ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ವಾಣಿಜ್ಯ ಬಂದರಿನ 2ನೇ ಹಂತದ ವಿಸ್ತರಣೆ: ನಿರ್ಮಾಣ ಚಟುವಟಿಕೆಗೆ ತಡೆ

Last Updated 29 ಮಾರ್ಚ್ 2022, 19:40 IST
ಅಕ್ಷರ ಗಾತ್ರ

ನವದೆಹಲಿ: ಕಾರವಾರದ ವಾಣಿಜ್ಯ ಬಂದರಿನ 2ನೇ ಹಂತದ ವಿಸ್ತರಣಾ ಯೋಜನೆಗೆ ಸಂಬಂಧಿಸಿದ ನಿರ್ಮಾಣ ಚಟುವಟಿಕೆ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮೌಖಿಕ ತಡೆ ನೀಡಿದೆ.

ಬಂದರಿನ ವಿಸ್ತರಣಾ ಕಾಮಗಾರಿ ವಿರೋಧಿಸಿ ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ಮೇಲ್ಮನವಿ ಸಲ್ಲಿಸಿದೆ. ಮಂಗಳವಾರ ಈ ಅರ್ಜಿ ಕುರಿತು ಮೌಖಿಕ ಅವಲೋಕನ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರ್ಕಾರ ಮತ್ತಿತರರಿಗೆ ನೋಟಿಸ್ ಜಾರಿ ಮಾಡಿದೆ.

₹ 2,000 ಕೋಟಿ ವೆಚ್ಚದ ಈ ವಿಸ್ತರಣಾ ಕಾಮಗಾರಿಯ ವಿಳಂಬದಿಂದ ಯೋಜನೆಯ ವೆಚ್ಚ ಹೆಚ್ಚಲಿದೆ ಎಂದು ಡಿವಿಪಿ ಇನ್‌ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪರ ವಕೀಲ ಮಣಿಂದರ್ ಸಿಂಗ್ ಅವರ ವಾದವನ್ನು ತಳ್ಳಿ ಹಾಕಿದ ಪೀಠ, ಕಡಲ ತೀರದ ಪರಿಸರವನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಯೋಜನೆಗೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತಜ್ಞರ ಸಲಹಾ ಸಮಿತಿಯ (ಇಎಸಿ)ಯ ಶಿಫಾರಸಿನ ಮೇರೆಗೆ ಪೂರ್ವಭಾವಿ ಪರಿಸರ ಅನುಮತಿ ಪಡೆದು ಅವಕಾಶ ನೀಡಬೇಕಿದೆ. ಹಾಗಾಗಿ, ಯೋಜನೆಯನ್ನು ಸ್ಥಗಿತಗೊಳಿಸಿ ಯಥಾಸ್ಥಿತಿಗೆ ಆದೇಶಿಸಬೇಕು ಎಂಬ ಅರ್ಜಿದಾರರ ಮನವಿಗೆ ಸಮ್ಮತಿ ನೀಡಿರುವ ಪೀಠ, ಈ ಕುರಿತ ಪರಿಶೀಲನೆಗೆ ಒಪ್ಪಿಗೆ ಸೂಚಿಸಿದೆ.

ಕಾನೂನು ಬಾಹಿರ ಅನುಮತಿ


ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ತಿರಸ್ಕರಿಸಿ, 2021ರ ಜುಲೈ 29ರಂದು ರಾಜ್ಯ ಹೈಕೋರ್ಟ್‌ ನೀಡಿರುವ ತೀರ್ಪಿನ ಸಿಂಧುತ್ವವನ್ನು ಅರ್ಜಿದಾರರ ಪರ ವಕೀಲರಾದ ದೇವದತ್ತ ಕಾಮತ್ ಹಾಗೂ ಅಮಿತ್ ಪೈ ಅವರು ಮೇಲ್ಮನವಿಯಲ್ಲಿ ಪ್ರಶ್ನಿಸಿದ್ದಾರೆ.

2019ರ ಜನವರಿ 23ರಂದು ರಾಜ್ಯ ಮಟ್ಟದ ಅಧಿಕಾರಿಗಳಿಂದ ಪಡೆಯಲಾದ ಪರಿಸರ ಅನುಮತಿ ಸಹಾಯದೊಂದಿಗೆ ನಿರ್ಮಾಣ ಚಟುವಟಿಕೆ ಆರಂಭಿಸಲಾಗಿದೆ. ಇದು 2006ರ ಸೆಪ್ಟೆಂಬರ್ 14ರಂದು ಹೊರಡಿಸಲಾದ ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನ ಕುರಿತ ಅಧಿಸೂಚನೆಯನ್ನು ಉಲ್ಲಂಘಿಸಿದೆ ಎಂದೂ ಅರ್ಜಿಯಲ್ಲಿ ದೂರಲಾಗಿದೆ.

ಕಾರವಾರವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕರಾವಳಿ ಮತ್ತು ಕಡಲತೀರಗಳ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಮಹತ್ವವನ್ನು ಪರಿಗಣಿಸುವಲ್ಲಿ ಹೈಕೋರ್ಟ್ ವಿಫಲವಾಗಿದೆ. ವಾಣಿಜ್ಯ ಬಂದರಿನ 2ನೇ ಹಂತದ ವಿಸ್ತರಣೆಗೆ ರಾಜ್ಯ ಮಟ್ಟದ ಪ್ರಾಧಿಕಾರ ನೀಡಿರುವ ಪರಿಸರ ಅನುಮತಿಯು ಕಾನೂನು ಬಾಹಿರವಾಗಿದೆ ಎಂದು ಮೇಲ್ಮನವಿ ಪ್ರತಿಪಾದಿಸಿದೆ.

ಕಾರವಾರದ ವಾಣಿಜ್ಯ ಬಂದರಿನ 2ನೇ ಹಂತದ ವಿಸ್ತರಣಾ ಯೋಜನೆಯು ಕಡಲತೀರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಸಾರ್ವಜನಿಕರ ಹಕ್ಕನ್ನು ಕಿತ್ತುಕೊಳ್ಳಲಿದೆ ಎಂದೂ ಮೇಲ್ಮನವಿಯಲ್ಲಿ ಒತ್ತಿಹೇಳಲಾಗಿದೆ.

ಕಾರವಾರವನ್ನು 2011 ಮತ್ತು 2019ರ ಅಧಿಸೂಚನೆಗಳ ಪ್ರಕಾರ ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಪರಿಗಣಿಸಲಾಗಿದೆ. ಆದರೆ, ಹೈಕೋರ್ಟ್ ಆದೇಶವು ಈ ಪ್ರಕರಣದಲ್ಲಿ ಮೀನುಗಾರರ ಆಸ್ತಿಯ ಹಕ್ಕು ಹಾಗೂ ಜೀವನೋಪಾಯದ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಯೋಜನೆಯಿಂದ ಮೀನುಗಾರರ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ. ಸುಸ್ಥಿರ ಅಭಿವೃದ್ಧಿಯನ್ನು ಮಾತ್ರ ಉಲ್ಲೇಖಿಸಿದ್ದರೂ, ಯೋಜನೆಯಿಂದ ಪರಿಸರದ ಮೇಲಿನ ಉಂಟಾಗುವ ಪರಿಣಾಮವನ್ನು ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT