ಧಾರವಾಡ: ‘ರಾಜ್ಯ ಕಾಂಗ್ರೆಸ್ ಸರ್ಕಾರವು ಜಿಂದಾಲ್ ಕಂಪನಿಗೆ ಜಮೀನು ನೀಡುವುದಕ್ಕೆ ಅನುಮೋದನೆ ನೀಡಿರುವುದಷ್ಟೇ ಅಲ್ಲ, ಬೆಂಗಳೂರಿನಲ್ಲಿ ₹15 ಸಾವಿರ ಕೋಟಿ ಮೊತ್ತದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಬಾ ಆತುರದಲ್ಲಿ ಇದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ತೀರ್ಮಾನಿಸಿದೆ ಎಂಬ ಮಾಹಿತಿ ಇದೆ. ಹೀಗಾಗಿ, ತರಾತುರಿಯಲ್ಲಿ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ಧಾರೆ’ ಎಂದರು.
‘ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸುವ ದುರುದ್ದೇಶ, ಹಪಾಹಪಿ ಕಾಂಗ್ರೆಸ್ ಮುಖಂಡರಿಗೆ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ, ಹಾಗೂ ಮುಡಾದಲ್ಲಿ ಸುಮಾರು ₹5 ಸಾವಿರ ಕೋಟಿಯ ಹಗರಣ ನಡೆದಿದೆ. ಬಿಜೆಪಿ ಹೋರಾಟದ ಫಲವಾಗಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ, ಸಿದ್ದರಾಮಯ್ಯ ಅವರೂ ಇಂದಲ್ಲ, ನಾಳೆ ನೀಡುತ್ತಾರೆ’ ಎಂದರು.