ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐ, ಪಿಎನ್‌ಬಿ ಮನವಿ: ಖಾತೆ ಸ್ಥಗಿತಕ್ಕೆ ತಡೆ

Published 17 ಆಗಸ್ಟ್ 2024, 0:20 IST
Last Updated 17 ಆಗಸ್ಟ್ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಬಿಐ ಮತ್ತು ಪಿಎನ್‌ಬಿ ಬ್ಯಾಂಕ್‌ಗಳಲ್ಲಿನ ಖಾತೆಗಳನ್ನು ಮುಚ್ಚಿ, ಠೇವಣಿ ವಾಪಸ್‌ ಪಡೆಯಿರಿ ಎಂದು ಎಲ್ಲಾ ಇಲಾಖೆಗಳಿಗೆ ನೀಡಿದ್ದ ಸೂಚನೆಯನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತಡೆ ಹಿಡಿದಿದೆ.

ನಿಶ್ಚಿತ ಠೇವಣಿಗಳಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಲು 15 ದಿನಗಳ ಕಾಲಾವಕಾಶ ಕೊಡಿ ಎಂದು ಎರಡೂ ಬ್ಯಾಂಕ್‌ಗಳು ರಾಜ್ಯ ಸರ್ಕಾರವನ್ನು ಮನವಿ ಮಾಡಿರುವ ಕಾರಣ, ಆರ್ಥಿಕ ಇಲಾಖೆಯು ಸೂಚನೆಯನ್ನು 15 ದಿನಗಳವರೆಗೆ ತಡೆಹಿಡಿದಿದೆ.

‘ಎಸ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿನೋದ್ ಜೈಸ್ವಾಲ್‌ ಮತ್ತು ಪಿಎನ್‌ಬಿಯ ವಿಭಾಗೀಯ ವ್ಯವಸ್ಥಾಪಕ ದೀಪಕ್‌ ಕುಮಾರ್ ಅವರು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್ ಅವರನ್ನು ಶುಕ್ರವಾರ ಭೇಟಿ ಮಾಡಿದ್ದಾರೆ. ನಿಶ್ಚಿತ ಠೇವಣಿಗಳ ಮರುಪಾವತಿ ವಿಷಯವನ್ನು ಶೀಘ್ರವೇ ಇತ್ಯರ್ಥಪಡಿಸುವುದಾಗಿ ಹೇಳಿದ್ದಾರೆ’ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.

‘ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 2011ರಲ್ಲಿ ಮಾಡಿದ್ದ ನಿಶ್ಚಿತ ಠೇವಣಿಯನ್ನು ಪಿಎನ್‌ಬಿ ವಾಪಸ್‌ ಮಾಡಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2013ರಲ್ಲಿ ಮಾಡಿದ್ದ ನಿಶ್ಚಿತ ಠೇವಣಿಯ ಪೂರ್ಣ ಮೊತ್ತವನ್ನು ಎಸ್‌ಬಿಐ ಹಿಂತಿರುಗಿಸಿಲ್ಲ. ವಂಚನೆಯ ನೆಪ ಒಡ್ಡಿ ಎರಡೂ ಬ್ಯಾಂಕ್‌ಗಳು ಠೇವಣಿ ನೀಡುತ್ತಿಲ್ಲ. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಶಿಫಾರಸಿನಂತೆ ಈ ಬ್ಯಾಂಕ್‌ಗಳ ಜತೆಗೆ ವ್ಯವಹಾರ ನಿಲ್ಲಿಸಲು ಸೂಚಿಸಲಾಗುತ್ತಿದೆ’ ಎಂದು ಆರ್ಥಿಕ ಇಲಾಖೆ ಇದೇ 12ರಂದು ಆದೇಶಿಸಿತ್ತು.

ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಎರಡೂ ಬ್ಯಾಂಕ್‌ಗಳು, ‘ರಾಜ್ಯ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ದರಿದ್ದೇವೆ’ ಎಂದು ಗುರುವಾರ ಹೇಳಿಕೆ ನೀಡಿದ್ದವು. ಈಗ ಅಧಿಕೃತವಾಗಿ ಮನವಿ ಸಲ್ಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT