ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಹಾಲಪ್ಪಗೆ ಕೋರ್ಟ್ ತರಾಟೆ

ಉಮಾಶ್ರೀ ವಿರುದ್ಧ ಮಾನನಷ್ಟ ಮೊಕದ್ದಮೆ
Last Updated 27 ಏಪ್ರಿಲ್ 2019, 18:54 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಪ್ರತಿನಿಧಿಗಳಾದ ನೀವೇ ಕೋರ್ಟ್‌ಗೆ ಗೌರವ ತೋರಿಸಲಿಲ್ಲ ಎಂದ ಮೇಲೆ ಜನರು ತಾನೇ ಹೇಗೆ ಗೌರವ ತೋರಿಸುತ್ತಾರೆ’ ಎಂದು ಜನಪ್ರತಿನಿಧಿಗಳ ಕೋರ್ಟ್ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳ ಹಾಲಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿತು.

2014ರಲ್ಲಿ ತುಮಕೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಉಮಾಶ್ರೀ ಅವರು ಮಾತನಾಡುತ್ತಾ, ‘ಹಾಲಪ್ಪ ಅತ್ಯಾಚಾರಿ ಎಂದು ಟೀಕಿಸಿದ್ದಾರೆ’ ಎಂದು ಆರೋಪಿಸಿ ಅವರ ವಿರುದ್ಧ ಹಾಲಪ್ಪ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಇಲ್ಲಿನ ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ಶನಿವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಹಾಲಪ್ಪ ಪರ ವಕೀಲ ರಮೇಶ್ಚಂದ್ರ ಅವರನ್ನು ‘ದೂರುದಾರರು ಐದು ವರ್ಷಗಳಾದರೂ ಏಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ರಮೇಶ್ಚಂದ್ರ ಅವರು, ‘ಆರೋಪಿಗಳು ತನಿಖೆಯನ್ನು ಪ್ರಶ್ನಿಸಿ ವಿಚಾರಣೆಗೆ ಹೈಕೋರ್ಟ್‌ನಿಂದ ತಡೆ ಆದೇಶ ಪಡೆದಿದ್ದರು’ ಎಂದು ವಿವರಿಸಿದರು‌.

ಇದಕ್ಕೆ ಹುದ್ದಾರ ಅವರು, ‘ವ್ಯಾಜ್ಯಕ್ಕೆ ತಡೆ ಇದ್ದರೆ ದೂರುದಾರರಾದ ನೀವೇಕೆ ಹಾಜರಾಗಿರಲಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಉಮಾಶ್ರೀ ಪರ ಹಾಜರಿದ್ದ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ಸಾಕ್ಷಿ ವಿಚಾರಣೆಗೆ ನಾವು ತಯಾರಿದ್ದೇವೆ’ ಎಂದರು.

ಇದಕ್ಕೆ ರಮೇಶ್ಚಂದ್ರ ಅವರು, ‘ಇವತ್ತು ಬೇಡ. ಸಮಯಾವಕಾಶ ಬೇಕು’ ಎಂದು ನ್ಯಾಯಾಧೀಶರನ್ನು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ವಿಚಾರಣೆಯನ್ನು ಜೂನ್‌ 1ಕ್ಕೆ ಮುಂದೂಡಿದರು.

ಆರೋಪಿಯೂ ಆದ ಕಾಂಗ್ರೆಸ್ ಮುಖಂಡರಾದ ಉಮಾಶ್ರೀ ವಿಚಾರಣೆಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT