ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ರೇವಣ್ಣ ಜಾಮೀನು ಅರ್ಜಿ; ವಾದ ಆಲಿಸಿ ನಾಳೆ ಆದೇಶ– ಕೋರ್ಟ್

Published 3 ಮೇ 2024, 11:43 IST
Last Updated 3 ಮೇ 2024, 11:43 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಕ್ರಿಮಿನಲ್ ಪ್ರಕರಣದಲ್ಲಿ; ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್ಐಆರ್‌ಗೆ ಸಂಬಂಧಿಸಿದಂತೆ ಶಾಸಕ‌ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಜಾಮೀನು ಮಂಜೂರಾತಿ ಕೋರಿಕೆಯನ್ನು ಶನಿವಾರ (ಮೇ 4) ಆಲಿಸಿ ಆದೇಶ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ.

ಈ ಕುರಿತಂತೆ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶುಕ್ರವಾರ ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ರೇವಣ್ಣ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಮೂರ್ತಿ ಡಿ.ನಾಯಕ್ ಅವರು, ‘ಎರಡನೇ ಎಫ್‌ಐಆರ್‌ನಲ್ಲಿ ಎಲ್ಲೂ ರೇವಣ್ಣನವರ ವಿರುದ್ಧ ನೇರ ಆರೋಪ ಇಲ್ಲ. ಎರಡನೇ ಆರೋಪಿ ಸತೀಶ್‌ ಬಾಬಣ್ಣನವರ ಮೇಲೆ ಮಾತ್ರವೇ ಇದೆ. ಮಹಿಳೆಯನ್ನು ಸತೀಶ್‌ ಬಾಬಣ್ಣ ಬಂದು ಕರೆದುಕೊಂಡು ಹೋದರು ಎಂದು ಮಾತ್ರವೇ ಹೇಳಲಾಗಿದೆಯೇ ಹೊರತು ರೇವಣ್ಣನವರು ಹೇಳಿದ್ದಕ್ಕೆ ಕರೆದುಕೊಂಡು ಹೋಗಿದ್ದು ಎಂದು ಎಲ್ಲೂ ತಿಳಿಸಿಲ್ಲ. ಅಂತೆಯೇ, ಎಫ್‌ಐಆರ್‌ನಲ್ಲಿ ಮಹಿಳೆಯ ಹೆಸರನ್ನೂ ಕಾಣಿಸಿಲ್ಲ. ರೇವಣ್ಣನವರ ವಿರುದ್ಧ ಕೇವಲ ಹೇಳಿದ ಕೇಳಿದ ಎಂಬಂತಹ ಆಧಾರರಹಿತ ಅಂಶವಿದೆ’ ಎಂದರು.

‘ಪ್ರಾಸಿಕ್ಯೂಷನ್‌ ಪರ ವಕೀಲರು ಇವತ್ತು ಬೆಳಗ್ಗೆಯಷ್ಟೇ; ನಾವು ರೇವಣ್ಣ ವಿರುದ್ಧ ಯಾವುದೇ ಗುರುತರ ಅಂದರೆ ಜಾಮೀನು ಪಡೆಯಬಹುದಾದಂತಹ ಕಲಂಗಳನ್ನು ಅನ್ವಯಿಸಿಲ್ಲ ಎಂದು ಹೇಳಿದ್ದ ಕಾರಣಕ್ಕೆ ನಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಾಪಸು ಪಡೆದಿದ್ದೇವೆ. ಆದರೆ, ಅವರು ಪುನಃ ಮತ್ತೊಂದು ನೋಟಿಸ್ ನೀಡಿದ್ದಾರೆ. ಈ ನಡೆಯನ್ನು ಗಮನಿಸಿದರೆ ಅರ್ಜಿದಾರರನ್ನು ಬಂಧಿಸಬಹುದೆಂಬ ಆತಂಕವಿದೆ. ಆದ್ದರಿಂದ, ತುರ್ತಾಗಿ ಮಧ್ಯಂತರ ಜಾಮೀನು ನೀಡಬೇಕು. ಅರ್ಜಿದಾರರು ಸಂಪೂರ್ಣವಾಗಿ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ’ ಎಂದು ಮನವಿ ಮಾಡಿದರು.

ಇದನ್ನು ಆಲಿಸಿದ ನ್ಯಾಯಾಧೀಶರು, ಪ್ರತಿವಾದಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಶನಿವಾರ ಬೆಳಿಗ್ಗೆಗೆ ಮುಂದೂಡಿದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪವನ್ ಸಾಗರ್ ವಕಾಲತ್ತು ವಹಿಸಿದ್ದಾರೆ.

ಅಪ್ಪ–ಅಮ್ಮಗೆ ತುಂಬಾ ವಯಸ್ಸಾಗಿದೆ...

‘ರೇವಣ್ಣನವರ ತಂದೆ ತಾಯಿಗೆ ತುಂಬಾ ವಯಸ್ಸಾಗಿದೆ. ಅವರ ಮೇಲೆ ನಿರಂತರ ವೈದ್ಯಕೀಯ ನಿಗಾ ವಹಿಸಬೇಕಿದೆ. ತಮ್ಮ ವಿರುದ್ಧ ಹೊರಿಸಲಾಗಿರುವ ಸುಳ್ಳು ದೂರಿನಿಂದ ರೇವಣ್ಣ ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಅಂತೆಯೇ ಅವರ ಕುಟುಂಬದ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ಅರ್ಜಿದಾರರ ವಯಸ್ಸನ್ನು ಗಮನದಲ್ಲಿ ಇರಿಸಿಕೊಂಡು ಮತ್ತು ಅವರ ವಿರುದ್ದ ಹೊರಿಸಲಾಗಿರುವ ಈ ಆರೋಪಗಳು ರಾಜಕೀಯಪ್ರೇರಿತ ಮತ್ತು ಅವರ ಘನತೆಯನ್ನು ಕುಂದಿಸುವ ಪ್ರಯತ್ನ ಎಂಬುದನ್ನು ಪರಿಗಣಿಸಿ ಜಾಮೀನು ನೀಡಬೇಕು’ ಎಂದು ರೇವಣ್ಣ ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಯಲ್ಲಿ ವಿವರಿಸಲಾಗಿದೆ.

ಇದೂ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಪ್ರಕರಣವೇ ಆಗಿರುವುದರಿಂದ ನಾಳೆ (ಮೇ 4) ಬೆಳಿಗ್ಗೆ ಮುಖ್ಯ ಪ್ರಕರಣದ ಮೇಲೆಯೇ ಸಂಪೂರ್ಣ ವಾದ ಆಲಿಸಿ ಅಂತಿಮ ಆದೇಶ ಪ್ರಕಟಿಸುತ್ತೇನೆ.
–ಸಂತೋಷ್ ಗಜಾನನ ಭಟ್‌, ನ್ಯಾಯಾಧೀಶರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT