ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮಾನ್ಯ ಪದವಿಯಲ್ಲೂ ಕೌಶಲ ಕೋರ್ಸ್‌ ಆರಂಭ

ಕೊನೆಯ ಒಂದು ವರ್ಷ ಪ್ರತಿ ತಿಂಗಳು ₹10–17 ಸಾವಿರ ಶಿಷ್ಯ ವೇತನ
Published 13 ಆಗಸ್ಟ್ 2024, 15:53 IST
Last Updated 13 ಆಗಸ್ಟ್ 2024, 15:53 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯ ಪದವಿ ಪಡೆಯುವ ವಿದ್ಯಾರ್ಥಿಗಳಲ್ಲಿ ಉದ್ಯೋಗ ಆಧಾರಿತ ಕೌಶಲ ಹೆಚ್ಚಿಸಲು ವಿನೂತನವಾಗಿ ರೂಪಿಸಿದ ಶಿಷ್ಯವೇತನ ಒಳಗೊಂಡ ಕೋರ್ಸ್‌ಗಳನ್ನು 2024–25ನೇ ಶೈಕ್ಷಣಿಕ ಸಾಲಿನಿಂದ 45 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಹತ್ತು ಮಂದಿ ನಿವೃತ್ತ ಐಎಎಸ್‌ ಅಧಿಕಾರಿಗಳು ಸ್ಥಾಪಿಸಿರುವ ‘ಕ್ರಿಸ್ಪ್‌’ (ಸೆಂಟರ್‌ ಫಾರ್ ರೀಸರ್ಚ್‌ ಇನ್ ಸ್ಕೀಮ್ಸ್‌ ಆ್ಯಂಡ್‌ ಪಾಲಿಸೀಸ್‌) ಜೊತೆ ಉನ್ನತ ಶಿಕ್ಷಣದಲ್ಲಿ ಕೌಶಲಾಧಾರಿತ ಕೋರ್ಸ್‌ಗಳನ್ನು ಪರಿಚಯಿಸುವ ಒಪ್ಪಂದಕ್ಕೆ ಮಂಗಳವಾರ ಆಯಾ ಕಾಲೇಜುಗಳ ಮುಖ್ಯಸ್ಥರು ಸಹಿ ಹಾಕಿದ ನಂತರ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಮೊದಲ ಹಂತದಲ್ಲಿ 45 ಕಾಲೇಜುಗಳಲ್ಲಿ ಕೋರ್ಸ್‌ ಪರಿಚಯಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ಕೊನೆಯ ಒಂದು ವರ್ಷ ಸಂಬಂಧಿಸಿದ ಕಂಪನಿಗಳಿಗೆ ತೆರಳಿ ಪ್ರಾಯೋಗಿಕ ಅನುಭವ ಪಡೆಯುತ್ತಾರೆ. ಪ್ರತಿ ತಿಂಗಳು ಅವರಿಗೆ ₹10 ಸಾವಿರದಿಂದ ₹17 ಸಾವಿರ ಶಿಷ್ಯವೇತನ ಸಿಗಲಿದೆ. ಈಗಾಗಲೇ 1,373 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೂರು ವರ್ಷಗಳಲ್ಲಿ 239 ಕಾಲೇಜುಗಳಿಗೆ ಯೋಜನೆ ವಿಸ್ತರಿಸಲಾಗುತ್ತಿದ್ದು, 2026–27ರ ವೇಳೆಗೆ 14,340 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಬಿ.ಎಸ್‌ಸಿ, ಬಿ.ಕಾಂ, ಬಿ.ಬಿ.ಎಂ, ಬಿ.ಸಿ.ಎ ವಿದ್ಯಾರ್ಥಿಗಳಿಗೆ ಇ–ಕಾಮರ್ಸ್, ಆಹಾರ ಸರಪಳಿ ನಿರ್ವಹಣೆ, ಸರಕು ಸಾಗಣೆ ಉದ್ಯಮ, ರೀಟೇಲ್‌, ಹೆಲ್ತ್‌ಕೇರ್, ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ, ಜೀವನ ವಿಜ್ಞಾನ, ಔಷಧ ಮಾರುಕಟ್ಟೆ ಮತ್ತು ಮಾರಾಟ, ಔಷಧ ಉತ್ಪಾದನೆ ಮತ್ತು ಗುಣಮಟ್ಟ, ಡಿಜಿಟಲ್‌ ಮಾರುಕಟ್ಟೆ, ಸಿನಿಮಾ ನಿರ್ಮಾಣ, ಜಾಹೀರಾತು, ಮಾಧ್ಯಮ ಮತ್ತು ಮನರಂಜನೆ, ಫ್ಯಾಷನ್‌ ಡಿಸೈನ್‌, ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ಜೀವವಿಮೆ, ಎಲೆಕ್ಟ್ರಾನಿಕ್ಸ್‌, ದತ್ತಾಂಶ ವಿಶ್ಲೇಷಣೆ, ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಮುಂದಿನ ಹಂತದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಕೌಶಲ ದೊರಕಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT