ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪರೀಕ್ಷೆ | ವಿದ್ಯಾರ್ಥಿಗಳಿಗೇ ಆಯ್ಕೆಯ ಅವಕಾಶ: ಸಚಿವ ಮಧು ಬಂಗಾರಪ್ಪ

ಮಾರ್ಚ್‌ 1ರಿಂದ ದ್ವಿತೀಯ ಪಿಯು, 25ರಿಂದ ಮೊದಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭ
Published 20 ಫೆಬ್ರುವರಿ 2024, 15:56 IST
Last Updated 21 ಫೆಬ್ರುವರಿ 2024, 5:51 IST
ಅಕ್ಷರ ಗಾತ್ರ

ಬೆಂಗಳೂರು: 6.98 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಹಾಗೂ 8.96 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. 

ಮಾರ್ಚ್‌ 1ರಿಂದ ದ್ವಿತೀಯ ಪಿಯು, 25ರಿಂದ ಮೊದಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿ ಮೂರು ಪರೀಕ್ಷಾ ಪದ್ಧತಿಯನ್ನು ಪರಿಚಯಿಸಲಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಜತೆಗೆ, ಫಲಿತಾಂಶ ತೃಪ್ತಿಕರವಾಗಿಲ್ಲದ ವಿದ್ಯಾರ್ಥಿಗಳೂ ಉಳಿದ ಎರಡು ಪರೀಕ್ಷೆಗಳಿಗೆ ಹಾಜರಾಗಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಪರೀಕ್ಷೆ ಬರೆಯಲು ಸಾಧ್ಯವಾಗದವರು ಎರಡನೇ ಅಥವಾ ಮೂರನೇ ಪರೀಕ್ಷೆ ಬರೆಯಬಹುದು. ಮೊದಲ ಪರೀಕ್ಷೆಯ ಸಮಯದಲ್ಲೇ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶವಿದೆ. ಮೂರು ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕಗಳು ಬಂದಿರುತ್ತವೆಯೋ, ಅದೇ ಅಂಕಪಟ್ಟಿ ಪಡೆಯಬಹುದು. ಆಯಾ ಪರೀಕ್ಷೆಗಳು ಮುಕ್ತಾಯವಾದ ತಕ್ಷಣ ಅಂಕಪಟ್ಟಿ ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳು ಮೂರರಲ್ಲಿ ತಮಗೆ ಇಷ್ಟವಾದ ಅತ್ಯುತ್ತಮ ಅಂಕಪಟ್ಟಿ ಉಳಿಸಿಕೊಳ್ಳಬಹುದು ಎಂದು ಹೇಳಿದರು.

ಇದೇ ಮೊದಲ ಬಾರಿ ಖಾಸಗಿ ಅಭ್ಯರ್ಥಿಗಳಿಗೂ ಇತರೆ ವಿದ್ಯಾರ್ಥಿಗಳಿಗೆ ಪೂರೈಸುವ ಪ್ರಶ್ನೆಪತ್ರಿಕೆಗಳನ್ನೇ ನೀಡಲಾಗುವುದು. ಪ್ರತಿ ಪ್ರಶ್ನೆ ಪತ್ರಿಕೆಯೂ 80 ಅಂಕಗಳನ್ನು ಒಳಗೊಂಡಿರುತ್ತದೆ. ಉಳಿದ 20 ಅಂಕಗಳನ್ನು ಶಾಲಾ, ಕಾಲೇಜು ಹಂತದಲ್ಲೇ ಆಂತರಿಕ ಹಾಗೂ ಪ್ರಯೋಗ ಪರೀಕ್ಷೆಯ ಮೂಲಕ ನೀಡಲಾಗಿರುತ್ತದೆ. ಎರಡನ್ನೂ ಸೇರಿಸಿ ಅಂಕಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದರು.

ಪಿಯು ಬಾಲಕಿಯರು, ಎಸ್‌ಎಸ್‌ಎಲ್‌ಸಿ ಬಾಲಕರೇ ಹೆಚ್ಚು: 

ದ್ವಿತೀಯ ಪಿಯು ಪರೀಕ್ಷೆಗೆ ಹೆಸರು ನೋಂದಾಯಿಸಿದವರಲ್ಲಿ 3.67 ಲಕ್ಷ ವಿದ್ಯಾರ್ಥಿನಿಯರು, 3.30 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ 4.58 ಲಕ್ಷ ವಿದ್ಯಾರ್ಥಿಗಳು, 4.37 ಲಕ್ಷ ವಿದ್ಯಾರ್ಥಿನಿಯರು ಇದ್ದಾರೆ. 

ಏಪ್ರಿಲ್‌, ಮೇ ಗೆ ಉಳಿದ ಪರೀಕ್ಷೆಗಳು:

ಉಳಿದ ಎರಡು ಪರೀಕ್ಷೆಗಳನ್ನು ಏಪ್ರಿಲ್‌ ಹಾಗೂ ಮೇನಲ್ಲಿ ನಡೆಸಲಾಗುವುದು. ಪ್ರತಿ ಪರೀಕ್ಷೆಯು ಪೂರ್ಣಗೊಂಡ 15ರಿಂದ 20 ದಿನಗಳ ಒಳಗೆ ಫಲಿತಾಂಶ ನೀಡಿ, ಅಂಕಪಟ್ಟಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

558 ಪರೀಕ್ಷಾ ಕೇಂದ್ರಗಳು ರದ್ದು
ನಕಲು ತಡೆಯುವ ಉದ್ದೇಶದಿಂದ 558 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ರದ್ದು ಮಾಡಲಾಗಿದೆ.  2022–23ನೇ ಸಾಕಿನ ಪರೀಕ್ಷೆಯಲ್ಲಿ 3305 ಕೇಂದ್ರಗಳಿದ್ದವು. ಈ ಬಾರಿ 2747 ಕೇಂದ್ರಗಳಿವೆ.  ಪರೀಕ್ಷೆಗೆ ಹಾಜರಾಗುವ ಮಕ್ಕಳು ತಮ್ಮ ಗ್ರಾಮದಿಂದ 10 ಕಿ.ಮೀ ಮೀರದಂತಹ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಹೊಸ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಮಕ್ಕಳಿಗೆ ಬಸ್‌ ಮತ್ತಿತರ ಸೌಕರ್ಯಗಳು ಇಲ್ಲದಿದ್ದರೆ ಮಕ್ಕಳನ್ನು ನಿಗದಿತ ಕೇಂದ್ರಗಳಿಗೆ ಸುರಕ್ಷಿತವಾಗಿ ಸಮಯಕ್ಕೆ ಸರಿಯಾಗಿ ಕರೆತರುವ ಹೊಣೆಗಾರಿಕೆಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ.  ಪಿಯು ಪರೀಕ್ಷಾ ಕೇಂದ್ರಗಳಲ್ಲಿ 15 ಹೆಚ್ಚಳವಾಗಿವೆ. ಕಳೆದ ವರ್ಷ 1109 ಕೇಂದ್ರಗಳು ಇದ್ದವು ಈ ಬಾರಿ 1124 ಇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT