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಕೋರ್ಟ್‌ನಲ್ಲಿ ಗಮನ ಸೆಳೆದ ಕ್ಷಣಗಳು

  • ಮಧ್ಯಾಹ್ನ 1.30ರ ವೇಳೆಗೆ ಪ್ರಜ್ವಲ್‌ ಅವರನ್ನು ಸಿಟಿ ಸಿವಿಲ್‌ ಕೋರ್ಟ್‌ನ ಆರನೇ ಮಹಡಿಯಲ್ಲಿರುವ 42ನೇ ಎಸಿಎಂಎಂ ಕೋರ್ಟ್‌ ಹಾಲ್‌ಗೆ ಕರೆದುಕೊಂಡು ಬರಲಾಯಿತು. ನ್ಯಾಯಾಧೀಶರು ಮಧ್ಯಾಹ್ನ 2.50ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದರು.

  • ಬಂದ ಗಳಿಗೆಯಿಂದಲೂ 2.45ರವರೆಗೆ ಕೋರ್ಟ್ ಹಾಲ್‌ ಎದುರಿಗಿದ್ದ 53ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಪ್ರಾಸಿಕ್ಯೂಟರ್ ಸವಿತಾ ಡಿ.ರತನ್‌ ಅವರ ಕೊಠಡಿಯಲ್ಲಿ ಕೂರಿಸಲಾಗಿತ್ತು. ವಿಮಾನ ಪ್ರಯಾಣದಲ್ಲಿ ಧರಿಸಿದ್ದ ದಿರಿಸಿನಲ್ಲೇ ಇದ್ದರು.

  • 2.45ಕ್ಕೆ ಕೋರ್ಟ್‌ ಹಾಲ್‌ ಪ್ರವೇಶಿಸಿದ ಪ್ರಜ್ವಲ್‌ ಕನಿಷ್ಠ ಎರಡು ಗಂಟೆ ಕಾಲ ಕೋರ್ಟ್‌ ಡಾಕ್‌ನಲ್ಲಿ (ಆರೋಪಿ ಸ್ಥಾನ) ಕೈಕಟ್ಟಿಕೊಂಡೇ ನಿಂತಿದ್ದರು. ನ್ಯಾಯಾಧೀಶರು ನಿಮ್ಮ ಹೆಸರೇನು, ಬಂಧನ ಯಾವಾಗ ಆಯಿತು, ನಿಮಗೆ ಏನಾದರೂ ತೊಂದರೆ ಕೊಟ್ಟರೇ... ಹೇಗೆ ಎಂಬೆಲ್ಲಾ ಸಾಂಪ್ರದಾಯಿಕ ಕಾನೂನಾತ್ಮಕ ಪ್ರಶ್ನೆಗಳನ್ನು ಕೇಳಿದರು.

  • ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಮೇಲೆ ಪ್ರಜ್ವಲ್‌, ‘ಎಸ್‌ಐಟಿ ನನ್ನನ್ನು ಕೂರಿಸಿದ್ದ ರೂಮಿನಲ್ಲಿ ತುಂಬಾ ವಾಸನೆ ಬರುತ್ತದೆ’ ಎಂದರು!

  • ಈ ಮಾತಿಗೆ ಕಿಕ್ಕಿರಿದು ತುಂಬಿದ್ದ ಕೋರ್ಟ್‌ ಹಾಲ್‌ ಗೊಳ್ಳೆಂದು ಪ್ರತಿಕ್ರಿಯಿಸಿತು.

  • ಆಗಾಗ್ಗೆ ತಮ್ಮ ತೋರುಬೆರಳಿನಿಂದ ಕಣ್ಣು, ಮೂಗು ಉಜ್ಜಿಕೊಳ್ಳುತ್ತಲೇ ಎಡಬದಿಯಲ್ಲಿ ನಿಂತು ವಾದ ಮಂಡಿಸುತ್ತಿದ್ದ ಪ್ರಾಸಿಕ್ಯೂಟರ್‌ ಅಶೋಕ್‌ ನಾಯಕ್‌ ಅವರನ್ನು ಪ್ರಜ್ವಲ್‌ ತದೇಕಚಿತ್ತರಾಗಿ ನೋಡುತ್ತಿದ್ದರು.

  • ವಿಚಾರಣೆ ಮುಗಿದ ಆದೇಶ ಪ್ರಕಟಿಸಿದ ನಂತರ, ‘ಮೀಡಿಯಾದವರು ನನ್ನ ಬೆನ್ನು ಬಿದ್ದಿದ್ದಾರೆ. ಅವರು ಟ್ರಯಲ್‌ ನಡೆಸದಂತೆ ಆದೇಶಿಸಬೇಕು’ ಎಂದು ನ್ಯಾಯಾಧೀಶರನ್ನು ಕೋರಿದರು. ಇದಕ್ಕೆ ನ್ಯಾಯಾಧೀಶರು, ‘ಇಂತಹುದನ್ನೆಲ್ಲಾ ನಿಮ್ಮ ವಕೀಲರ ಬಳಿ ಹೇಳಿಕೊಂಡು ಕೋರ್ಟ್‌ ಪ್ರಕ್ರಿಯೆಗೆ ಅನುಗುಣವಾಗಿ ಪರಿಹಾರ ಪಡೆಯಿರಿ’ ಎಂದರು.

  • 4.50ಕ್ಕೆ ಪೊಲೀಸರು ಪ್ರಜ್ವಲ್‌ ಅವರನ್ನು ಕೋರ್ಟ್‌ನಿಂದ ಹೊರಗೆ ಕರೆತರುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಹುತೇಕರು ತಮ್ಮ ಮೊಬೈಲ್‌ಗಳಲ್ಲಿ ಆ ಕ್ಷಣವನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ವಿಶೇಷವಾಗಿ ಸ್ಥಳದಲ್ಲಿದ್ದ ಮಹಿಳೆಯರು, ತರುಣಿಯರು ಪ್ರಜ್ವಲ್‌ ಅವರನ್ನು ನೋಡಲು ಮುಗಿಬಿದ್ದಿದ್ದರು! 

  • ವಿಚಾರಣೆ ಮುಗಿದ ನಂತರ ಕೋರ್ಟ್‌ ಹಾಲ್‌ನಿಂದ ಪ್ರಜ್ವಲ್‌ಗೆ ಹೊರ ಹೋಗಲು ತಕ್ಷಣವೇ ಅವಕಾಶ ಸಿಗಲಿಲ್ಲ. ಸರಿಸುಮಾರು 500ಕ್ಕೂ ಹೆಚ್ಚು ವಕೀಲರು ತುಂಬಿದ್ದ ಕೋರ್ಟ್‌ ಹಾಲ್‌ನಲ್ಲಿ ದಿಗ್ಬಂಧನಕ್ಕೆ ಒಳಗಾಗಿದ್ದ ಪ್ರಜ್ವಲ್‌ 3.40ರಿಂದ 4.35ರವರೆಗೂ ಕೋರ್ಟ್‌ ಡಾಕ್‌ನಲ್ಲೇ ಕೈಕಟ್ಟಿ ನಿಲ್ಲಬೇಕಾಯಿತು.

  • ನ್ಯಾಯಾಧೀಶರು ಪ್ರಕಟಿಸಿದ ಆದೇಶ ಎಲ್ಲರಿಗೂ ಸರಿಯಾಗಿ ಕೇಳಿಸಲಿಲ್ಲ. ಇದಕ್ಕೆ ವಕೀಲ ವೃಂದ ಜೋರು ದನಿಯಲ್ಲಿ ‘ಇನ್ನೊಮ್ಮೆ ಗಟ್ಟಿಯಾಗಿ ಓದಿ’ ಎಂದು ಮನವಿ ಮಾಡಿದ ಪರಿಣಾಮ ನ್ಯಾಯಾಧೀಶರು ಮತ್ತೊಮ್ಮೆ ಆದೇಶವನ್ನು ಗಟ್ಟಿಯಾಗಿ ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT