ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕ ಯತ್ನಾಳ–ಸಿಬಿಐ ಮಧ್ಯೆ ಹೊಂದಾಣಿಕೆ: ಅಡ್ವೊಕೇಟ್‌ ಜನರಲ್

ಡಿಕೆಶಿ ವಿರುದ್ಧದ ಸಿಬಿಐ ತನಿಖೆ: ಸಂಪುಟ ನಿರ್ಧಾರ ಪ್ರಶ್ನಿಸಿ ರಿಟ್‌
Published 6 ಡಿಸೆಂಬರ್ 2023, 14:59 IST
Last Updated 6 ಡಿಸೆಂಬರ್ 2023, 14:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಸಿಬಿಐ ನಡುವೆ ವ್ಯವಸ್ಥಿತ ಹೊಂದಾಣಿಕೆ ಏರ್ಪಟ್ಟಿದೆ‘ ಎಂದು ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಹೈಕೋರ್ಟ್‌ಗೆ ಅರುಹಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸು ಪಡೆದ ಈಗಿನ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸಿ; ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಸಂಜೆ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ.ದಳವಾಯಿ, ‘ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ. ಆರೋಪಿಯು ಇದೇ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಇದೊಂದು ಕಳಂಕಿತ ನಿರ್ಧಾರ. ಈ ನಿರ್ಧಾರಕ್ಕೆ ತಡೆ ನೀಡಬೇಕು‘ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ ಶೆಟ್ಟಿ, ’ಈ ಅರ್ಜಿ ಸಲ್ಲಿಕೆಯ ಹಿಂದೆ ಸಿಬಿಐ ಮತ್ತು ಅರ್ಜಿದಾರರ ಮಧ್ಯೆ ಸೆಟ್‌–ಅಪ್‌ (ವ್ಯವಸ್ಥಿತ ಹೊಂದಾಣಿಕೆ) ಆಗಿದೆ‘ ಎಂದು ಆಕ್ಷೇಪಿಸಿದರು. ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಸೂಕ್ತ ಸಮಯದಲ್ಲಿ ನಾವು ನಮ್ಮ ನಿಲುವು ಪ್ರಕಟಿಸುತ್ತೇವೆ‘ ಎಂದರು.

ಅರ್ಜಿದಾರರ ಮನವಿ ಮೇಲೆ ಕಣ್ಣಾಡಿಸಿದ ನ್ಯಾಯಪೀಠ, ‘ನಿಮ್ಮ ಮನವಿ ಕಾನೂನು ಬದ್ಧವಾಗಿರುವುದೇನೊ ನಿಜ. ಆದರೆ, ಇದನ್ನು ನೀವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯಾಪ್ತಿಯಲ್ಲಿ ಪ್ರಶ್ನಿಸಬಹುದಿತ್ತಲ್ಲವೇ‘ ಎಂದು ಪ್ರಶ್ನಿಸಿತು. ‘ಆದಾಗ್ಯೂ, ಇದರಲ್ಲಿ ನೀವು ಹೇಗೆ ಸಂತ್ರಸ್ತರಾಗುತ್ತೀರಿ, ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಲು ನಿಮಗೇನು ಅಧಿಕಾರವಿದೆ ಎಂಬುದನ್ನು ಕೋರ್ಟ್‌ಗೆ ಮನದಟ್ಟು ಮಾಡಿ‘ ಎಂದು ಸೂಚಿಸಿ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು.

ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ 2021ರ ಸೆಪ್ಟೆಂಬರ್ 25ರಂದು ಹೊರಡಿಸಿದ್ದ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ 2023ರ ನವೆಂಬರ್ 23ರಂದು ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಾಪಸು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT