ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಒಂದು ಅವಕಾಶ ಕೊಡಿ: ವಿ.ಸೋಮಣ್ಣ

Published 23 ಜೂನ್ 2023, 15:30 IST
Last Updated 23 ಜೂನ್ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನನಗೂ ಒಂದು ಅವಕಾಶ ಕೊಡಿ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯಾರನ್ನು ನೇಮಿಸುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಸೋಮಣ್ಣ ಅವರು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ ತಮ್ಮ ಆಕಾಂಕ್ಷೆ ತೋಡಿಕೊಂಡರು.

‘ಅಧ್ಯಕ್ಷ ಸ್ಥಾನಕ್ಕೆ ಗಾಂಭೀರ್ಯ ತರುವುದರ ಜತೆಗೆ ನನಗೆ ನೀಡುವ ಕೆಲಸವನ್ನು ಸವಾಲಾಗಿ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇನೆ. ದೊಡ್ಡ ರಾಜಕಾರಣಿಗಳ ಗರಡಿಯಲ್ಲಿ ಪಳಗಿರುವ ನನಗೆ 100 ದಿನ ಕೊಟ್ಟು ನೋಡಲಿ. ಸುಳ್ಳು ಹೇಳಲ್ಲ, ಹೇಡಿಯೂ ಅಲ್ಲ. ಕೊಟ್ಟ ಕೆಲಸವನ್ನು ಪ್ರಾಣದ ಹಂಗು ತೊರೆದು ಸಾಧಿಸಿ ತೋರಿಸಿದ್ದೇನೆ’ ಎಂದರು.

‘ಈ ವಿಚಾರವಾಗಿ ಕೇಂದ್ರದ ನಾಯಕರಿಗೆ ಪತ್ರ ಬರೆದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟು ಇತರ ಎಲ್ಲ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ರಾಜಕೀಯದಲ್ಲಿ 45 ವರ್ಷಗಳ ಅನುಭವ ಇದೆ. ಪಕ್ಷದಲ್ಲಿ ಶಿಸ್ತು ಮೂಡಿಸುತ್ತೇನೆ. ಅಜಾಗ್ರತೆ ಆಗಿರುವುದನ್ನು ಜಾಗ್ರತೆ ಮಾಡುತ್ತೇನೆ’ ಎಂದರು.

‘ಆರ್‌. ಅಶೋಕ ಕಾರ್ಯ ವೈಖರಿ ಬೇರೆ, ನನ್ನ ಕಾರ್ಯವೈಖರಿ ಬೇರೆ. ನಾನು ತೆಗೆದುಕೊಂಡಂತ ರಿಸ್ಕ್‌ ಯಾರೂ ತೆಗೆದುಕೊಂಡಿಲ್ಲ ಬಿಡಿ. ಯಾರು ಎಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಪಕ್ಷ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಲು ಸಿದ್ಧನಿದ್ದೇನೆ. ನನ್ನಷ್ಟು ಅರ್ಹ ಬೇರೆ ಯಾರೂ ಇಲ್ಲ. ಬಕೆಟ್‌ ಹಿಡಿದು ಗೊತ್ತಿಲ್ಲ. ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಒಂದು ವೇಳೆ ನಾನು ಅಧ್ಯಕ್ಷನಾದರೆ ನನ್ನ ಮಾತು ಎಲ್ಲರೂ ಕೇಳಬೇಕು. ಬೇರೆಯವರು ಇದ್ದಾಗ ಕೇಳಲಿಲ್ಲವೇ? ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರು. ಅವರ ಬಳಿಯೂ ಹೋಗುತ್ತೇನೆ. ಸಹಕಾರ ಕೇಳುತ್ತೇನೆ’ ಎಂದು ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT