ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ಧಾಟಿ ಬದಲಾವಣೆ: ಮನವಿ ಪುರಸ್ಕರಿಸಬಾರದೆಂದು ಹೈಕೋರ್ಟ್‌ಗೆ ಸರ್ಕಾರ ಮನವಿ

Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಗೀತೆಯನ್ನು ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂದು ಸರ್ಕಾರದ ಆದೇಶ ಇರುವಾಗ ಮತ್ತೊಂದು ಧಾಟಿಯಲ್ಲಿ ಹಾಡಲು ನಿರ್ದೇಶಿಸಬೇಕು ಎಂಬಂತಹ ಮನವಿಗಳನ್ನು ಪುರಸ್ಕರಿಸಬಾರದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.

‘ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು’ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎಸ್‌.ಎ.
ಅಹಮದ್‌, ‘ಕೋರ್ಟ್‌ ಇಂತಹ ಮನವಿಗಳನ್ನೆಲ್ಲಾ ಮಾನ್ಯ ಮಾಡುತ್ತಾ ಹೋದರೆ ಮುಂದೆ ಮತ್ತೊಬ್ಬರು ಮತ್ತೊಂದು ಧಾಟಿಯಲ್ಲಿ ಹಾಡುವುದಕ್ಕೆ ನಿರ್ದೇಶಿಸಿಬೇಕು ಎಂದು ಕೋರಿ ಕೋರ್ಟ್‌ ಮೆಟ್ಟಿಲೇರುತ್ತಾರೆ. ಆಗ ಅದು ಅನಪೇಕ್ಷಿತ ಬೆಳವಣಿಗೆಗಳಿಗೆ ನಾಂದಿ ಹಾಡುತ್ತದೆ’ ಎಂದರು.

‘ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂಬುದನ್ನು ಸರ್ಕಾರ ಕಣ್ಣುಮುಚ್ಚಿ ಕಡ್ಡಾಯಗೊಳಿಸಿಲ್ಲ. ಇದಕ್ಕಾಗಿಯೇ ಇದ್ದ ಸಮಿತಿ ಈ ಆಖೈರು ತೀರ್ಮಾನ ಕೈಗೊಂಡಿದೆ. ಇದು ಯಾರ ಮೂಲಭೂತ ಹಕ್ಕನ್ನೂ ಕಸಿಯುವ ಪ್ರಯತ್ನವಲ್ಲ. ನಾಡಗೀತೆಯ ಗೌರವ ಕಾಪಾಡುವ ದೃಷ್ಟಿಯಿಂದ ಏಕರೂಪದ ಅನುಶಾಸನಕ್ಕೆ ಒಳಪಡಿಸಲಾಗಿದೆ. ಇಂತಹ ವಿಷಯಗಳಲ್ಲಿ ಶಾಸನಾತ್ಮಕ ಅಧಿಕಾರದ ಅಗತ್ಯವಿಲ್ಲ’ ಎಂದು
ಪ್ರತಿಪಾದಿಸಿದರು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಸರ್ಕಾರದ ಈ ಆದೇಶ ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ಧಕ್ಕೆ ಉಂಟು ಮಾಡುತ್ತದೆ. ಇಂತಹುದೇ ಧಾಟಿಯಲ್ಲಿ ಹಾಡಬೇಕು ಎನ್ನುವುದು ಒಪ್ಪುವಂತಹ ವಿಚಾರವಲ್ಲ. ಈ ಹಿಂದೆ ಸಿ.ಅಶ್ವತ್ಥ್ ಅವರ ರಾಗ ಸಂಯೋಜನೆ ಮುಂದುವರಿಸುವ ಬಗ್ಗೆ ಸ್ವತಃ ಮೈಸೂರು ಅನಂತಸ್ವಾಮಿಯವರೇ ಒಪ್ಪಿಕೊಂಡಿದ್ದರು’ ಎಂದು ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌, ‘ಜಯಭಾರತ ಜನನಿಯ ತನುಜಾತೆ...ಗೀತೆಯು ಅರ್ಥಪೂರ್ಣ ಮತ್ತು ಸುಂದರವಾದ ಪದ್ಯ. ಇದರ ಬಗ್ಗೆ ಹೆಚ್ಚು ಬಡಿದಾಡಿಕೊಳ್ಳಬೇಡಿ. ಬೇಕಿದ್ದರೆ ಉಭಯ ಪಕ್ಷಗಾರರೂ ಒಂದೆಡೆ ಕಲೆತು ಗೌರವಯುತವಾದ ಒಮ್ಮತದ ನಿರ್ಧಾರಕ್ಕೆ ಬನ್ನಿ’ ಎಂದು ಸಲಹೆ ನೀಡಿ ವಿಚಾರಣೆ ಮುಂದೂಡಿದರು

‘ಆದೇಶಕ್ಕೆ ಸ್ಪಷ್ಟನೆ ನೀಡಿ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ತಿದ್ದುಪಡಿ ಅಧಿಸೂಚನೆಯನ್ನು ಪರಿಶೀಲಿಸಿದ ನ್ಯಾಯಪೀಠ, ಆದೇಶದಲ್ಲಿನ ‘ಎಲ್ಲಾ ಶಾಲೆಗಳಲ್ಲಿ’ ಎಂಬ ಪದದ ಅರ್ಥವನ್ನು ಸ್ಪಷ್ಟಪಡಿಸಿ ಮತ್ತು ಖಾಸಗಿ ಶಾಲೆಗಳೂ ಈ ಆದೇಶದ ವ್ಯಾಪ್ತಿಗೆ ಒಳಪಡುತ್ತವೆಯೇ ಹೇಗೆ ಎಂಬುದನ್ನು ವಿಶದಪಡಿಸಿ ಎಂದು ಸರ್ಕಾರಕ್ಕೆ ಸೂಚಿಸಿತು.

ಇ.ಡಿ ಅಧಿಕಾರಿಗಳ ವಿರುದ್ಧ ತನಿಖೆಗೆ ತಡೆ

ಬೆಂಗಳೂರು: ‘ವಿಚಾರಣೆ ವೇಳೆ ಹೊಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಇಡಿ ಉಪ ನಿರ್ದೇಶಕ ಮನೋಜ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಅಜಯ್ ಕುಮಾರ್‌ ವೈದ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್.ವಿ.ರಾಜು, ‘ವಿಚಾರಣೆ ವೇಳೆ ಇ.ಡಿ ಅಧಿಕಾರಿಗಳು ಪ್ಲಾಸ್ಟಿಕ್ ಪೈಪ್‌ನಲ್ಲಿ ಹೊಡೆದಿದ್ದಾರೆ ಎಂದು ದೂರಲಾಗಿದೆ. ವಾಸ್ತವದಲ್ಲಿ ಇದೊಂದು ಸುಳ್ಳು ದೂರು. ದೂರುದಾರರು ಆರೋಪವನ್ನು ಪುಷ್ಟೀಕರಿಸುವ ಯಾವುದೇ ದಾಖಲೆಯನ್ನೂ ಒದಗಿಸಿಲ್ಲ. ಆದ್ದರಿಂದ, ತನಿಖೆಗೆ ತಡೆ ನೀಡಬೇಕು’ ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ ದೂರುದಾರರೂ ಆದ ಕೊಮುಲ್‌ ನಿರ್ದೇಶಕ ವೈ.ಬಿ.ಅಶ್ವತ್ಥ ನಾರಾಯಣ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನನ್ನ ವಿಚಾರಣೆ ನಡೆಸುವ ವೇಳೆ ಇ.ಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಮತ್ತು ಅಜಯ್ ಕುಮಾರ್ ವೈದ್ಯ ಲಾಠಿ ಹಾಗೂ ಪ್ಲಾಸಿಕ್ ಪೈಪ್‌ನಿಂದ ನನಗೆ ಹೊಡೆದಿದ್ದಾರೆ’ ಎಂದು ವೈ.ಬಿ.ಅಶ್ವತ್ಥ ನಾರಾಯಣ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT