ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್‌ ಪಡಿತರ ಚೀಟಿದಾರರಿಗೆ ಮತ್ತೆ ಸಕ್ಕರೆ, ಉಪ್ಪು, ತಾಳೆ ಎಣ್ಣೆ?

ಹೆಚ್ಚುವರಿ ₹ 1,328 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಆಕ್ಷೇಪ
Last Updated 28 ಜೂನ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಬಿಪಿಎಲ್‌ ಪಡಿತರ ಚೀಟಿದಾರರಿಗೆ ಅಕ್ಕಿ, ತೊಗರಿ ಬೇಳೆಯ ಜೊತೆಗೆ ತಲಾ ಒಂದು ಕಿಲೋ ಸಕ್ಕರೆ, ಅಯೋಡೈಸ್ಡ್‌ ಉಪ್ಪು ಮತ್ತು ತಾಳೆ ಎಣ್ಣೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತು, ಆಹಾರ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಂಡು, ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆರಂಭಿಸಿದ ‘ಅನ್ನ ಭಾಗ್ಯ’ ಯೋಜನೆಯಡಿ ಕಾರ್ಡ್‌ನಲ್ಲಿ ಹೆಸರಿರುವ ಒಬ್ಬರು ಸದಸ್ಯರಿಗೆ ತಲಾ 7 ಕಿಲೋ ಅಕ್ಕಿ ಮತ್ತು ಪ್ರತಿ ಕಾರ್ಡ್‌ಗೆ ತಲಾ ಒಂದು ಕಿಲೋ ತೊಗರಿ ಬೇಳೆ ವಿತರಿಸಲಾಗುತ್ತಿದೆ.

ಇಲಾಖೆಗೆ ಬಜೆಟ್‌ನಲ್ಲಿ ವಾರ್ಷಿಕ ₹ 3,800 ಕೋಟಿ ಮೀಸಲಿಡಲಾಗಿದೆ. ಸಕ್ಕರೆ, ಉಪ್ಪು, ತಾಳೆ ಎಣ್ಣೆ ಹಂಚಿಕೆ ಮಾಡಲು ಹೆಚ್ಚುವರಿಯಾಗಿ ₹ 1,328 ಕೋಟಿ ಅಗತ್ಯವಿದೆ. ವೆಚ್ಚ ಕಡಿತಕ್ಕೆ ಮುಂದಾಗಿರುವ ಆರ್ಥಿಕ ಇಲಾಖೆ, ಈ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಆದರೆ, 2017ರ ಏಪ್ರಿಲ್ ವರೆಗೆ ಕಾರ್ಡ್‌ನಲ್ಲಿರುವ ಹೆಸರಿರುವ ಒಬ್ಬರು ಸದಸ್ಯರಿಗೆ ತಲಾ 5 ಕಿಲೋ ಅಕ್ಕಿ ಜೊತೆಗೆ ಪ್ರತಿ ಕಾರ್ಡ್‌ಗೆ ತಲಾ 1 ಕಿಲೋದಂತೆ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ತಾಳೆ ಎಣ್ಣೆ ವಿತರಿಸಲಾಗುತ್ತಿತ್ತು. ಅದೇ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದರೆ ಹೆಚ್ಚುವರಿ ವೆಚ್ಚ ಅಗತ್ಯ ಇಲ್ಲ ಎಂಬ ಸಲಹೆಯನ್ನೂ ಆಹಾರ ಇಲಾಖೆ ನೀಡಿದೆ.

ಕಾರ್ಡ್‌ದಾರರರಿಗೆ ವಿತರಿಸುವ 7 ಕಿಲೋ ಅಕ್ಕಿಯಲ್ಲಿ 5 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ₹ 3ರ ದರದಲ್ಲಿ ಪೂರೈಕೆ ಮಾಡುತ್ತಿದೆ. ಹೆಚ್ಚುವರಿ 2 ಕಿಲೋ ಅಕ್ಕಿಯನ್ನು ₹ 26 ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರ ಖರೀದಿಸುತ್ತಿದೆ. ಇದಕ್ಕೆ ವಾರ್ಷಿಕ ₹ 2,184 ಕೋಟಿ ವೆಚ್ಚವಾಗುತ್ತಿದೆ. ಹೀಗಾಗಿ, 2 ಕಿಲೋ ಅಕ್ಕಿ ಕಡಿಮೆ ಮಾಡಿದರೆ ಸದ್ಯ ಇಲಾಖೆಗೆ ಮೀಸಲಿಟ್ಟ ಅನುದಾನದಲ್ಲೇ ರಾಜ್ಯದ ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ ಪೂರೈಸಲು ಅಗತ್ಯವಾದ ತಲಾ 13 ಸಾವಿರ ಟನ್‌ ಸಕ್ಕರೆ, ಉಪ್ಪು ಮತ್ತು ತಾಳೆ ಎಣ್ಣೆ ಖರೀದಿಸಬಹುದಾಗಿದೆ ಎಂದೂ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿದೆ.

‘ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುವ ಅಕ್ಕಿ ಹಂಚಿಕೆಯನ್ನು 5 ಕಿಲೋಗೆ ಇಳಿಸಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒಪ್ಪುವ ಸಾಧ್ಯತೆ ಇಲ್ಲ. ಆದರೆ, ಇತರ ವಸ್ತುಗಳ ಹಂಚಿಕೆಗೆ ಸಹಮತ ವ್ಯಕ್ತಪಡಿಸಬಹುದು. ಹೀಗಾಗಿ, ಆರ್ಥಿಕ ಇಲಾಖೆಯ ತೀರ್ಮಾನದ ಮೇಲೆ ಈ ಯೋಜನೆ ನಿಂತಿದೆ’ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೆಚ್ಚ ಕಡಿತಕ್ಕೆ ಸಲಹೆ

ಆಹಾರ, ಆರೋಗ್ಯ, ಕಂದಾಯ, ಸಾರಿಗೆ ಮತ್ತು ನೀರಾವರಿ ಇಲಾಖೆಗಳಲ್ಲಿ ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಕೆಲವು ಯೋಜನೆಗಳನ್ನು ಕೈ ಬಿಡುವಂತೆ ಆರ್ಥಿಕ ಇಲಾಖೆ ಸಲಹೆ ನೀಡಿದೆ. ಈ ಬಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವ ಸಿದ್ದರಾಮಯ್ಯ ಸರ್ಕಾರದ ಬಜೆಟ್‌ ಘೋಷಣೆಯ ವಿಷಯವನ್ನು ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಆದರೆ, ಹಣಕಾಸು ಇಲಾಖೆ ಅಧಿಕಾರಿಗಳು ಈ ಪ್ರಸ್ತಾವ ಕೈಬಿಡುವಂತೆ ಸಲಹೆ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಕೇಂದ್ರದಿಂದ ತೊಗರಿ ಬೇಳೆ ಹಂಚಿಕೆ

ಕೇಂದ್ರ ಸರ್ಕಾರ ದೇಶದಾದ್ಯಂತ ಬಿಪಿಎಲ್‌ ಕಾರ್ಡ್‌ದಾರರಿಗೆ (ಪ್ರತಿ ಸದಸ್ಯರಿಗೆ) ಅರ್ಧ ಕಿಲೋದಂತೆ ತೊಗರಿ ಬೇಳೆ ಹಂಚಿಕೆ ಯೋಜನೆಯನ್ನು ಸದ್ಯದಲ್ಲೇ ಘೋಷಿಸುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಖರೀದಿ ಕೇಂದ್ರಗಳ ಮೂಲಕ ಖರೀದಿಸಿದ ತೊಗರಿಬೇಳೆಯನ್ನು ಸಬ್ಸಿಡಿ ದರದಲ್ಲಿ ರಾಜ್ಯಗಳಿಗೆ ಪೂರೈಸುವ ಕುರಿತು ಮಾತುಕತೆ ಈಗಾಗಲೇ ಅಂತಿಮ ಹಂತಕ್ಕೆ ತಲುಪಿದೆ. ತೊಗರಿ ಬೆಳೆಯುವ ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌) ಆಹಾರ ಇಲಾಖೆ ಕಾರ್ಯದರ್ಶಿಗಳ ಜೊತೆ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿರುವ ಕೇಂದ್ರ ಸರ್ಕಾರ, ತೊಗರಿ ಇಳುವರಿ ಮತ್ತು ಸಾಗಣೆ ವೆಚ್ಚದ ಕುರಿತಂತೆ ಚರ್ಚೆ ನಡೆಸಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT