ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಬ್ರಹ್ಮಣ್ಯ: ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಸಾವು

Published : 1 ಆಗಸ್ಟ್ 2022, 18:20 IST
ಫಾಲೋ ಮಾಡಿ
Comments

ಸುಬ್ರಹ್ಮಣ್ಯ: ಸೋಮವಾರ ಸುರಿದ ಧಾರಾಕಾರ ಮಳೆಗೆ ಕುಮಾರಧಾರ ಸ್ನಾನ ಘಟ್ಟ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಬಾಲಕಿಯರ ಮೃತದೇಹವನ್ನು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಾತ್ರಿ ಮಣ್ಣಿನಿಂದ ಹೊರತೆಗೆಯಲಾಯಿತು.

ಮೃತ ಬಾಲಕಿಯರನ್ನುಶ್ರುತಿ (11) ಹಾಗೂ ಜ್ಞಾನಶ್ರೀ (6) ಎಂದು ಗುರುತಿಸಲಾಗಿದೆ. ಬಾಲಕಿಯರು ಸ್ಥಳೀಯ ವರ್ತಕ ಕುಸುಮಾಧರ– ರೂಪಶ್ರೀ ದಂಪತಿಯ ಮಕ್ಕಳು. ಸೋಮವಾರ ರಾತ್ರಿ 7.30ರ ಸುಮಾರಿಗೆ ಗುಡ್ಡ ಕುಸಿತ ಉಂಟಾಗಿದೆ. ಈ ವೇಳೆ ಕುಸುಮಾಧರ ಅವರ ಪತ್ನಿ ರೂಪಶ್ರೀ, ನಾಲ್ಕು ತಿಂಗಳ ಮಗುವನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿದ್ದರು. ಅವರ ಇನ್ನಿಬ್ಬರು ಮಕ್ಕಳಾದ ಶ್ರುತಿ ಹಾಗೂ ಜ್ಞಾನಶ್ರೀ ಮನೆಯಿಂದ ಹೊರಗೆ ಓಡಿ ಬರುವಷ್ಟರಲ್ಲಿ ಗುಡ್ಡ ಕುಸಿದಿತ್ತು. ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿದ್ದರು.

ಈ ಪ್ರದೇಶ ಜಲಾವೃತಗೊಂಡು ಪಂಜ– ಸುಬ್ರಹ್ಮಣ್ಯ ರಸ್ತೆಯ ಸಂಪರ್ಕ ಕಡಿತಗೊಂಡಿದ್ದರಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಈ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತದಿಂದ ಸಂಪೂರ್ಣ ಕತ್ತಲಾವರಿಸಿತ್ತು. ನೀರಿನ ಹರಿವು ಕಡಿಮೆಯಾದ ಬಳಿಕ ಜೆಸಿಬಿ ತರಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಿ ಮಣ್ಣನ್ನು ಸರಿಸುವಷ್ಟರಲ್ಲಿ ಮಕ್ಕಳಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಶ್ರುತಿ ಸುಬ್ರಹ್ಮಣ್ಯದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಹಾಗೂ ಜ್ಞಾನಶ್ರೀ ಕುಮಾರಸ್ವಾಮಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಮಕ್ಕಳಿಬ್ಬರು ಶಾಲೆಯಿಂದ ಮನೆಗೆ ಮರಳಿದ ಬಳಿಕ ಆಟವಾಡಿಕೊಂಡಿದ್ದರು.

ಕುಸುಮಾಧರ ಅವರು ಸರ್ಕಾರಿ ಆಸ್ಪತ್ರೆ ಬಳಿ ಅಂಗಡಿಯನ್ನು ಹೊಂದಿದ್ದಾರೆ. ಮನೆ ಗುಡ್ಡದ ಪಕ್ಕದಲ್ಲೇ ಇದೆ. ಮತ್ತೊಂದು ಮನೆಯನ್ನು ಕಟ್ಟುವ ಸಲುವಾಗಿ ಅವರು ಗುಡ್ಡದ ತಳಭಾಗವನ್ನು ಅಗೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT